ರಾಣೆಬೆನ್ನೂರ

ಪ್ರತಿ ಮಗುವಿನ ಕಲಿಕಾ ಬಲವರ್ಧನೆಗೆ ಎಲ್ಲಾ ಶಿಕ್ಷಕರು ಮುಂದಾಗಬೇಕು :ಸುರೇಶ ಹುಗ್ಗಿ

ಪ್ರತಿ ಮಗುವಿನ ಕಲಿಕಾ  ಬಲವರ್ಧನೆಗೆ  ಎಲ್ಲಾ ಶಿಕ್ಷಕರು ಮುಂದಾಗಬೇಕು  :ಸುರೇಶ ಹುಗ್ಗಿ

ರಾಣಿಬೆನ್ನೂರು 29:  2024-25 ನೆಯ ಶೈಕ್ಷಣಿಕ ವರ್ಷವನ್ನು "ಶೈಕ್ಷಣಿಕ ಬಲವರ್ಧನೆ ವರ್ಷ" ಎಂದು ಸರ್ಕಾರ  ಘೋಷಣೆ ಮಾಡಿದೆ, ಪ್ರಸ್ತುತ ಸನ್ನಿವೇಶದಲ್ಲಿ ಬದಲಾಗುತ್ತಿರುವ ಶೈಕ್ಷಣಿಕ ಅವಶ್ಯಗಳು ಮತ್ತು ತಂತ್ರಜ್ಞಾನ ಆಧಾರಿತ ಕಲಿಕೆಯನ್ನು ಹೊಂದಾಣಿಕೆ ಮಾಡಿಕೊಂಡು ಪ್ರತಿ ಮಗುವಿನ ಕಲಿಕಾ  ಬಲವರ್ಧನೆಗೆ  ಎಲ್ಲಾ ಶಿಕ್ಷಕರು ಮುಂದಾಗಬೇಕು ಎಂದು ಹಾವೇರಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ  ಉಪನಿರ್ದೇಶಕ ಸುರೇಶ ಹುಗ್ಗಿ ಹೇಳಿದರು. 

ನಗರದ ಚರ್ಚ ರಸ್ತೆಯ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ ಸಭಾಭವನದಲ್ಲಿ ಸೋಮವಾರ 2024-25 ಸಾಲಿನ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವ ಕುರಿತು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ  ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮೇ. 29 ರಿಂದ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದು ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾಯೋಜನೆ, ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ವಾರ್ಷಿಕ ಶೈಕ್ಷಣಿಕ ಕ್ರಿಯಾ ಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ಇಲಾಖೆ ಮಕ್ಕಳ ಸಂಖ್ಯೆಗನುಣವಾಗಿ ಅನುದಾನ ಬಿಡುಗಡೆ ಮಾಡಿದೆ. ಅನುದಾನ ಸದ್ಬಳಕೆಯಾಗಬೇಕು. ಎಸ್‌ಡಿಎಂಸಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕುಂಡು ಸಭೆ ಮಾಡಿ, ಠರಾವು ಮಾಡಿ ಪುಸ್ತಕದಲ್ಲಿ ಬರೆದ ಸಾಮಗ್ರಿಗಳನ್ನು ಖರೀದಿಸಬೇಕು ಎಂದರು.   

ಶೈಕ್ಷಣಿಕ ಗುಣಮಟ್ಟ ಎತ್ತರಕ್ಕೆ ಬರಲು ಎಲ್ಲರೂ ಸಹಕರಿಸಬೇಕು. ಈ ವರ್ಷ 1 ನೇ ತರಗತಿ ಪ್ರವೇಶಕ್ಕೆ 5 ವರ್ಷ 5 ತಿಂಗಳು ಇರಬೇಕು. ಹಾಜರಾತಿ ಮತ್ತು ದಾಖಲಾತಿ ಬಗ್ಗೆ ಹೆಚ್ಚು ಗಮನಹರಿಸಬೇಕು. ಪಠ್ಯಪುಸ್ತಕ, ಸಮವಸ್ತ್ರಗಳನ್ನು ವಿತರಿಸಿ ಯುಡೈಸ್‌ನಲ್ಲಿ ಅಪ್ ಲೋಡ್ ಮಾಡಬೇಕು.  ತಂಬಾಕು ಮುಕ್ತ ವಾತಾರವಣ ಇರಬೇಕು. ಶಿಕ್ಷಕರು ತಪ್ಪದೇ ಪಿಎಂಜೆಎಸ್‌ವೈ ವಿಮೆ ಮಾಡಿಸಬೇಕು ಎಂದರು.  

ಹಳೇ ವಿದ್ಯಾರ್ಥಿಗಳ ಸಂಘವನ್ನು ಪುನಶ್ಚೇತನಗೊಳಿಸಬೇಕು. ಅವರಿಂದ ಶಾಲೆಯ ಮೂಲ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮಕೈಗೊಳ್ಳಬೇಕು. ಹಾಜರಾತಿ ಹೆಚ್ಚಿಸಲು ಇಲಾಖೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ನಲಿ ಕಲಿ ವ್ಯವಸ್ಥೆ ಕಲಿಕೆಯನ್ನು ಗಟ್ಟಿಗೊಳಿಸಲು ಮುಂದಾಗಿದೆ. 1 ರಿಂದ 3 ನೇ ತರಗತಿ ವೈಭವ ನೋಡುವಂತಾಗಬೇಕು. ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ವಾರ್ಷಿಕ ಕಾರ್ಯಸೂಚಿಯನ್ನು ನಿಗಧಿಪಡಿಸಲಾಗಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಲು ಮುಖ್ಯ ಶಿಕ್ಷಕರಿಗೆ ಸೂಚಿಸಿದರು. 

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಗೀರೀಶ ಪದಕಿ ಮಾತನಾಡಿ, ಈ ವರ್ಷದ ಶೈಕ್ಷಣಿಕ ಅವಧಿಯು ಇದೇ ಮೇ. 29 ರಿಂದ ಆರಂಭವಾಗಲಿದ್ದು, 31 ರಂದು ಏಕಕಾಲಕ್ಕೆ ಶಾಲಾ ಪ್ರಾರಭೋತ್ಸವ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರು ಸಕಲ ಸಿದ್ದತೆ ಮಾಡಿಕೊಳ್ಳಬೇಕು. ಶಾಲೆಗಳಿಗೆ ತಳಿರು ತೋರಣ ಕಟ್ಟಿ ಶೃಂಗರಿಸಿ ಮಕ್ಕಳಿಗೆ ಹಬ್ಬದ ವಾತಾರಣ ಸೃಷ್ಟಿಸಬೇಕು. ಸಿಹಿ ಭೋಜನ ಬಡಿಸಿ ಅಂದಿನಿಂದಲೇ ತರಗತಿ ಆರಂಭಿಸಬೇಕು ಎಂದರು. 

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಲಿಂಗರಾಜ ಸುತ್ತಕೋಟಿ ಮಾತನಾಡಿ, ಅಡುಗೆಯವರ ನೇಮಕಾತಿ, ಸ್ವಚ್ಚತೆ ಶುಚಿರುಚಿ ಆಹಾರ ತಯಾರಿಕೆ, ಧಾನ್ಯಗಳ ಸ್ವಚ್ಚತೆ ಇತ್ಯಾದಿ ಅಂಶಗಳ ಕುರಿತು ತಿಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎಸ್‌. ಚೆಲ್ಲಾಳ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಹೆಚ್ ಪಾಟೀಲ ಶೈಕ್ಷಣಿಕ ವರ್ಷದ ಪ್ರಾರಂಭದ ಕುರಿತು ಮಾರ್ಗದರ್ಶನ ನೀಡಿದರು. 

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಶ್ಯಾಮ ಸುಂದರ ಅಡಿ,  ಬಿಆರ್‌ಸಿ ಸಮನ್ವಯಾಧಿಕಾರಿ ಮಂಜ ನಾಯ್ಕ,  ತಾಲ್ಲೂಕು ಸಂಘದ ಅಧ್ಯಕ್ಷಿಣಿ ಸರೋಜಿನಿ ಭರಮಗೌಡ್ರ, ಇಸಿಓ ಸುನೀತಾ ಡಿ.ಬಿ, ರಾಜೇಶ ಮುದ್ದಿ, ಗಂಗಪ್ಪ ನಾಯಕ, ಸಹಕಾರಿ ಸಂಘದ ಅಧ್ಯಕ್ಷ ಎನ್‌.ಎಸ್‌. ರಾಮನಗೌಡ್ರ, ಬಿ.ಪಿ .ಶಿಡೇನೂರ, ಜಗದೀಶ ಕೃಷ್ಟಪ್ಪನವರ, ಎನ್‌.ಎನ್‌. ಅಣ್ಣೇರ, ಎಚ್‌.ಎಂ. ಸುತಾರ, ಎಸ್‌.ಹೆಚ್ ಮೇಟಿ, ಎಸ್‌.ಎಂ. ಬಡಗಿ, ಕೆ.ವ್ಹಿ. ಕಾಟಣ್ಣನವರ, ವಿ.ಎಚ್‌. ಕೆಂಚ ರೆಡ್ಡಿ, ಮಾರುತಿ ಲಮಾಣಿ, ಸುರೇಶ ರೆಡ್ಡಿ, ಎಂ. ಎ. ತಾಸೇವಾಲಿ   ಇದ್ದರು. 


ಸುದ್ದಿ ಓದಿ