ಓದುವುದರ ಜೊತೆಗೆ ಉತ್ತಮ ಸಂಸ್ಕಾರ ರೂಢಿಸಿಕೊಳ್ಳಬೇಕು : ಶಿವರಾಯ ಪ್ರಭು
ರಾಣೇಬೆನ್ನೂರ 07 : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿದೆ ಮಕ್ಕಳು ಅದರ ಸದುಪಯೋಗವನ್ನು ಪಡೆದುಕೊಂಡು ಮುನ್ನಡೆದಾಗ ಶಿಕ್ಷಣಕ್ಷೇತ್ರದಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಆಶ್ರಯದಲ್ಲಿ ಬುಧವಾರದಂದು ನಗರದ ಯೋಜನಾ ಕಛೇರಿಯಲ್ಲಿ ನಡೆದ ಸುಜ್ಞಾನ ನಿಧಿ ಶಿಷ್ಯ ವೇತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಿಸಿ ಅವರು ಮಾತನಾಡಿದರು. ಗ್ರಾಮಾಭಿವೃದ್ಧಿ ಯೋಜನೆಯಿಂದ ದೇವಸ್ಥಾನ ಜೀರ್ಣೋದ್ಧಾರ, ಕೆರೆಗಳ ಪುನಶ್ಚೇತನ, ಶಾಲೆಗಳಲ್ಲಿ ಶಿಕ್ಷಕರ ನಿಯೋಜನೆ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯದಲ್ಲಿ ತೊಡಗುತ್ತ ಬಂದಿದೆ ಎಂದು ವಿವರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಮಾತನಾಡಿ, ಧಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು, ಶಾಲೆಗಳಿಗೆ ಶಿಕ್ಷಕರ ನಿಯೋಜನೆ, ಮತ್ತು ಡೆಸ್ಕ್ ಟೇಬಲ್ ಸೇರಿದಂತೆ ಹಲವಾರು ಪೀಠೋಪಕರಣಗಳು ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಂಡು ಮುನ್ನಡೆದಾಗ ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯ ಎಂದರು.
ಯೋಜನಾಧಿಕಾರಿ ಮಂಜುನಾಥ ಎಂ ಮಾತನಾಡಿ, ಮಕ್ಕಳು ಕೇವಲ ಅಂಕ ಗಳಿಸುವುದಷ್ಟೇಯಲ್ಲದೆ ಓದುವುದರ ಜೊತೆಗೆ ಉತ್ತಮ ಸಂಸ್ಕಾರ, ಗುರು ಹಿರಿಯರನ್ನು ಗೌರವಿಸುವ ತಂದೆ ತಾಯಿಯನ್ನು ಪೂಜಿಸುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು ಅಂದಾಗ ಸಮಾಜದಲ್ಲ ತಾವು ಪ್ರಜ್ವಲಿಸಲು ಸಾಧ್ಯ ಎಂದರು. ಒಟ್ಟು 140 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನವನ್ನು ನೀಡಲಾಯಿತು. ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಮಂಜುನಾಥ, ಕೃಷಿ ಅಧಿಕಾರಿ ದೇವರಾಜ ಹೆಚ್, ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂಧಿವರ್ಗದವರು, ಪಾಲಕರು ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.