ಅಕ್ಕಮಹಾದೇವಿ ಜಯಂತಿ ಉತ್ಸವ ಆಚರಣೆ
ಲೋಕದರ್ಶನ ವರದಿ
ಗೋಕಾಕ: ಹಣ ಸಂಪಾದನೆಯ ಹಿಂದೆ ಬಿದ್ದ ಮನುಷ್ಯ ಸಮಯದ ಬೆಲೆಯನ್ನು ಅರಿಯದೇ ನೆಮ್ಮದಿ ರಹಿತ ಜೀವನ ಶೈಲಿಗೆ ಮಾರು ಹೋಗಿರುವುದು ಇಂದಿನ ಡಾಂಭಿಕ ಜೀವನ ಶೈಲಿಯಿಂದ ಬಹಿರಂಗಗೊಂಡಿದೆ ಎಂದು ಬೈಲಹೊಂಗಲದ ಪ್ರೇಮಾ ಅಂಗಡಿ ವಿಷಾಧ ವ್ಯಕ್ತಪಡಿಸಿದರು.
ಭಾನುವಾರ ಇಲ್ಲಿನ ಸಮುದಾಯ ಭವನ ಹಿಂಬದಿಯ ಬಸನಗೌಡ ಪಾಟೀಲ ಅವರ ನಿವಾಸದಲ್ಲಿ ಗೋಕಾಕ ತಾಲ್ಲೂಕು ಬಣಜಿಗರ ಕ್ಷೇಮಾಭಿವೃದ್ಧಿ ಸಂಘಧ ಮಹಿಳಾ ಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾತೆ ಅಕ್ಕಮಹಾದೇವಿ ಜಯಂತಿ ಉತ್ಸವ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ತನ್ನ ಜೀವನದ ಬೆಲೆಯನ್ನು ತಾನೇ ಗುರ್ತಿಸಲಾಗದೇ ನೆಮ್ಮದಿಯನ್ನು ಅರಸಿದರೆ ಅದು ಸಿಗುವುದುಂಟೇ ಎಂದು ಅಕ್ಕಮಹಾದೇವಿಯ ವಚನಗಳನ್ನು ಮೆಲಕು ಹಾಕಿದರು.
800 ವರ್ಷಗಳಿಗೂ ಪೂರ್ವದಲ್ಲಿ ವಚನ ಸಾಹಿತ್ಯವನ್ನು ಹುಟ್ಟುಹಾಕಿದ ಮಾತೆ ಅಕ್ಕಮಹಾದೇವಿಯ ಕುರಿತಾದ ಪುಸ್ತಕ, ಗ್ರಂಥಗಳನ್ನು ಇಂದಿನ ಪ್ರತಿಯೊಬ್ಬ ಗೃಹಿಣಿಯೂ ಅಧ್ಯಯನ ಮಾಡಿದಾಗ ನಿಜ ಜೀವನದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ವಚನ ಸಾಹಿತ್ಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಕೆಯಲ್ಲಿ ಅಧ್ಯಕ್ಷತೆಯನ್ನು ಗೋಕಾಕ ತಾಲ್ಲೂಕು ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಕುರಬೇಟ ವಹಿಸಿದ್ದರು.
ಸಾನಿಧ್ಯ ವಹಿಸಿದ್ದ ಶೂನ್ಯ ಸಂಪಾದನಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಅಶೀರ್ವಚನ ನೀಡಿದರು.
ಶೈಲಾ ಬಿದರಿ ಸ್ವಾಗತಿಸಿದರು. ಧನಲಕ್ಷ್ಮೀ ಜೋಡಟ್ಟಿ ಪ್ರಾರ್ಥಿಸಿದರು. ಜ್ಯೋತಿ ಬಿದರಿ ಪರಿಚಯಿಸಿದರು. ಪದ್ಮಾ ಕೌಜಲಗಿ ಪ್ರಾಸ್ತಾವಿಕ ಮಾತನಾಡಿದರು. ದೀಪಾ ಬೆಲ್ಲದ ನಿರೂಪಿಸಿದರು. ರೇಖಾ ಅಂಗಡಿ ವಂದಿಸಿದರು.