ಸುಶಾಂತ್ ಪ್ರಕರಣ; ಎನ್ ಸಿ ಬಿ ಅಧಿಕಾರಿಗಳಿಂದ ನಟಿ ರಿಯಾ ಚಕ್ರವರ್ತಿ ಬಂಧನ
ಮುಂಬೈ, ಸೆಪ್ಟೆಂಬರ್ 8: ಬಾಲಿವುಡ್ ನಾಯಕ ನಟ ಸುಶಾಂತ್ ಸಿಂಗ್ ರಾಜ ಪುತ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪ ಎದುರಿಸುತ್ತಿರುವ ಆತನ ಗೆಳತಿ ನಟಿ ರಿಯಾ ಚಕ್ರವರ್ತಿ ಅವರನ್ನು ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ( ಎನ್ ಸಿ ಬಿ) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಡ್ರಗ್ಸ್ ಮಾಫಿಯಾ ಜತೆ ರಿಯಾ ಹೊಂದಿದ್ದ ಸಂಬಂಧಗಳ ಆರೋಪದ ಮೇಲೆ ಎನ್ ಸಿ ಬಿ ಆಕೆಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ಡ್ರಗ್ಸ್ ಪ್ರಕರಣದಲ್ಲಿ ಮೂರು ದಿನಗಳ ಕಾಲ ಎನ್ ಸಿ ಬಿ ಆಕೆಯನ್ನು ವಿಚಾರಣೆ ನಡೆಸಿತ್ತು. ಆಕೆಯ ಸಹೋದರ ಶೋವಿಕ್ ಚಕ್ರವರ್ತಿಯನ್ನು ಎನ್ ಸಿಬಿ ಅಧಿಕಾರಿಗಳು ಈಗಾಗಲೇ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಿಯಕರ ಸುಶಾಂತ್ ಸಿಂಗ್ ರಾಜಪುತ್ ಗಾಗಿ ಡ್ರಗ್ಸ್ ಖರೀದಿಸಿದ್ದನ್ನು ವಿಚಾರಣೆಯಲ್ಲಿ ರಿಯಾ ಚಕ್ರವರ್ತಿ ಒಪ್ಪಿಕೊಂಡಿದ್ದಾರೆ.
ಆದರೆ.. ತಾನು ಮಾತ್ರ ಡ್ರಗ್ಸ್ ಬಳಸುತ್ತಿರಲಿಲ್ಲ, ಕೇವಲ ಸುಶಾಂತ್ ಗಾಗಿ ಮಾದಕ ವಸ್ತುಗಳನ್ನು ಖರೀದಿ ಮಾಡಿದ್ದಾಗಿ ರಿಯಾ ಹೇಳಿಕೆ ನೀಡಿದ್ದಾರೆ. ಸುಶಾಂತ್ ಪ್ರಕರಣದಲ್ಲಿ ಮಾದಕ ವಸ್ತು ಬಳಕೆಯಿಂದ ಪ್ರಾರಂಭವಾದ ಈ ವಿಚಾರಣೆಯಲ್ಲಿ ಬಾಲಿವುಡ್ನಲ್ಲಿ ನಶೆಯಲ್ಲಿ ತೇಲುತ್ತಿರುವ ಪ್ರಮುಖ ತಾರೆಯರ ಹೆಸರುಗಳನ್ನು ವಿಚಾರಣೆಯಲ್ಲಿ ಬಹಿರಂಗಪಡಿಸಿದ್ದಾರೆ. ಒಟ್ಟು 25 ಬಾಲಿವುಡ್ ಸೆಲೆಬ್ರಿಟಿಗಳ ಹೆಸರನ್ನು ಎನ್ಸಿಬಿ ವಿಚಾರಣೆಯ ವೇಳೆ ರಿಯಾ ಚಕ್ರವರ್ತಿ ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.