ವಿದ್ಯಾರ್ಥಿಗಳಿಗೆ ಸಾಧನೆಯೇ ಮುಖ್ಯ ಗುರಿಯಾಗಿರಲಿ
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಡಾ. ಅಶೋಕ ಪಾಟೀಲ
ಶೇಡಬಾಳ 28: ವಿದ್ಯಾರ್ಥಿಗಳಿಗೆ ಸಾಧನೆಯೇ ಮುಖ್ಯ ಗುರಿಯಾಗಿರಲಿ. ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಆಡಳಿತ ಮಂಡಳಿಯ ಸದಸ್ಯ ಡಾ. ಅಶೋಕ ಪಾಟೀಲ ಹೇಳಿದರು.
ಅವರು ಶುಕ್ರವಾರ ದಿ. 28 ರಂದು ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳಾದ ಆದಿನಾಥ ಲಠ್ಠೆ (ಜಂಪ್‌ರೂಪ್) ಕಲ್ಯಾಣಿ ಚಿಂಚಲೆ (ರೀಲೆ, ಜಂಪ್‌ರೂಪ್) ಶಿವಾನಿ ಐನಾಪೂರೆ (ಸೈಕಲಿಂಗ್, ಜಂಪ್‌ರೂಪ್) ಇವರನ್ನು ಸಂಸ್ಥೆಯ ವತಿಯಿಂದ ಸತ್ಕರಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು, ವಿದ್ಯಾರ್ಥಿಗಳು ವ್ಯರ್ಥವಾಗಿ ಕಾಲಹರಣ ಮಾಡದೇ ಪ್ರತಿ ನಿಮಿಷವನ್ನು ನಿಮ್ಮ ಸಾಧನೆಗೆ ಉಪಯೋಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅದರಂತೆ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿರುವ ಮೂವರು ವಿದ್ಯಾರ್ಥಿಗಳು ರಾಜ್ಯದಲ್ಲಿಯೂ ವಿಶೇಷ ಸಾಧನೆ ಮಾಡಿ ಶಾಲೆಗೆ, ಗ್ರಾಮಕ್ಕೆ ಕೀರ್ತಿ ತರುವಂತೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಬಾಹುಬಲಿ ಬಣಜವಾಡೆ ಮಾತನಾಡುತ್ತಾ ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ ವಿಶೇಷವಾಗಿದ್ದು, ಆಡಳಿತ ಮಂಡಳಿಯವರ ಸಹಕಾರ ಹಾಗೂ ಮಾರ್ಗದರ್ಶನ ಮಾಡಿದ ಶಿಕ್ಷಕರ ಕರ್ತವ್ಯ ಅತ್ಯಮೂಲ್ಯವಾಗಿದೆ ಎಂದು ಹೇಳಿದರು.
ಆಡಳಿತ ಮಂಡಳಿಯ ಸದಸ್ಯರಾದ ಡಾ. ಅಶೋಕ ಪಾಟೀಲ, ಮಹಾವೀರ ಪಾಟೀಲ, ನೇಮಗೌಡಾ ಪಾಟೀಲ, ಪ್ರಾಚಾರ್ಯ ಬಾಹುಬಲಿ ಬಣಜವಾಡೆ, ವಿದ್ಯಾರ್ಥಿಗಳ ಮಾರ್ಗದರ್ಶಕ ಪ್ರಮೋದ ದೊಡಮನಿ, ಉಪನ್ಯಾಸಕರಾದ ಬಿ.ಎಸ್. ಸೋಕಾರೆ, ಡಿ.ಕೆ. ಮಾಲಗಾಂವೆ, ಬಿ.ಎಸ್. ಮಿರಗಿ, ಪಿ.ಎ. ಮಿರ್ಜೆ, ಎಸ್. ಆರ್. ಪರುತಗಲ್ಲೆ, ವ್ಹಿ.ಕೆ. ಕಡೋಲೆ, ಚೌಗುಲಾ ಮೆಡಂ, ಪಿ.ಕೆ. ದೊಡ್ಡಮನಿ, ಕಾರ್ಯದರ್ಶಿ ಸತೀಶ ಪಾಟೀಲ, ಸಿಬ್ಬಂದಿಗಳಾದ ಉದಯ ಚೌಗುಲೆ ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಪಿ.ಎ.ಮಿರ್ಜೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.