ಶ್ರೀಮಠದ ಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳ ಅಂಬಾರಿ ಉತ್ಸವ
ರಾಣಿಬೆನ್ನೂರ:9 ಆರೂಢ ಪರಂಪರೆಯ ಮಠಗಳು ಜಾತಿಯ ಸೊಂಕಿಲ್ಲದೆ ನಾಡಿನ ಸರ್ವಧರ್ಮ ಸಮಾಜದ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವುದರ ಜೊತೆಗೆ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳಸುವಲ್ಲಿ ಶ್ರಮಿಸುತ್ತಿವೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಸೋಮವಾರ ತಾಲೂಕಿನ ಐರಣಿ ಹೊಳೆಮಠದಲ್ಲಿ ಮುಪ್ಪಿನಾರ್ಯ ಮಹಾತ್ಮಾಜಿಯವರ 40ನೇ ಪುಣ್ಯಾರಾಧನೆ ಹಾಗೂ ಶ್ರೀಮಠದ ಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳವರ ಅಂಬಾರಿ ಉತ್ಸವ, ತುಲಾಭಾರ, ರಥೋತ್ಸವ, ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹುಬ್ಬಳ್ಳಿಯ ಸಿದ್ಧಾರೂಢರ ಪರಮ ಶಿಷ್ಯರಾದ ಮುಪ್ಪಿನಾರ್ಯರು ಈ ಕ್ಷೇತ್ರವನ್ನು ಪುಣ್ಯಮಯ ಕ್ಷೇತ್ರವನ್ನಾಗಿ ಮಾಡಿದ್ದಾರೆ, ಎಲ್ಲ ನದಿಗಳು ಸಮುದ್ರವನ್ನು ಸೇರುವಂತೆ ಎಲ್ಲಾ ಮಠಗಳ ಉದ್ದೇಶ ಜನರನ್ನು ಮುಕ್ತಿ ಮಾರ್ಗದೆಡೆಗೆ ಕೊಂಡೊಯ್ಯುವುದೇ ಆಗಿದೆ ಎಂದರು.
ಹುಬ್ಬಳ್ಳಿ ಸಿದ್ಧಾರೂಢ ಮಠದ ಧರ್ಮದರ್ಶಿ ಶಾಮಾನಂದ ಪೂಜಾರಿ ಮಾತನಾಡಿ, 12ನೇಯ ಶತಮಾನದಲ್ಲಿ ಬಸವಣ್ಣನವರು ಸಮಾನತೆಗಾಗಿ ಶ್ರಮಿಸುವ ಜೊತೆಗೆ ಕ್ರಾಂತಿಯನ್ನೆ ಮಾಡಿದರು. ಆದರೆ ಸಿದ್ಧಾರೂಢರು ಶಾಂತಿಯುತವಾಗಿ ನಡೆ ಮತ್ತು ನುಡಿಯಲ್ಲಿ ಒಂದಾಗಿ ತೋರಿಸಿದವರು. ಅವರಲ್ಲಿ ಜಾತಿ ಸೊಂಕಿರಲಿಲ್ಲ, ಮಾನವ ಧರ್ಮಕ್ಕೆ ಜಯವಾಗಿಲಿ ಎಂದು ಘೋಷಾವಾಕ್ಯವನ್ನು ಅಳವಡಿಸಿಕೊಂಡವರು ಪೀಠಕ್ಕೆ ಜ್ಯಾನಿಯಾದ ಪುರುಷರನ್ನು ಜಾತಿಯ ಸೊಂಕಿಲ್ಲದೆ ನೇಮಕ ಮಾಡಿದರೆ ಧರ್ಮಕ್ಕೆ ಜಯವಾಗಲಿದೆ ಇದೇ ನಿಜವಾದ ಮಾನವ ಧರ್ಮವಾಗಿದೆ ಎಂದರು.
ಶ್ರೀಮಠದ ಬಸವರಾಜ ದೇಶಿಕೇಂದ್ರ ಸ್ವಾಮಿಜಿ ಮಾತನಾಡಿ, ಮನಷ್ಯ ರೂಪದಿಂದ ಜನ್ಮ ತಾಳಿರುವ ಪ್ರತಿಯೊಬ್ಬ ವ್ಯಕ್ತಿಯಲ್ಲಡಗಿರುವ ಅಜ್ಞಾನವನ್ನು ಹೊಡೆದೋಡಿಸಿ ಸುಜ್ಞಾನದಡೆಗೆ ಕೊಂಡೊಯ್ಯುವ ಇಂತಹ ಸತ್ಸಂಗದಲ್ಲಿ ಭಾಗಿಗಳಾಗಿ ಮುಕ್ತಿ ದಾರಿ ಪಡೆಯಿರಿ ಎಂದು ನುಡಿದರು.
ಸಾನಿಧ್ಯ ವಹಿಸಿದ್ದ ಹದಡಿ ಚಂದ್ರಗಿರಿ ಮಠದ ಮುರಳಿಧರ ಸ್ವಾಮಿಜಿ, ದಾವಣಗೇರಿಯ ಜಡಿ ಸಿದ್ದೇಶ್ವರ ಆಶ್ರಮದ ಶಿವಾನಂದ ಶ್ರೀಗಳು, ಕುಳ್ಳೂರಿನ ಸಿದ್ಧಾರೂಢ ಮಠದ ಬಸವಾನಂದ ಭಾರತಿ ಸ್ವಾಮಿಗಳು, ಚಿಕ್ಕೋಡಿಯ ಜೋಡಕುರಳಿ ಸಿದ್ದೂರೂಢ ಮಠದ ಚಿದ್ಘಾನಾನಂದ ಭಾರತಿ ಶ್ರೀಗಳು, ಪೋತನಹಳ್ಳಿಯ ಶಂಕರಾನಂದ ಸ್ವಾಮಿಜಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಸಾಮೂಹಿಕ ವಿವಾಹದಲ್ಲಿ 2 ಜೋಡಿ ನವದಂಪತಿಗಳು ಗೃಹಸ್ಥಾಶ್ರಮಕ್ಕೆ ಪಾದಾರೆ್ಣ ಮಾಡಿದರು.
ಶ್ರೀಮಠದ ಉತ್ತರಾಧಿಕಾರಿ ಬಾಲಸಿದ್ಧಾರೂಢ, ಹುಬ್ಬಳ್ಳಿ ಸಿದ್ಧಾರೂಢ ಮಠದ ಛೇರಮನ್ ಬಸವರಾಜ ಕಲ್ಯಾಣಶೆಟ್ಟರ, ಧರ್ಮದರ್ಶಿ ಸಿದ್ದನಗೌಡ ಪಾಟೀಲ. ಸತೀಶಗೌಡ ಮಲ್ಲನಗೌಡ್ರ ಮತ್ತಿತರರು ಉಪಸ್ಥಿತರಿದ್ದರು. ಶ್ರೀಮಠದ ಕಾರ್ಯದರ್ಶಿ ಬಾಬಣ್ಣ ಶೆಟ್ಟರ ಕಾರ್ಯಕ್ರಮ ನಿರ್ವಹಿಸಿದರು.