ಸಮಾನತೆಯನ್ನು ಸಾಧಿಸುವದು ಶರಣ ಹರಳಯ್ಯರ ಉದ್ದೇಶ: ಶಾಸಕ ಪಾಟೀಲ
ಇಂಡಿ: ನಡೆ ನುಡಿ ಸಿದ್ದಾಂತದ ಶಿವಶರಣ ಹರಳಯ್ಯರು ಜಾತಿ ನಿರರ್ಥಕ ನೀತಿ ಲೋಕ ರಕ್ಷಕ ಎಂಬ ತತ್ವದಲ್ಲಿ ನಂಬಿಕೆ ಇಟ್ಟವರಾಗಿದ್ದರು. ಜಾತಿ ಮತ್ತು ಅಸ್ಪೃಶ್ಯತೆಯ ವಿಷವನ್ನು ಸಮಾಜದಿಂದ ಹೊರಹಾಕಿ ಎಲ್ಲ ರೀತಿಯ ಸಮಾನತೆಯನ್ನು ಸಾಧಿಸುವದು ಶರಣ ಹರಳಯ್ಯರ ಉದ್ದೇಶವಾಗಿತ್ತು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಮಂಗಳವಾರ ತಾಲೂಕಿನ ಬರಗುಡಿ ಗ್ರಾಮದ ಶಿವಶರಣ ಹರಳಯ್ಯ ಸಮುದಾಯ ಭವನ ಉದ್ಘಾಟನೆ ಹಾಗೂ ಗ್ರಾಮದ ಮಹಾದ್ವಾರ ಅಗಸಿಯ ಭೂಮಿಪೂಜೆ ಸಮಾರಂಭಕ್ಕೆ ಜ್ಯೋತಿ ಬೆಳಗಿಸುವದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು.
ಬರಗುಡಿ ಗ್ರಾಮದ ಮಹಾದ್ವಾರಕ್ಕೆ ವೈಯಕ್ತಿಕವಾಗಿ ಅಗತ್ಯ ಸಹಾಯಧನ ಮಾಡುವದಾಗಿ ಘೋಷಿಸಿದರು. ನನ್ನ ಸ್ವ ಗ್ರಾಮ ಪಡನೂರಿನಷ್ಟೇ ಬರಗುಡಿ ಗ್ರಾಮದ ಜೊತೆ ಅವಿನಾಭಾವ ಸಂಬಂಧವಿದೆ. ನಮ್ಮ ತಂದೆಯವರ ಕಾಲದಿಂದಲೂ ಬರಗುಡಿಯ ಜೊತೆ ಉತ್ತಮ ಸಂಬಂಧವಿದ್ದು ಅದು ಮರೆಯಲಾಗದು ಅದು ಅಲ್ಲದೆ ಈ ಗ್ರಾಮದ ಋಣದಲ್ಲಿ ನಾನಿದ್ದೇನೆ ಎಂದು ಮಾತನಾಡಿದರು.
ಸಾನಿಧ್ಯ ವಹಿಸಿದ ಮದ್ದಾನಿ ಮಹಾರಾಜರು ಮಾತನಾಡಿ ಯಾವ ವ್ಯಕ್ತಿ ಸಮಾಜಕ್ಕೆ ಜೀವನವನ್ನು ಕಾಣಿಕೆಯಾಗಿ ನೀಡುತ್ತಾನೋ ಆತನೇ ಮಹಾತ್ಮ ಎನ್ನಲಿಕ್ಕೆ ಶರಣ ಹರಳಯ್ಯ ಆದರ್ಶಪ್ರಾಯ.12 ನೆಯ ಶತಮಾನದಲ್ಲಿ ಬಸವಾದಿ ಶರಣರ ಸಾಲಿನಲ್ಲಿ ಸಂಕಲ್ಪ ಸಾಧಕ ಶರಣ ನೆನಿಸಿಕೊಂಡ ಹರಳಯ್ಯ ಬಸವಧರ್ಮವನ್ನು ಎತ್ತಿ ಹಿಡಿದ ಮಹಾಮಾನವತಾವಾದಿ ಎಂದರು.
ವಿರುಪಾಕ್ಷಯ್ಯ ವಸ್ತ್ರದ ಮಾತನಾಡಿದರು.
ವೇದಿಕೆಯ ಮೇಲೆ ಇಂಡಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಜಾವೇದ ಮೋಮಿನ, ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲನಗೌಡ ಬಿರಾದಾರ, ಧನರಾಜ ಮುಜಗೊಂಡ, ಸೋಮಲಿಂಗಪ್ಪ ಪಾಟೀಲ, ಉಪವಲಯ ಅರಣ್ಯ ಅಧಿಕಾರಿ ಲಕ್ಷ್ಮಣ ನಾದ, ಶಿಕ್ಷಕ ಮಲ್ಲಿಕಾರ್ಜುನ ಶೆಂಡಗಿ, ಗ್ರಾ.ಪಂ ಸದಸ್ಯ ಪ್ರಶಾಂತಗೌಡ ಪಾಟೀಲ ಮತ್ತಿತರಿದ್ದರು.