ಧಾರವಾಡ - ಹುಬ್ಬಳ್ಳಿ

ಹಿಂಗಾರಿನಲ್ಲಿ ಕೃಷಿ ತೋಟಗಾರಿಕೆ ಪ್ರದೇಶ ಬೆಳೆ ಹಾನಿ: ಡಿಸಿ ದಿವ್ಯ ಪ್ರಭು

ಹಿಂಗಾರಿನಲ್ಲಿ ಕೃಷಿ  ತೋಟಗಾರಿಕೆ  ಪ್ರದೇಶ ಬೆಳೆ ಹಾನಿ: ಡಿಸಿ ದಿವ್ಯ ಪ್ರಭು

ಧಾರವಾಡ 27 : ಅತಿಯಾದ ಮತ್ತು ನಿರಂತರ ಮಳೆಯಿಂದಾಗಿ ಹಾನಿ ಆಗಿರುವ ಬೆಳೆಗಳ ಜಂಟಿ ಸಮೀಕ್ಷೆಯನ್ನು ಮುಂದಿನ ಏಳು ದಿನಗಳಲ್ಲಿ ಪೂರ್ಣಗೊಳಿಸಿ  ಜಿಲ್ಲಾಧಿಕಾರಿಗಳು ಸರಕಾರಕ್ಕೆ ತುರ್ತಾಗಿ ವರದಿ ಸಲ್ಲಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಇಂದು ಬೆಳಿಗ್ಗೆ ಬೆಂಗಳೂರಿನ ತಮ್ಮ ಗೃಹ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಜಿಲ್ಲಾಧಿಕಾರಿ ಸಿಇಓ ಮತ್ತು ಎಸ್‌.ಪಿ ವಿವಿಧ ಜಿಲ್ಲೆಗಳಲ್ಲಿ   ಹಿಂಗಾರು ಅವಧಿಯಲ್ಲಿ ಅಧಿಕ ಮಳೆಯಿಂದ ಉಂಟಾದ ಹಾನಿ ಮತ್ತು ನಷ್ಟದ ಕುರಿತು ಪರೀಶೀಲನಾ ಸಭೆ ಜರುಗಿಸಿ ಮಾತನಾಡಿದರು.

ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಮತ್ತು ಮುಖ್ಯಮಂತ್ರಿಗಳೊಂದಿಗೆ ಸಭೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರಿಂದ ಧಾರವಾಡ ಜಿಲ್ಲೆಯ ಮಳೆ ಹಾನಿ ಮಾಹಿತಿಯನ್ನು ಪಡೆದ ಮುಖ್ಯಮಂತ್ರಿಗಳು, ಜನ, ಜಾನುವಾರ ಜೀವ ಹಾನಿ ಸಂಭವಿಸಿದ 48 ಗಂಟೆಯಲ್ಲಿ ನಿಯಮಾನುಸಾರ ಪರಿಹಾರ ನೀಡಬೇಕು. ಮತ್ತು ಮನೆ ಹಾನಿ ಪ್ರಾಥಮಿಕ ವರದಿಯನ್ನು ದಾಖಲಿಸಬೇಕು ಎಂದು ಆದೇಶಿಸಿದರು. ಜೀವ ಹಾನಿ, ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹೋಗಿ  ಸಾರ್ವಜನಿಕರನ್ನು ಭೇಟಿ ಮಾಡಿ ಸಾಂತ್ವನ ಹೇಳಬೇಕು ಮತ್ತು ಹಾನಿ ಪರೀಶೀಲಿಸಿ ಸೂಕ್ತ ಪರಿಹಾರ ನೀಡಲು ಕ್ರಮವಹಿಸಬೇಕೆಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ದೀಪಾವಳಿ ಹಬ್ಬ ಬರುತ್ತಿದೆ. ಹಸಿರು ಪಟಾಕಿ ಹಚ್ಚಲು ಮಾತ್ರ ಅವಕಾಶ ನೀಡಬೇಕು. ಪಟಾಕಿ ಮಾರಾಟಕ್ಕೆ ನಿಗದಿತ ಸ್ಥಳ ಗುರುತಿಸಿ, ಅವಕಾಶ ನೀಡಬೇಕು. ಪಟಕಿ ದಾಸ್ತಾನು ಸ್ಥಳಗಳಿಗೆ, ಪಟಾಕಿ ಮಾರಾಟ ಅಂಗಡಿಗಳಿಗೆ ಭೇಟಿ ನೀಡಿ  ಪರೀಶೀಲಿಸಿ ಹಸಿರು ಪಟಾಕಿ ಮಾತ್ರ ಇರುವ ಬಗ್ಗೆ ಪೊಲೀಸ ಇಲಾಖೆ ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು. ಬೆಳಿಗ್ಗೆ 8 ರಿಂದ ರಾತ್ರಿ10 ಗಂಟೆವರೆಗೆ ಮಾತ್ರ ಪಟಾಕಿ ಹಚ್ಚಲು ಅವಕಾಶ ನೀಡಬೇಕು. ಈ ನಿಯಮಗಳನ್ನು ಮೀರಿ ಕಾನೂನು ಉಲ್ಲಂಘನೆ ಮಾಡುವವರ ಮೇಲೆ ಎಫ್‌.ಐ.ಆರ್ ದಾಖಲಿಸಿ ಕ್ರಮ ಜರುಗಿಸಬೇಕು. ಡಿಸಿ ಮತ್ತು ಎಸ್‌.ಪಿ ಈ ಕುರಿತು ಸೂಕ್ತ ಮುನ್ನೆಚ್ಚರಿಕೆವಹಿಸಿ, ಪರಿಸರ ಹಾನಿ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ನಿರಂತರ ಮಳೆಯಿಂದಾಗಿ ಜಿಲ್ಲೆಯ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಜಿಲ್ಲಾ ಪಂಚಾಯತ ಸಿಇಓ ಅವರು ತಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲ ಕೆರೆಗಳ ಹೂಳೆತ್ತುವ, ಒತ್ತುವರಿ ತೆರವುಗೊಳಿಸುವ ಕಾರ್ಯ ಮಾಡಬೇಕು ಮತ್ತು ಕೆರೆಗಳ ಒಡ್ಡು, ಕಟ್ಟೆ ಒಡೆಯದಂತೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು. ಮನೆ ಹಾನಿ ಪರಿಹಾರ ಬಿಡುಗಡೆಗೆ ಸಂಭಂದಿಸಿದಂತೆ ರಾಜ್ಯ ಸರಕಾರ ಸೆಪ್ಟೆಂಬರವರೆಗೆ ಹೊರಡಿಸಿದ್ದ ಆದೇಶವನ್ನು ನವೆಂಬರ್ 30 ರ ವರೆಗೆ ಮುಂದುವರಿಸಲಾಗುವುದು. ಈ ಕುರಿತು ಆದೇಶವನ್ನು ಸದ್ಯದಲ್ಲಿ ಹೊರಡಿಸಲಾಗುವುದು. ಅದರಂತೆ ಮನೆ ಹಾನಿ ಪರಿಹಾರ ವಿತರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಬ್ಸಿಡಿ ದರದಲ್ಲಿ ಮತ್ತೇ ಕಡಲೆ ಬೀಜ ವಿತರಣೆಗೆ ಸಚಿವ ಸಂತೋಷ ಲಾಡ ಮನವಿ: ಮುಖ್ಯಮಂತ್ರಿಗಳ ವಿಡಿಯೋ ಕಾನ್ಫರೆನ್ಸದಲ್ಲಿ ಖುದ್ದು ಹಾಜರಿದ್ದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು, ಹಿಂಗಾರಿನ ಹಂಗಾಮಿಗೆ ಬಿತ್ತನೆ ಮಾಡಿದ್ದ ಕಡಲೆ ಬೀಜಗಳು ಅತಿಯಾದ ಮತ್ತು ನಿರಂತರ ಮಳೆಯಿಂದಾಗಿ ಮೊಳಕೆ ಮೂಡದೆ ಭೂಮಿಯಲ್ಲಿಯೇ ನಷ್ಟವಾಗಿವೆ. ಇದರಿಂದ ಸಾಕಷ್ಟು ರೈತರಿಗೆ ಹಾನಿ ಆಗಿದೆ. ಕಡಲೆ ಮರು ಬಿತ್ತನೆಗೆ ಇನ್ನೂ ಹಂಗಾಮು ಇರುವದರಿಂದ ಈಗಾಗಲೇ ಬೀಜ ಪಡೆದ ರೈತರಿಗೂ ಸಬ್ಸಿಡಿ ದರದಲ್ಲಿ ಕಡಲೆ ಬೀಜ ವಿತರಣೆಗೆ ಆದೇಶ ಮಾಡಬೇಕು. ಧಾರವಾಡ ಜಿಲ್ಲೆಗೆ ಅಂದಾಜು 9 ಕ್ವಿಂಟಲ್ ಕಡಲೆ ಬೀಜದ ಅಗತ್ಯವಿದೆ. ಪೂರೈಸಲು ಕೃಷಿ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಸಚಿವ ಸಂತೋಷ ಲಾಡ ಸಭೆಯಲ್ಲಿ ಮನವಿ ಮಾಡಿದರು. ತಾವು ಸಹ ಮಳೆ ಹಾನಿ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದು ರೈತರ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರಕ್ಜೆ ಸೂಚಿಸಿದ್ದೇನೆ ಎಂದು ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಮುಖ್ಯಮಂತ್ರಿಗಳೊಂದಿಗೆ ಕಂದಾಯ ಸಚಿವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವರು  ಕೃಷಿ ಸಚಿವರು  ಸರಕಾರದ ಮುಖ್ಯ ಕಾರ್ಯದರ್ಶಿಗಳು ಕೃಷಿ ಇಲಾಖೆ ಆಯುಕ್ತರು ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಹಿಂಗಾರು ಹಂಗಾಮಿನ ಅಕ್ಟೋಬರ್ 1 ರಿಂದ 25 ರವರೆಗಿನ ಮಳೆಗೆ ಕೃಷಿ,ತೋಟಗಾರಿಕೆ ಸೇರಿ ಒಟ್ಟು 65,397 ಹೆ.ಪ್ರದೇಶ ಬೆಳೆ ಹಾನಿ  ಡಿಸಿ ದಿವ್ಯ ಪ್ರಭು 2024 ರ ಹಿಂಗಾರು ಹಂಗಾಮಿನ ಅ1 ರಿಂದ 25 ರವರೆಗೆ ವಾಡಿಕೆ ಮಳೆ 95 ಮೀ.ಮಿ ಇದ್ದದ್ದು 208 ಮೀ.ಮಿ. ವಾಸ್ತವಿಕ ಮಳೆ ಆಗಿದೆ. ಇದು ವಾಡಿಕೆಗಿಂತ ಶೇ.120 ರಷ್ಟು ಹೆಚ್ಚುವರಿ ಮಳೆಯಾಗಿದೆ. ಅ.1 ರಿಂದ 25 ರ ಅವಧಿಯಲ್ಲಿನ ನಿರಂತರ ಮಳೆಯಿಂದಾಗಿ ನವಲಗುಂದ ತಾಲೂಕಿನ ಹನಸಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು, ಮಂಗಳಾ ಪಾಟೀಲ (55) ಎಂಬ ಮಹಿಳೆ ತೀವೃ ಘಾಯಗೊಂಡು, ಚಿಕಿತ್ಸೆ ಫಲಿಸದೆ ಮರಣ ಹೊಂದಿದ್ದು ಅವರಿಗೆ ರೂ.ಐದು ಲಕ್ಷ ಪರಿಹಾರ ವಿತರಿಸಲಾಗಿದೆ. ಈ   ಅವಧಿಯಲ್ಲಿ 3 ಮನೆಗಳು ಪೂರ್ಣವಾಗಿ ಮತ್ತು 464 ಮನೆಗಳು ಭಾಗಶಃ ಹಾನಿ ಆಗಿವೆ. ಮನೆಗಳ ಸರ್ವೆ ಕಾರ್ಯ ನಡೆದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಅಕ್ಟೊಬರ 1 ರಿಂದ 25 ರ ವರೆಗಿನ ಅತಿ ಮತ್ತು ನಿರಂತರ ಮಳೆಯಿಂದಾಗಿ 65,397 ಪ್ರದೇಶದ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಪ್ರಗತಿಯಲ್ಲಿದ್ದು, ಒಂದು ವಾರದಲ್ಲಿ ಸಮೀಕ್ಷಾ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಮುಖ್ಯ ಮಂತ್ರಿಗಳಿಗೆ ತಿಳಿಸಿದರು. ಹಿಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಮುಖ್ಯವಾಗಿ ಗೋವಿನಜೋಳ, ಹತ್ತಿ, ಕಡಲೆ, ಭತ್ತ, ಈರುಳ್ಳಿ, ಮೆನಸಿನಕಾಯಿ ಬೆಳೆಗಳು ಹಾನಿ ಆಗಿವೆ ಎಂದು ತಿಳಿಸಿದರು. ಮಳೆಯಿಂದಾಗಿ 6,053 ಹೆಕ್ಟೆರ ಶೇಂಗಾ, 27,359 ಹೆಕ್ಟೆರ ಮೆಕ್ಕೆಜೋಳ, 20,993 ಹೆಕ್ಟೆರ ಹತ್ತಿ, 840 ಹೆಕ್ಟೆರ ಸೋಯಾಬಿನ್, 78 ಹೆಕ್ಟರ ಭತ್ತದ ಸೇರಿದಂತೆ ಒಟ್ಟು 55,324 ಹೆಕ್ಟೆರ ಪ್ರದೇಶದ ಕೇಷಿ ಬೆಳೆಗಳು ಮತ್ತು 6,528 ಹೆಕ್ಟೆರ ಮೆಣಸಿನಕಾಯಿ, 3,252 ಹೆಕ್ಟೆರ ಈರುಳ್ಳಿ, 112 ಹೆಕ್ಟೆರ ಟೊಮೆಟೊ, 181 ಹೆಕ್ಟೆರ ತರಕಾರಿ ಬೆಳೆಗಳು ಸೇರಿ ಒಟ್ಟು 10,073 ಹೆಕ್ಟೆರ ತೋಟಗಾರಿಕೆ ಬೆಳೆ ನಷ್ಟವಾಗಿದೆ ಎಂದು ಪ್ರಾಥಮಿಕ ವರದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ನಿರಂತರ ಮಳೆಯಿಂದಾಗಿ 8 ಶಾಲೆಗಳ 20 ಕೊಠಡಿಗಳು, 2 ಅಂಗನವಾಡಿ ಕೇಂದ್ರಗಳು, 504 ಕೀ.ಮಿ. ಗ್ರಾಮೀಣ ರಸ್ತೆ, 55 ಕೀ.ಮಿ.ಜಿಲ್ಲಾ ರಸ್ತೆ, 20 ಸೇತುವೆಗಳು, 59 ವಿದ್ಯುತ ಕಂಬಗಳು, 15 ಟ್ರಾನ್ಸ್‌ ಫಾರ್ಮಗಳು ಹಾನಿ ಆಗಿದ್ದು, ತುರ್ತು ದುರಸ್ತಿಗೆ ಕ್ರಮವಹಿಸಲಾಗಿದೆ ಎಂದು ಡಿಸಿ ದಿವ್ಯ ಪ್ರಭು ತಿಳಿಸಿದರು. ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ 1158.66 ಲಕ್ಷ ರೂ.ಗಳು ಮತ್ತು ಎಲ್ಲ ತಾಲೂಕುಗಳ ತಹಶಿಲ್ದಾರ ಅವರ ಖಾತೆಗಳಲ್ಲಿ ಒಟ್ಟು 711.71 ಲಕ್ಷ ರೂ.ಗಳು ಸೇರಿ ಒಟ್ಟು 1870.37 ಲಕ್ಷ ರೂ.ಗಳ ಅನುದಾನ ಲಭ್ಯವಿದೆ ಎಂದು ಡಿಸಿ ಅವರು ತಿಳಿಸಿದರು.

ಸಿ.ಎಂ. ಅವರ ವಿಡಿಯೋ ಸಂವಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಪೊಲೀಸ ಆಯುಕ್ತ ಎನ್‌.ಶಶಿಕುಮಾರ, ಜಿ.ಪಂ.ಸಿಇಓ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಡಿಸಿಪಿ ಮಾನಿಂಗ ನಂದಗಾವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ನಗರಾಭಿವೃದ್ಧಿಕೋಶದ ಪಿಡಿ ಅಜೀಜ ದೇಸಾಯಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಉಪನಿರ್ದೇಶಕ ಕೆ.ಸಿ.ಭದ್ರಣ್ಣವರ, ಡಿಡಿಪಿಐ ಎಸ್‌.ಎಸ್‌.ಕೆಳದಿಮಠ, ಜಿಲ್ಲಾ ಸಂಖ್ಯಾ ಸಂಗ್ರಹಣ ಅಧಿಕಾರಿ ವಿರನಗೌಡ ಪಾಟೀಲ, ಆರ್‌.ಡಬ್ಲು.ಎಸ್ ಇಲಾಖೆ ಕಾರ್ಯಪಾಲಕ ಇಂಜನೀಯರ ಆರ್‌.ಎಸ್‌.ಸೊಪ್ಪಿಮಠ, ತಹಶಿಲ್ದಾರ ಪ್ರಕಾಶ ನಾಶಿ, ಬಸವರಾಜ ಬೆಣ್ಣಿಶಿರೂರ, ವಿರೇಶ ಮುಳಗುಂದಮಠ, ಸುಧೀರ ಸಾಹುಕಾರ, ರಾಜು ಮಾವರಕರ, ಕಲಗೌಡ ಪಾಟೀಲ, ಎಂ.ಜಿ. ದಾಸಪ್ಪನವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ