ಮನರಂಜನೆ

ಧ್ರುವ ಸರ್ಜಾ ಜನ್ಮದಿನ : ಅಭಿಮಾನಿಗಳಿಗೆ ಸಿಹಿಸುದ್ದಿಯಿತ್ತ ಆ್ಯಕ್ಷನ್ ಪ್ರಿನ್ಸ್

ಧ್ರುವ ಸರ್ಜಾ ಜನ್ಮದಿನ : ಅಭಿಮಾನಿಗಳಿಗೆ ಸಿಹಿಸುದ್ದಿಯಿತ್ತ ಆ್ಯಕ್ಷನ್ ಪ್ರಿನ್ಸ್

ಬೆಂಗಳೂರು, ಅಕ್ಟೋಬರ್ 06: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದು, ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. 

ವಿಶೇಷ ವೆಂದರೆ ನಿರ್ದೇಶಕ ಎ.ಪಿ ಅರ್ಜುನ್ ಜೊತೆ ಮತ್ತೆ ಸಿನಿಮಾ ಮಾಡಲು ಧ್ರುವ ಮುಂದಾಗಿದ್ದು, ಈ ಸಿನಿಮಾದ ಪೋಸ್ಟರ್ ಮಂಗಳವಾರ ರಿಲೀಸ್ ಆಗಿದೆ.

 ಸೂಪರ್ ಹಿಟ್ 'ಅದ್ದೂರಿ' ಸಿನಿಮಾ ಬಳಿಕ ಧ್ರುವ ಸರ್ಜಾ ಮತ್ತು ಎಪಿ ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾವಿದು. 2012ರಲ್ಲಿ ಅದ್ದೂರಿ ಸಿನಿಮಾ ರಿಲೀಸ್ ಆಗಿತ್ತು. ಧ್ರುವ ಸರ್ಜಾ ಅಭಿನಯದ ಮೊದಲ ಸಿನಿಮಾ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ ಮತ್ತದೆ ಕಾಂಬಿನೇಷನ್ ಮತ್ತೊಂದು ಸಿನಿಮಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.  ಹುಟ್ಟುಹಬ್ಬದ ದಿನ ಪ್ರೊಡಕ್ಷನ್ ನಂ.3 ಹೆಸರಿನಲ್ಲಿ ಪೋಸ್ಟರ್ ರಿಲೀಸ್ ಮಾಡಲಾಗಿದೆ. 8 ವರ್ಷದ ಬಳಿಕ ಅರ್ಜುನ್-ಧ್ರುವ ಒಂದಾಗಿದ್ದು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

 ಪ್ರಸ್ತುತ ಧ್ರುವ ಸರ್ಜಾ ಸದ್ಯ 'ಪೊಗರು' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು, ಇತ್ತೀಚಿಗಷ್ಟೆ ಚಿತ್ರದ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಅದ್ದೂರಿ ಸೆಟ್ ನಲ್ಲಿ ಪೊಗರು ಟೈಟಲ್ ಸಾಂಗ್ ಅನ್ನು ಸೆರೆಹಿಡಿಯಲಾಗಿದೆ. 'ಪೊಗರು ಅಣ್ಣನಿಗೆ ಪೊಗರು...' ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಹಾಡಿಗೆ ಮುರಳಿ ನೃತ್ಯ ಸಂಯೋಜನೆ ಮಾಡಿದ್ದಾರೆ.

ಸ್ಯಾಂಡಲ್ ವುಡ್ ಹಾರೈಕೆ

ಇತ್ತೀಚಿಗಷ್ಟೆ ಅತ್ತಿಗೆ, ಮೇಘನಾ ರಾಜ್ ಸೀಮಂತವನ್ನು ಮಾಡಿ ಮುಗಿಸಿರುವ ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಗೂ ಸ್ಯಾಂಡಲ್ ವುಡ್ ನಟ, ನಟಿಯರು ಶುಭ ಕೋರಿದ್ದಾರೆ.  

ಅಣ್ಣ ಚಿರಂಜೀವಿ ಸರ್ಜಾ ಅಗಲಿಕೆ ಹಿನ್ನೆಲೆಯಲ್ಲಿ ಈ ಬಾರಿ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದು, ಯಾರೂ ಮನೆಯ ಬಳಿಗೆ ಬರದಂತೆ ಮನವಿ ಮಾಡಿದ್ದರು. 

''ಅಭಿಮಾನಿಗಳೇ ನಮ್ ಅನ್ನದಾತರು. ನೀವೇ ನಮ್ಮ ಶಕ್ತಿ. ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ, ಅಭಿಮಾನ ವರ್ಣನಾತೀತ. ಈ ವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ. ಎಲ್ಲೂ ಸಂಭ್ರಮವಿಲ್ಲ. ಅಭಿಮಾನಿಗಳನ್ನು ಮನೆಯ ಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀರಕ್ಷೆ. ಜೈಆಂಜನೇಯ'' ಎಂದು ಧ್ರುವ ಸರ್ಜಾ ವಿನಂತಿಸಿಕೊಂಡಿದ್ದರು.

ಸುದ್ದಿ ಓದಿ