ಗುಂಜಿಗಾಂವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವಾರ್ಷಿಕೋತ್ಸವ
ಅಥಣಿ 24: ಕರೋನಾದಂತಹ ಸಾಂಕ್ರಾಮಿಕ ರೋಗದ ಎರಡೂ ಅಲೆಗಳ ಸಂಕಷ್ಟದ ಸಮಯದಲ್ಲಿ ಗುಂಜಿಗಾಂವಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿದೆ ಎಂದು ಆಸ್ಪತ್ರೆ ವೈದ್ಯ ಡಾ.ಸಂಜೀವಕುಮಾರ ಗುಂಜೀಗಾಂವಿ ಹೇಳಿದರು.
ಅವರು ಗುಂಜಿಗಾಂವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ರೋಗಿಗಳಿಗೆ ಚಿಕಿತ್ಸೆ ನೀಡುವ ಮತ್ತು ಆಪರೇಷನ್ ಮಾಡುವ ಅನೇಕ ಸಂದರ್ಭಗಳಲ್ಲಿ ರಕ್ತಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಅಥಣಿ ರಕ್ತನಿಧಿ ಆಶ್ರಯದಲ್ಲಿ ರಕ್ತದಾನ ಆಯೋಜಿಸಲಾಗಿದೆ ಎಂದರು.
ಡಾ. ಆನಂದ ಗುಂಜಿಗಾಂವಿ ಮಾತನಾಡಿ, ಸಾರ್ವಜನಿಕರಲ್ಲಿ ರಕ್ತದಾನದ ಕರಿತಾಗಿ ಜಾಗೃತಿ ಮೂಡಿಸಲು ನಮ್ಮ ಆಸ್ಪತ್ರೆಯ ವಾರ್ಷಿಕೋತ್ಸವದ ಅಂಗವಾಗಿ ಶಿಬಿರ ಆಯೋಜಿಸಿದ್ದೇವೆ ಎಂದ ಅವರು ಅಥಣಿ ಹಾಗೂ ಸುತ್ತಮುತ್ತಲಿನ ರೋಗಿಗಳು ಸಾಮಾನ್ಯ ರೋಗಗಳ ಚಿಕಿತ್ಸೆಗಾಗಿಯೂ ಮಾಹಾರಾಷ್ಟ್ರಕ್ಕೆ ಅಥವಾ ಬೆಳಗಾವಿ, ವಿಜಯಪುರದಂತಹ ನಗರಗಳಿಗೆ ತೆರಳಬೇಕಿತ್ತು. ಈ ಕೊರತೆಯನ್ನು ನಮ್ಮ ಆಸ್ಪತ್ರೆ ನೀಗಿಸಿದೆ ಎಂದು ತಿಳಿಸಿದರು.
ಅಥಣಿ ರಕ್ತ ನಿಧಿಯ ಮೆಹಬೂಬ ಮುಜಾವರ ಮಾತನಾಡಿ, ಇನ್ನೂ ಹೆಚ್ಚು ಹೆಚ್ಚು ಜನ ರಕ್ತದಾನಕ್ಕೆ ಮುಂದಾಗಬೇಕಿದೆ. ನೀವು ದಾನವಾಗಿ ನೀಡಿರುವ ಅಮೂಲ್ಯ ರಕ್ತ ಅನೇಕರ ಜೀವ ಉಳಿಸುತ್ತದೆ ಎಂದರು.
ಡಾ.ಶೃತಿಸಾಯಿ ಗುಂಜಿಗಾಂವಿ, ಡಾ.ರೋಹಿಣಿ ಗುಂಜಿಗಾಂವಿ ಸೇರಿದಂತೆ ಗುಂಜಿಗಾಂವಿ ಆಸ್ಪತ್ರೆಯ ನರ್ಸಿಂಗ್ ಹಾಗೂ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.