ಎಸ್ಎಸ್ಎಲ್ ಸಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ
ಲೋಕದರ್ಶನ ವರದಿ
ಶೇಡಬಾಳ 23: ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯದಲ್ಲಿ 1996-97 ನೇ ಸಾಲಿನ ರಜತ ಮಹೋತ್ಸವದ ಅಂಗವಾಗಿ ಎಸ್ಎಸ್ಎಲ್ ಸಿಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸುಮಧುರ ಸ್ನೇಹ ಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ರವಿವಾರ ದಿ. 22 ರಂದು ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯದ ಸಭಾಂಗಣದಲ್ಲಿ ಈ ಕಾರ್ಯಕ್ರಮ ಜರುಗಿತು. ಬಾಲ್ಯದಲ್ಲಿ ಆಟ, ಪಾಠದ ಜತೆಗೆ ತುಂಟಾಟ ಮಾಡಿದವರೆಲ್ಲ 25 ವರ್ಷಗಳ ನಂತರ ಒಂದೆಡೆ ಸೇರಿ ಸಂತೋಷ ಪಟ್ಟು ಸಂಭ್ರಮಿಸಿದರು. ತಮಗೆ ಪಾಠ ಮಾಡಿದ ಗುರುಗಳ ಪಾದಪೂಜೆ ಮಾಡಿ ಗುರುವಂದನೆ ಗೈದರು.
1 ರಿಂದ 10 ನೇ ವರ್ಗ ದವರೆಗೆ ಪಾಠ ಕಲಿಸಿ ತಮ್ಮನ್ನು ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿದ ಗುರುಗಳಾದ ಎಂ.ಎ.ಗಣೆ, ಬಿ.ಜೆ ಕುರುಂದವಾಡೆ, ಬಿ.ಬಿ.ಪಾಟೀಲ, ಬಿ ಆರ್ ಜಠಾರ್, ಎಸ್.ಬಿ. ಇರಾಜ, ಎಂ.ಕೆ.ಕಾಂಬಳೆ, ಎಂ.ಎನ್.ಕಾಳೇನಟ್ಟಿ, ಎಸ್.ಆರ್.ಪೂಜಾರ, ಜಿ.ಎನ್.ಮುರಗುಂಡಿ, ಟಿ ಎಮ್ ಪರುತಗಲ್ಲೆ, ಬಿ ಪಿ ಗೌಡಪ್ಪನವರ್, ಬಾಬಾಸಾಬ ಕಾಂಬಳೆ, ಅಕ್ಕಾತಾಯಿ ಮುಜಾವರ, ಹೇಮಾವತಿ ಬಿದರಿ, ಎ.ಎಚ್.ಬಿದರಿ, ಪಿ.ಎಂ.ಕಂದಾರೆ, ಸದಾಶಿವ ಬಾಡಕರ, ಶ್ರೀಪತಿ ತಳವಾರ, ಭಾಸ್ಕರ ಬಡಿಗೇರ, ಆರ್.ಡಿ.ಬುಲಾಕೆ, ಸದಾನಂದ ದತ್ತವಾಡಕರ, ಶಂಕರ ಕುಂಬಾರ, ಎಂ.ಡಿ.ಅಲಾಸೆ ಮುಂತಾದ ಗುರುಗಳನ್ನು ಶಾಲು ಹೊದಿಸಿ ನೆನೆಪಿನ ಕಾಣಿಕೆ ನೀಡಿ ಸತ್ಕರಿಸಿ ಸನ್ಮಾನಿಸಿ ಸಂಭ್ರಮಿಸಿದರು.
ಸಮಾರಂಭ ಸ್ಥಳಕ್ಕೆ ತಮ್ಮ ನೆಚ್ಚಿನ ಗುರುಗಳು ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಪುಷ್ಪವೃಷ್ಠಿಗೈದು ವೇದಿಕೆಗೆ ಗುರುಗಳನ್ನು ಆದರದಿಂದ ಬರಮಾಡಿಕೊಂಡರು.
ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು ನೀಡಿದ ಸತ್ಕಾರ ಸ್ವೀಕರಿಸಿ ಶಿಕ್ಷಕ ಎಂ.ಎ.ಗಣೆ, ಬಿ.ಆರ್.ಜಠಾರ್, ಎ.ಎಚ್.ಬಿದರಿ, ಎಂ.ಎನ್.ಕಾಳೇನಟ್ಟಿ, ಪಿ.ಎಂ.ಕಂದಾರೆ ಮೊದಲಾದವರು ಆ ಸಮಯದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮಾಡಿದ ತುಂಟಾಟ, ಹರಟೆ, ಆಟ, ಪಾಠ, ಅಭ್ಯಾಸ ಕುರಿತು ವಿವರವಾಗಿ ಮಾತನಾಡುತ್ತಾ ತಮ್ಮ ಹಳೆಯ ವಿದ್ಯಾರ್ಥಿಗಳನ್ನು 25 ವರ್ಷಗಳ ಹಿಂದೆ ಕೊಂಡೊಯ್ದರು.
ಅನೇಕ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡು ಮಾತನಾಡಿದರು. ಕಾರ್ಯಕ್ರಮದ ನಂತರ ಎಲ್ಲರು ಸೇರಿ ಸಿಹಿ ಭೋಜನ ಸವಿದರು.
ಅಣ್ಣಾಸಾಬ ಸಾಬಣ್ಣವರ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.