ರಾಣೆಬೆನ್ನೂರ

ವಸತಿ - ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ ವಹಿಸಿ: ಮುಳ್ಳಳ್ಳಿ

ವಸತಿ - ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ ವಹಿಸಿ:  ಮುಳ್ಳಳ್ಳಿ

ರಾಣೆಬೆನ್ನೂರ: ಸಮಾಜದ ಪ್ರಗತಿಯಲ್ಲಿ ಬಹು ಮುಖ್ಯ ಪಾತ್ರ ವಹಿಸಲಿರುವ ವಸತಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಸತಿ ಶಾಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿಶೇಷ ಕಾಳಜಿ ವಹಿಸುವ ಮೂಲಕ ಅವರುಗಳ ಶೈಕ್ಷಣಿಕ ಏಳ್ಗೆಗೆ ಪ್ರಾಮಾಣಿಕವಾದ ಕಾರ್ಯ ನಿರ್ವಹಿಸುವ ಮೂಲಕ ಆತ್ಮಸಾಕ್ಷಿಯಾಗಿ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಗೂ ಆಡಳಿತ ಅಧಿಕಾರಿ ಎಸ್ ಬಿ ಮುಳ್ಳಳ್ಳಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ತಾಪಂ ಸಭಾಭವನದಲ್ಲಿ ಶುಕ್ರವಾರ ನಡೆದ ತಾಪಂ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸರಕಾರಿ ಹಾಸ್ಟಲಿನಲ್ಲಿರುವ ವಿದ್ಯಾರ್ಥಿಗಳಿಗೆ ಊಟ ಉಪಹಾರದ ಜೊತೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದರ ಮೂಲಕ ಸೇವೆಗೆ ಗೌರವ ನೀಡಲು ಮುಂದಾಗಬೇಕು ಎಂದರು.   ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ವಸತಿ ಶಾಲೆ ಸೇರಿದಂತೆ ಮತ್ತು ಇತರ ಶಾಲಾ ವಿದ್ಯಾರ್ಥಿಗಳಲ್ಲಿ ಕಠಿಣವಾಗಿರುವ ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳ ಪರಿಣಿತ ಶಿಕ್ಷಕರನ್ನು ವಾರದಲ್ಲಿ ಒಂದು ಸಾರಿ ವಸತಿ ಮತ್ತು ಆಯಾ ಶಾಲೆಗಳಲ್ಲಿನ  ವಿದ್ಯಾರ್ಥಿಗಳಿಗೆ ಉಚಿತ ಬೋಧನೆ ಮಾಡಿಸಲು ಮುಂದಾಗಬೇಕು. ಇದರಿಂದ ಮಕ್ಕಳ ಕಲಿಕೆಯ ಗುಣಮಟ್ಟ ಹೆಚ್ಚಾಗುವುದರ ಜೊತೆಗೆ ಉತ್ಸಾಹ ವು ಇಮ್ಮಡಿಕೊಳ್ಳುತ್ತದೆ.

ಈ ವ್ಯವಸ್ಥೆಯನ್ನು ಶಿಕ್ಷಕರು ಸಹ ಅರಿತುಕೊಂಡು ಮಕ್ಕಳಿಗೆ ಉತ್ತಮ ಬೋಧನೆ ಮಾಡಬೇಕು . ಈ ಬಗ್ಗೆ ಜಿಪಂ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದು, ರಾಣೆಬೆನ್ನೂರಿನಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯ ಮಾಡಲು ಚಿಂತನೆಯಲ್ಲಿದೆ ಎಂದವರು ಹೇಳಿದರು. ತಾಲೂಕಿನಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳಿಗೆ ಸಮರ್ಪಕವಾಗಿ ಪೌಷ್ಟಿಕ ಆಹಾರ ನೀಡಬೇಕು. ಆರು ವರ್ಷದ ಒಳಗಿನ ಮಕ್ಕಳಿಗೆ ಈ ಆಹಾರ ನೀಡುವುದರಿಂದ ಮಕ್ಕಳ ಬುದ್ಧಿಮಟ್ಟ ಹಾಗೂ ಸದೃಢ ದೇಹ ಹೊಂದುತ್ತದೆಎಂದು ವೈದ್ಯರು ಸೂಚಿಸಿದ್ದು, ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಕಾರ್ಯ ನಿರ್ವಹಿಸುತ್ತಿದ್ದಾರೆಯೇ ?ಇಲ್ಲವೇ? ಎಂಬುದನ್ನು ಸಿಡಿಪಿಓರವರು ಗಮನಿಸಬೇಕು ಎಂದವರು ಕಿವಿಮಾತು ಹೇಳಿದರು. ತಾಲೂಕಿನಲ್ಲಿ ಅಡಿಕೆ ಬೆಳೆಯ ಪ್ರಮಾಣ ಹೆಚ್ಚಾಗಿದ್ದು, ಈ ಭಾಗದಲ್ಲಿ ಅಡಿಕೆ ಬೆಳೆಗೆ ವಾತಾವರಣವಿಲ್ಲ ಎಂದು ವರದಿಯಾಗಿದ್ದು, ಅದಕ್ಕಾಗಿ ರೇಷ್ಮೆ ಮತ್ತಿತರ ಬೆಳೆಗಳಿಗೆ ಉತ್ತಮ ವಾತಾವರಣವಿದ್ದು, ಈ ಬೆಳೆಗಳಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಾರಿ ತಾಲೂಕಿನಲ್ಲಿ ಸರಾಸರಿ 71 ರಷ್ಟು ಮಳೆಯ ಕೊರತೆಯಿದ್ದು, ರೈತರಿಗೆ ಉತ್ತಮ ಸಲಹೆ ಸೂಚನೆ ನೀಡುವುದರ ಮೂಲಕಾವರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂದರು. ಒಟ್ಟಾರೆ ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಶ್ರೀಸಾಮಾನ್ಯರಿಗೆ ತಲುಪ ಬೇಕಾಗಿರುವ ಯೋಜನೆಗಳನ್ನು, ಸೌಲಭ್ಯಗಳನ್ನು ಕಟ್ಟು ನಿಟ್ಟಾಗಿ ನೀಡಲು ಹೆಚ್ಚಿನ ಒಲವು ತೋರಿಸಬೇಕು. ಅನಾವಶ್ಯಕವಾಗಿ ರೈತರನ್ನು, ಬಡವರನ್ನು, ಶ್ರೀಸಾಮಾನ್ಯರನ್ನು ಅವರುಗಳ ಕೆಲಸಗಳಿಗಾಗಿ ಅಲೆದಾಡಿಸಲು ಮಾಡಬಾರದು ಎಂದು ಮುಳ್ಳಳ್ಳಿ ವಿನಂತಿಸಿದರು. ಆರೋಗ್ಯ ,ಕೃಷಿ, ಜಿಪಂ, ಲೋಕೋಪಯೋಗಿ, ನೀರಾವರಿ, ಸಾರಿಗೆ, ಪಶು ಆಸ್ಪತ್ರೆ, ತಾಪಂ,ಅಪ್ಪರ ತುಂಗಾ, ಅರಣ್ಯ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಮತ್ತಿತರ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲಿಸಿ ಎಚ್ಚರಿಕೆಯ ಮೂಲಕ ಸೂಚನೆ ನೀಡಲು ಮುಳ್ಳಳ್ಳಿ ಮುಂದಾಗಿದ್ದು ವಿಶೇಷವಾಗಿತ್ತು. ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ ಕ್ಷೇತ್ರದ ಅಭಿವೃದ್ಧಿ  ತಾಲೂಕ್ ಮಟ್ಟದ ಅಧಿಕಾರಿಗಳ ಕೈಯಲ್ಲಿದೆ. ಅದನ್ನು ದುರ್ಬಳಕೆ ಮಾಡಿಕೊಳ್ಳದೆ ಸದ್ಬಳಕೆ ಮಾಡಿಕೊಂಡು ಕ್ಷೇತ್ರದ ಸರ್ವಾಂಗೀಣ ಏಳಿಗೆಗೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಇಓ  ಸುಮಲತಾ ಪಿಎಸ್  ಬಸವರಾಜ ಶಿಡೇನೂರ, ಗಂಗಾಧರ್ ಎಚ್ ಕೆ, ಪರುಶುರಾಮ್ ಪೂಜಾರ್ ಮತ್ತಿತರರು  ಇದ್ದರು.

ಸುದ್ದಿ ಓದಿ