ಬೆಳೆ ಹಾನಿ ಜಂಟಿ ಸಮೀಕ್ಷೆಯ ಪರೀಶೀಲನಾ ವರದಿ ಪ್ರಕಟ ಅಂತಿಮ ಪಟ್ಟಿ ನಂತರ ಪರಿಹಾರ ಜಮೆಗೆ ಕ್ರಮ ; ದಿವ್ಯ ಪ್ರಭು
ಬೆಳೆ ಹಾನಿ ಜಂಟಿ ಸಮೀಕ್ಷೆಯ ಪರೀಶೀಲನಾ ವರದಿ ಪ್ರಕಟ ಅಂತಿಮ ಪಟ್ಟಿ ನಂತರ ಪರಿಹಾರ ಜಮೆಗೆ ಕ್ರಮ ; ದಿವ್ಯ ಪ್ರಭು
ಧಾರವಾಡ 05 : ಸರ್ಕಾರದ ಆದೇಶದಂತೆ 2024-25ನೇ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಾದ ಪ್ರವಾಹ, ಅತೀವೃಷ್ಠಿಯಿಂದ 2024ನೇ ಸಾಲಿನ ಅಕ್ಟೋಬರ್ ತಿಂಗಳಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಉಂಟಾದ ಬೆಳೆ ಹಾನಿ ಪರಿಹಾರವನ್ನು ಪಾವತಿಸುವ ಕುರಿತು ಧಾರವಾಡ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಬೆಳೆ ಹಾನಿಯಾದ ಕ್ಷೇತ್ರದ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಇಂದು ಪ್ರಕಟಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಧಾರವಾಡ ತಾಲೂಕಿನಲ್ಲಿ 9,746.43 ಹೆಕ್ಟೆರ ಕೃಷಿ ಕ್ಷೇತ್ರ ಮತ್ತು 1,221.63 ಹೆಕ್ಟೆರ ತೋಟಗಾರಿಕೆ ಕ್ಷೇತ್ರ ಸೇರಿ ಒಟ್ಟು 10,968.06 ಹೆಕ್ಟೆರ ಕ್ಷೇತ್ರದಲ್ಲಿ ಬೆಳೆ ಹಾನಿ ಆಗಿದೆ. ಕಲಘಟಗಿ ತಾಲೂಕಿನಲ್ಲಿ 4,066 ಹೆಕ್ಟೆರ ಕೃಷಿ ಕ್ಷೇತ್ರದಲ್ಲಿ ಬೆಳೆ ಹಾನಿ ಆಗಿದೆ. ಹುಬ್ಬಳ್ಳಿ ತಾಲೂಕಿನಲ್ಲಿ 11,456 ಹೆಕ್ಟೆರ ಕೃಷಿ ಕ್ಷೇತ್ರ ಮತ್ತು 2,328.80 ಹೆಕ್ಟೆರ ತೋಟಗಾರಿಕೆ ಕ್ಷೇತ್ರ ಸೇರಿ ಒಟ್ಟು 13,784.80 ಹೆಕ್ಟೆರ ಕ್ಷೇತ್ರದಲ್ಲಿ ಬೆಳೆ ಹಾನಿ ಆಗಿದೆ. ಹುಬ್ಬಳ್ಳಿ ನಗರ ತಾಲೂಕಿನಲ್ಲಿ 1,443 ಹೆಕ್ಟೆರ ಕೃಷಿ ಕ್ಷೇತ್ರ ಮತ್ತು 98 ಹೆಕ್ಟೆರ ತೋಟಗಾರಿಕೆ ಕ್ಷೇತ್ರ ಸೇರಿ ಒಟ್ಟು 1,541 ಹೆಕ್ಟೆರ ಕ್ಷೇತ್ರದಲ್ಲಿ ಬೆಳೆ ಹಾನಿ ಆಗಿದೆ. ನವಲಗುಂದ ತಾಲೂಕಿನಲ್ಲಿ 10,838.38 ಹೆಕ್ಟೆರ ಕೃಷಿ ಕ್ಷೇತ್ರ ಮತ್ತು 2,487.40 ಹೆಕ್ಟೆರ ತೋಟಗಾರಿಕೆ ಕ್ಷೇತ್ರ ಸೇರಿ ಒಟ್ಟು 13,325.78 ಹೆಜ್ಟೆರ ಕ್ಷೇತ್ರದಲ್ಲಿ ಬೆಳೆ ಹಾನಿ ಆಗಿದೆ. ಕುಂದಗೋಳ ತಾಲೂಕಿನಲ್ಲಿ 15,900 ಹೆಕ್ಟೆರ ಕೃಷಿ ಕ್ಷೇತ್ರ ಮತ್ತು 1,880 ಹೆಕ್ಟೆರ ತೋಟಗಾರಿಕೆ ಕ್ಷೇತ್ರ ಸೇರಿ ಒಟ್ಟು 17,780 ಹೆಕ್ಟೆರ ಕ್ಷೇತ್ರದಲ್ಲಿ ಬೆಳೆ ಹಾನಿ ಆಗಿದೆ. ಅಣ್ಣಿಗೇರಿ ತಾಲೂಕಿನಲ್ಲಿ 1,041.36 ಹೆಕ್ಟೆರ ಕೃಷಿ ಕ್ಷೇತ್ರ ಮತ್ತು 3,145.69 ಹೆಕ್ಟೆರ ತೋಟಗಾರಿಕೆ ಕ್ಷೇತ್ರ ಸೇರಿ ಒಟ್ಟು 4,187.05 ಹೆಕ್ಟೆರ ಕ್ಷೇತ್ರದಲ್ಲಿ ಬೆಳೆ ಹಾನಿ ಆಗಿದೆ. ಜಿಲ್ಲೆಯ ಏಳು ತಾಲೂಕುಗಳು ಸೇರಿ ಒಟ್ಟು 54,491.17 ಹೆಕ್ಟೆರ ಕೃಷಿ ಕ್ಷೇತ್ರದಲ್ಲಿ ಮತ್ತು 11,161.52 ಹೆಕ್ಟೆರ ತೋಟಗಾರಿಕೆ ಕ್ಷೇತ್ರ ಸೇರಿ ಒಟ್ಟು 65,652.69 ಹೆಕ್ಟರ್ ಕ್ಷೇತ್ರಗಳಲ್ಲಿ ಜಂಟಿ ಸಮೀಕ್ಷೆಯ ಪರೀಶೀಲನಾ ವರದಿಯಂತೆ ಬೆಳೆ ಹಾನಿಯಾದ ರೈತರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ, ಉಪವಿಭಾಧಿಕಾರಿಗಳ, ತಹಶೀಲ್ದಾರ, ಗ್ರಾಮ ಪಂಚಾಯತ್, ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಅಂತರಜಾಲ ಇಂದು (ನ.05) ಪ್ರಕಟಿಸಲಾಗಿದೆ. ಈ ಕುರಿತು ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ತಮ್ಮ ಲಿಖಿತ ಆಕ್ಷೇಪಣೆಗಳನ್ನು ಸಂಬಂಧಿಸಿದ ತಹಶೀಲ್ದಾರ, ಕೃಷಿ , ತೋಟಗಾರಿಕಾ ಇಲಾಖೆಗಳ ತಾಲ್ಲೂಕು ಕಛೇರಿಗಳಲ್ಲಿ ಅಥವಾ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಏಳು (07) ದಿನಗಳೊಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗಿಲ್ಲ ಎಂದಾದಲ್ಲಿ ಪಟ್ಟಿಯನ್ನು ಅಂತಿಮಗೊಳಿಸಿ ನಿಯಮಾನುಸಾರ ಪರಿಹಾರ ಪಾವತಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.