ರಾಷ್ಟ್ರೀಯ

ಅಂಬಾಲಾದಲ್ಲಿ 1857ರ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರ ಸ್ಮಾರಕ ಉದ್ಘಾಟಿಸಲಿರುವ ಅಮಿತ್ ಶಾ

ಅಂಬಾಲಾದಲ್ಲಿ 1857ರ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರ ಸ್ಮಾರಕ ಉದ್ಘಾಟಿಸಲಿರುವ ಅಮಿತ್ ಶಾ

ಅಂಬಾಲಾ, ಅ. 28 : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರಿಗೆ ಸಮರ್ಪಿತವಾದ 'ಆಜಾದಿ ಕಿ ಪೆಹ್ಲಿ ಲಡಾಯಿ ಕಾ ಶಹೀದ್ ಸ್ಮಾರಕ್' ಸ್ಮಾರಕವನ್ನು ನವೆಂಬರ್ 5ರಂದು ಹರಿಯಾಣದ ಅಂಬಾಲಾ ಕಂಟೋನ್ಮೆಂಟ್‌ನಲ್ಲಿ ಉದ್ಘಾಟಿಸಲಿದ್ದಾರೆ.

ಸುಮಾರು 22 ಎಕರೆ ಪ್ರದೇಶದಲ್ಲಿ 800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸ್ಮಾರಕವನ್ನು 1857ರ ಬಂಡಾಯದ ವೀರರಿಗೆ ಸಮರ್ಪಿಸಲಾದ ಏಷ್ಯಾದ ಅತಿದೊಡ್ಡ ಸ್ಮಾರಕವೆಂದು ಪರಿಗಣಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಆಡಳಿತಾವಧಿಯಲ್ಲಿ 2010ರಲ್ಲಿ ಈ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ, ಹಲವು ವರ್ಷಗಳ ಕಾಲ ಆಡಳಿತಾತ್ಮಕ ವಿಳಂಬದಿಂದಾಗಿ ಕಾಮಗಾರಿ ಮುಂದೂಡಲ್ಪಟ್ಟಿತ್ತು. 2014ರಲ್ಲಿ ಹರಿಯಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಯೋಜನೆಗೆ ವೇಗ ದೊರೆಯಿತು. ರಾಜ್ಯದ ಇಂಧನ ಸಚಿವ ಅನಿಲ್ ವಿಜ್ ಅವರು ಸ್ಮಾರಕ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಸ್ಮಾರಕ ಸಂಕೀರ್ಣದಲ್ಲಿ 23 ಆಧುನಿಕ ಗ್ಯಾಲರಿಗಳಿದ್ದು, ಅಂಬಾಲಾ, ಹರಿಯಾಣ, ಮೀರತ್, ದೆಹಲಿ, ಪಂಜಾಬ್, ಗುಜರಾತ್, ಝಾನ್ಸಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆದ 1857ರ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಇಲ್ಲಿ ಪ್ರದರ್ಶಿಸಲಾಗಿದೆ. 360 ಡಿಗ್ರಿ ಪ್ರೊಜೆಕ್ಷನ್ ವ್ಯವಸ್ಥೆ, ಧ್ವನಿ ಮತ್ತು ಲೇಸರ್ ಪ್ರದರ್ಶನಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ಕಣ್ಮುಂದೆ ಕಟ್ಟಿಕೊಡುವ ವ್ಯವಸ್ಥೆ ಮಾಡಲಾಗಿದೆ.

ದೇಶದ ವಿವಿಧ ಭಾಗಗಳ 700ಕ್ಕೂ ಹೆಚ್ಚು ಗುರುತಿಸಲಾದ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಸ್ಮಾರಕದಲ್ಲಿ ಗೌರವಿಸಲಾಗಿದೆ. ಅವರ ಹೆಸರು, ತಂದೆಯ ಹೆಸರು ಮತ್ತು ಗ್ರಾಮಗಳ ವಿವರಗಳನ್ನು ಚಿನ್ನದ ಅಕ್ಷರಗಳಲ್ಲಿ ಕೆತ್ತಲಾಗಿದೆ. ಐವರು ಖ್ಯಾತ ಇತಿಹಾಸಕಾರರ ತಂಡವು ಈ ಕುರಿತು ಸಂಶೋಧನೆ ನಡೆಸಿದ್ದು, ಲಂಡನ್ ಮತ್ತು ಲಾಹೋರ್‌ನ ಗ್ರಂಥಾಲಯಗಳು ಹಾಗೂ ಪುರಾತತ್ವ ಸಂಸ್ಥೆಗಳ ದಾಖಲೆಗಳನ್ನು ಬಳಸಿಕೊಂಡಿದೆ.

1857ರ ಮೇ 10ರಂದು ಮೀರತ್‌ನಲ್ಲಿ ಬಂಡಾಯ ಆರಂಭವಾಗುವುದಕ್ಕಿಂತ ಸುಮಾರು ಒಂಬತ್ತು ಗಂಟೆಗಳ ಮೊದಲೇ ಅಂಬಾಲಾದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭವಾಗಿತ್ತು ಎಂದು ಅನಿಲ್ ವಿಜ್ ಹೇಳಿದ್ದಾರೆ. ಬ್ರಿಟಿಷ್ ಆಡಳಿತದ ವಿರುದ್ಧ ನಡೆದ ರಾಷ್ಟ್ರವ್ಯಾಪಿ ಬಂಡಾಯದಲ್ಲಿ ಅಂಬಾಲಾದ ಮಹತ್ವದ ಪಾತ್ರವನ್ನು ಇದು ಎತ್ತಿ ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಸ್ಮಾರಕ ಸಂಕೀರ್ಣದಲ್ಲಿ 2,500 ಆಸನಗಳ ಬಯಲು ರಂಗಮಂದಿರ, 300 ಆಸನಗಳ ಸಭಾಂಗಣ ಮತ್ತು 63 ಮೀಟರ್ ಎತ್ತರದ ಕಮಲದ ಆಕಾರದ ಕಟ್ಟಡವಿದೆ. ಇದರ ಮೇಲ್ಭಾಗದಲ್ಲಿ ಸ್ಕೈ ಕೆಫೆ ನಿರ್ಮಿಸಲಾಗಿದೆ. ಅಲ್ಲದೆ, ಹೆಲಿಪ್ಯಾಡ್, ಎಂಟು ಸ್ಮರಣಿಕೆ ಮಳಿಗೆಗಳು ಹಾಗೂ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಸಂಪೂರ್ಣ ಸ್ಮಾರಕವನ್ನು ವೀಕ್ಷಿಸಲು ಪ್ರವಾಸಿಗರಿಗೆ ಸುಮಾರು ಆರು ಗಂಟೆಗಳ ಸಮಯ ಬೇಕಾಗಬಹುದು. ದೇಶದ ಎಲ್ಲ ರಾಜ್ಯಗಳ ಸಂಸ್ಥಾಪನಾ ದಿನಾಚರಣೆಗಳನ್ನು ಇಲ್ಲಿ ಆಯೋಜಿಸಲು ಆಹ್ವಾನ ನೀಡಲಾಗಿದ್ದು, ಪ್ರಾದೇಶಿಕ ಇತಿಹಾಸ ಮತ್ತು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ನಡುವಿನ ಸಂಬಂಧವನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ.

ಇದು ಕೇವಲ ಅಂಬಾಲಾ ಅಥವಾ ಹರಿಯಾಣಕ್ಕೆ ಸೀಮಿತವಾದ ಸ್ಮಾರಕವಲ್ಲ, ಇಡೀ ದೇಶದ ರಾಷ್ಟ್ರೀಯ ಸ್ಮಾರಕವಾಗಿದೆ ಎಂದು ಅನಿಲ್ ವಿಜ್ ಹೇಳಿದ್ದಾರೆ. 1857ರ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರ ತ್ಯಾಗ ಮತ್ತು ಬಲಿದಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಈ ಸ್ಮಾರಕ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿ ಓದಿ