‘ನನಗಾಗಿ ಪ್ರಾರ್ಥಿಸಿ’ ಸಂಜು ಬಾಬಾ ಮನವಿ
ಮುಂಬೈ, ಆಗುಸ್ಟ್ 19: ನಾಲ್ಕನೇ ಹಂತದ ಶ್ವಾಸಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ‘ನನಗಾಗಿ ಪ್ರಾರ್ಥಿಸಿ’ ಎಂದು ಕೋರಿದ್ದಾರೆ. ಮೊದಲ ಹಂತದ ಚಿಕಿತ್ಸೆಗಾಗಿ ಕೋಕಿಲಾಬೆನ್ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಮಾಧ್ಯಮಗಳ ಕ್ಯಾಮರಾ ಮುಂದೆ ಬಂದು ತಮಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದು, ಈ ವೇಳೆ ಪತ್ನಿ ಮಾನ್ಯತಾ, ಸೋದರಿ ಪ್ರಿಯಾ ದತ್ ಸೇರಿದಂತೆ ಕುಟುಂಬ ಸದಸ್ಯರು ಹಾಜರಿದ್ದರು. ಪ್ರಸ್ತುತ ಸಂಜಯ್ ದತ್ ಕೈಯಲ್ಲಿ ಕೆಜಿಎಫ್-2, ಶಂಶೇರಾ, ಪೃಥ್ವಿರಾಜ್ ಸೇರಿದಂತೆ ಸಾಕಷ್ಟು ಸಿನಿಮಾಗಳಿವೆ. ಸಡಕ್-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಸದ್ಯದಲ್ಲಿಯೇ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. “ಸಂಜಯ್ ದತ್ ಪ್ರಾಥಮಿಕ ಚಿಕಿತ್ಸೆಯನ್ನು ಮುಂಬೈನಲ್ಲಿ ಪೂರ್ಣಗೊಳಿಸಲಿದ್ದಾರೆ. ಕೊರೋನಾ ಪರಿಸ್ಥಿತಿಯ ಆಧಾರದ ಮೇಲೆ ಮುಂದಿನ ಯೋಜನೆ ನಿರ್ಧಾರವಾಗಲಿದೆ. ಆನಾರೋಗ್ಯದ ಬಗ್ಗೆ ವದಂತಿ ಹಬ್ಬಿಸದಂತೆ ಕೈ ಮುಗಿದು ಕೇಳಿ ಕೊಳ್ಳುತ್ತೇನೆ. ವೈದ್ಯರು ಅವರ ಕೆಲಸವನ್ನು ಮಾಡುತ್ತಿದ್ದಾರೆ. ನಾವು ಸಂಜಯ್ ದತ್ ಆರೋಗ್ಯದ ಬಗ್ಗೆ ಅಪ್ ಡೇಟ್ ನೀಡುತ್ತೇವೆ" ಎಂದು ಪತ್ನಿ ಮಾನ್ಯತಾ ಹೇಳಿದ್ದಾರೆ. ಸಂಜಯ್ ದತ್ ಬೇಗ ಗುಣಮುಖರಾಗುವಂತೆ ಅಭಿಮಾನಿಗಳು ಚಿತ್ರರಂಗದ ಗಣ್ಯರು ಪ್ರಾರ್ಥಿಸುತ್ತಿದ್ದಾರೆ.