ಕೆಜಿಎಫ್ 2: ‘ನೋ ಕಮೆಂಟ್ಸ್’ - ಅನಂತನಾಗ್, ಪ್ರಕಾಶ್ ರೈ ಹೊಸ ಪಾತ್ರ ಎಂದ ಪ್ರಶಾಂತ್ ನೀಲ್
ಬೆಂಗಳೂರು,
ಆಗುಸ್ಟ್ 27: ಬಹು ನಿರೀಕ್ಷಿತ ಕೆಜಿಎಫ್ 2 ಚಿತ್ರದಲ್ಲಿ ಪಾತ್ರ ಬದಲಾವಣೆಯಾಗಿರುವ ಬಗ್ಗೆ ಚಿತ್ರತಂಡ
ಅಧಿಕೃತ ಹೇಳಿಕೆಯನ್ನೇನೂ ನೀಡಿರಲಿಲ್ಲ. ಆದರೆ ಅನಂತನಾಗ್
ಪಾತ್ರಕ್ಕೆ ಪ್ರಕಾಶ್ ರೈ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯೊಂದಿಗೆ ಅವರನ್ನೊಳಗೊಂಡ ಚಿತ್ರೀಕರಣದ ಫೋಟೋಗಳು
ವೈರಲ್ ಆಗಿದ್ದವು.
ಹೀಗಾಗಿ ಚಿತ್ರತಂಡದಿಂದ ಅನಂತನಾಗ್ ಹೊರನಡೆದಿರುವುದು ವಿಧಿತವಾದರೂ, ನೇರವಾಗಿ ಅವರಿಂದಲೇ ಸ್ಪಷ್ಟೀಕರಣ ಪಡೆಯಲು ಕರೆ ಮಾಡಿದಾಗ ‘ನೋ ಕಮೆಂಟ್ಸ್’ ಎಂದಿದ್ದಾರೆ. ಕರೆ ಸ್ವೀಕರಿಸಿ ಮಾತನಾಡಿದ ಅವರ ದನಿಯಲ್ಲಿ ಖಚಿತತೆ ಇತ್ತು. ಸರಿಯಾದ ಕಾರಣಕ್ಕೆ ತಾವು ಹೊರಬಂದಿರುವುದು ಎಂಬ ಭಾವವಿತ್ತು. ಆದಾಗ್ಯೂ ಕಾರಣ ನೀಡಲು ಅವರೂ ಕೂಡ ನಿರಾಕರಿಸಿದ್ಧಾರೆ.
ಕೆಜೆಎಫ್ 2 ಚಿತ್ರದ ಅಂತಿಮ ಹಂತದ ಶೂಟಿಂಗ್ ನಡೆಯುತ್ತಿರುವ ಸಂದರ್ಭದಲ್ಲಿ ಅನಂತನಾಗ್ ಹೊರ ನಡೆದಿರುವುದೇಕೆ? ಯಾವ ಕಾರಣಕ್ಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಆದರೆ ಅನಂತನಾಗ್ ಪಾತ್ರಕ್ಕೆ ಪ್ರಕಾಶ್ ರೈ ಆಯ್ಕೆಯಾಗಿದೆ ಎಂಬ ಸುದ್ದಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಗರಂ ಆಗಿದ್ದಾರೆ. ಪ್ರಕಾಶ್ ರೈ ಬಿಟ್ಟು ಬೇರೆ ಯಾರೂ ಸಿಗಲಿಲ್ಲವೇ ಅಂತ ಖಂಡಿಸಿದ್ದಾರೆ.
ಜಾಲತಾಣಗಳಲ್ಲಿ ಟೀಕಾಪ್ರಹಾರ ಹೆಚ್ಚುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ನಿರ್ದೇಶಕ ಪ್ರಶಾಂತ್ ನೀಲ್, “ಪ್ರಕಾಶ್ ರೈ ಚಿತ್ರತಂಡಕ್ಕೆ ಆಯ್ಕೆಯಾಗಿರುವುದು ಅನಂತನಾಗ್ ಅವರ ಪಾತ್ರಕ್ಕಲ್ಲ. ಅವರದ್ದು ಹೊಸ ಪಾತ್ರ” ಎಂದು ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.
-:ನೆಟ್ಟಿಗರ ಅಸಮಾಧಾನ:-
ಚಿತ್ರತಂಡದಿಂದ ಅನಂತನಾಗ್ ಮಧ್ಯದಲ್ಲೇ ಹೊರ ನಡೆದಿದ್ದೇಕೆ ಎಂಬುದ ಬಗ್ಗೆ ಇನ್ನೂ ಸ್ಪಷ್ಟನೆಯನ್ನು ನಿರ್ದೇಶಕ ಅಥವಾ ನಿರ್ಮಾಪಕರು ನೀಡಿಲ್ಲ. ಅಲ್ಲದೆ, ಪ್ರಕಾಶ್ ರೈ ಸೇರ್ಪಡೆ ಬಹುತೇಕ ನೆಟ್ಟಿಗರಲ್ಲಿ ಅಸಮಾಧಾನ ತಂದಿದೆ. ಹೀಗಾಗಿ ಈ ಎಲ್ಲ ಬದಲವಾವಣೆ ಹಾಗೂ ಬೇಸರ ಕೆಜಿಎಫ್ 2 ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ಕಾದುನೋಡಬೇಕಿದೆ.
ಯುಎನ್‍ಐ ಎಸ್‍ಎ 1007