ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಾಗಾರ
ಇಂಡಿ 29: ಮಕ್ಕಳು ಭವ್ಯ ಭಾರತದ ಪ್ರಜೆಗಳು ಅಂತಹ ಒಳ್ಳೆಯ ಪ್ರಜೆಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಆರ್.ಎಮ್. ಶಹಾ ಪಬ್ಲಿಕ್ ಶಾಲೆ ನೀಡುವ ಮೂಲಕ ಸಾಮಾಜಿಕ ಸೇವೆಯನ್ನು ಸಲ್ಲಸುತ್ತಿದೆ ಎಂದು ಕೇಂದ್ರ ಸರ್ಕಾರದ ದಾದಾಬಾಯಿ ನವರೋಜಿ ಪ್ರಶಸ್ತಿ ವಿಜೇತ ಅರವಿಂದ ದೋಶಿ ಹೇಳಿದರು.
ಶನಿವಾರ ಪಟ್ಟಣದ ಆರ್.ಎಮ್. ಶಹಾ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ಅತಿಥಿಯಾಗಿ ಅವರು ಮಾತನಾಡಿದರು.
ಮಕ್ಕಳು ಕೇವಲ ಒಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ ಸೃಜನಶೀಲ ಕಲಿಕಾ ಕೋರ್ಸಗಳನ್ನು ಕಲಿಯುವ ಮೂಲಕ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ಡಾ. ಪ್ರತಿಭಾ ಎ. ದೋಶಿ ಮಾತನಾಡಿ, ಮಕ್ಕಳು ಕರ್ತವ್ಯ ಪ್ರಜ್ಞೆ ತತ್ವವನ್ನು ಪಾಲಿಸಿಕೊಂಡರೆ ಈ ಶಾಲೆಯ ನಿಮ್ಮ ತಂದೆ-ತಾಯಿಯರ ಹಾಗೂ ಶಿಕ್ಷಕರ ಕೀರ್ತಿ ತರುವಂತ ಕೆಲಸ ನೀವು ಮಾಡಿದಂತೆಯಾಗುತ್ತದೆ ಎಂದರು.
ಕಾರ‌್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ ಡಿ.ಆರ್. ಶಹಾ ಮಾತನಾಡಿ, ಅರವಿಂದ ದೋಶಿ ಹಾಗೂ ಡಾ. ಪ್ರತಿಭಾ ದೋಶಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಧಾರ್ಮಿಕ ಸೇವೆಯು ನಮ್ಮೆಲ್ಲರಿಗೂ ದಾರೀದೀಪವಾಗಿವೆ. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ಹಾಗೂ ಆತ್ಮಸ್ಥೈರ್ಯದಿಂದ ಅಧ್ಯಯನದಲ್ಲಿ ತೊಡಗಿದಾಗ ತಮ್ಮ ಶೈಕ್ಷಣಿಕ ಗುರಿಯನ್ನು ತಲುಪಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ‌್ಯಕ್ರ್ರಮದಲ್ಲಿ ಚಂದ್ರಕಾಂತ ಶಹಾ, ಪರವೀಣ ಜಮಾದಾರ, ಪ್ರಕಾಶ ಪಾಟೀಲ್, ಭಾಗ್ಯಜ್ಯೋತಿ ಕೊಳಾರಿ, ಜುಬೇರ್ ಸೈಯದ್ ಸೇರಿದಂತೆ ಶಾಲಾ ಸಿಬ್ಬಂದಿ ಪಾಲಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.