ಹಲ್ಯಾಬಾಯಿ ಹೋಳ್ಕರ ಕಾರ್ಯ ಹಾಲುಮತ ಸಮಾಜಕ್ಕೆ ಅಭಿಮಾನ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಾ ಹೇಳಿಕೆ: ತೆಲಸಂಗ ಗ್ರಾಮದ ವಿಠರಾಯ ದೇವರ ಜಾತ್ರಾ ಮಹೋತ್ಸವ
ಅಥಣಿ 26: ಮುಸ್ಲೀಂ ದಾಳಿಕೋರರಿಂದ ಧ್ವಂಸಗೊಂಡಿದ್ದ ಕಾಶಿ ವಿಶ್ವನಾಥ ದೇವಸ್ಥಾನವನ್ನು ಪುನರ್ ನಿರ್ಮಿಸಿದ ಅಹಲ್ಯಾಬಾಯಿ ಹೋಳ್ಕರ ಹಾಲು ಮತ ಸಮಾಜಕ್ಕೆ ಸೇರಿದವರು. ಇದು ಇಡೀ ಹಾಲುಮತ ಸಮಾಜಕ್ಕೆ ಅಭಿಮಾನ ಪಡುವ ಸಂಗತಿಯಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಾ ಹೇಳಿದರು.
ಅವರು ತೆಲಸಂಗ ಗ್ರಾಮದಲ್ಲಿ ವಿಠರಾಯ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಅನಾದಿಕಾದಿಂದಲೂ ಕಾಶಿಯಲ್ಲಿ ವಿಶ್ವನಾಥನ ದೇವಸ್ಥಾನ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಹಾಗೂ ಮಥುರಾದಲ್ಲಿ ಶ್ರೀಕೃಷ್ಣನ ದೇವಸ್ಥಾನಗಳಿದ್ದವು. ಆದರೆ ಭಾರತದ ಮೇಲೆ ಆಕ್ರಮಣ ಮಾಡಿದ ಮೊಘಲರು, ಇಂಗ್ಲೀಷರ ಕುತಂತ್ರದಿಂದ ಧ್ವಂಸ ಮಾಡಿ ನಿರ್ಮಿಸಿದ ಮಸೀದಿಗಳ ಗೋಡೆಗಳ ಮೇಲೆ ಮೂರ್ತಿಗಳ ಕೆತ್ತನೆ ಈಗಲೂ ಇದೆ. ಇಂತಹ ಎಲ್ಲ ಮಸೀದಿಗಳನ್ನು ತೆರವುಗೊಳಿಸಿ ಅಲ್ಲಿ ದೇವಸ್ಥಾನಗಳನ್ನು ನಿರ್ಮಿಸುತ್ತೇವೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.
ಹಾಲುಮತ ಸಮಾಜ ಬಾಂಧವರಲ್ಲಿ ಶಿಕ್ಷಣದ ಕೊರತೆ ಸಾಕಷ್ಟಿದ್ದು, ತಮ್ಮ ತಮ್ಮ ಜೀವನಶೈಲಿಯ ವೆಚ್ಚಗಳನ್ನು ಕಡಿಮೆ ಮಾಡಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಮಾಜ ಬಾಂಧವರಿಗೆ ಕರೆ ನೀಡಿದ ಅವರು ತೆಲಸಂಗ ಗ್ರಾಮದಲ್ಲಿ ನಿರ್ಮಿಸಲುದ್ದೇಶಿಸಿರುವ ಸಮುದಾಯ ಭವನ ನಿಮಾಣಕ್ಕೆ ಅವಶ್ಯವಿರುವ ಹಣವನ್ನು ಸಮಾಜ ಬಾಂಧವರು ಎಷ್ಟು ಸಂಗ್ರಹಿಸುತ್ತಾರೋ ಅಷ್ಟು ಹಣವನ್ನು ನಾನು ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಸೇರಿಕೊಂಡು ಕೊಡುವುದಾಗಿ ಘೋಷಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಿಠಲರಾಯ ಸಮುದಾಯ ಭವನ ಕಾಮಗಾರಿಗೆ ನನ್ನ ವಿಧಾನ ಪರಿಷತ್ ಸದಸ್ಯ ಅನುದಾನದಲ್ಲಿ 25 ಲಕ್ಷ ಅನುದಾನ ನೀಡುವೆ ಎಂದ ಅವರು ಇಡೀ ಹಾಲುಮತ ಸಮಾಜದಲ್ಲಿ ಅತೀ ಹೆಚ್ಚು ದಾನ ಮಾಡುವವರು ಎಂ.ಟಿ.ಬಿ.ನಾಗರಾಜ ಹಾಗೂ ಭೈರತಿ ಬಸವರಾಜ. ನೂರಾರು ಕೋಟಿ ಆಸ್ತಿ ಹೊಂದಿರುವ ಎಂ.ಟಿ.ಬಿ.ನಾಗರಾಜ ಅತೀ ಸಾಮಾನ್ಯನಂತಿದ್ದಾರೆ ಎಂದರು.
ವಿವಿಧ ಕುರಿತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದ ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಸಮುದಾಯ ಭವನಕ್ಕೆ ನಾನೂ ಸಹ 25 ಲಕ್ಷ ವಯಕ್ತಿಕವಾಗಿ ನೀಡುವುದಾಗಿ ಹೇಳಿದರು. ವಿಠರಾಯ ದೇವರ ಸಮುದಾಯ ಭವನ ನಿರ್ಮಿಸಲು ರಾಜ್ಯ ಸರಕಾರದಿಂದ ಅನುದಾನ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ ನಿಯೋಜಿತ ಸಮುದಾಯ ಭವನಕ್ಕೆ ವಯಕ್ತಿಕವಾಗಿ 25 ಲಕ್ಷ ನೀಡುವುದಾಗಿ ವಾಗ್ದಾನ ಮಾಡಿದರು. ಉತ್ಸವ ಹಬ್ಬ ಹರಿದಿನ ಹಾಗೂ ಜಾತ್ರಾಮಹೋತ್ಸವ ಆಚರಿಸುವುದು ಶ್ರೇಷ್ಠ ಸಂಪ್ರದಾಯವಾಗಿದೆ. ದೇವ ಒಬ್ಬನೇ ಆಗಿದ್ದರೂ ಕೂಡ ಬೇರೆ ಬೇರೆ ಸಮುದಾಯದವರು ಬೇರೆ ಬೇರೆ ಹೆಸರಿನಿಂದ ದೇವರನ್ನು ಪೂಜಿಸುತ್ತೇವೆ. ನಮ್ಮ ರಾಜ್ಯದಲ್ಲಿ 65 ಲಕ್ಷಕ್ಕೂ ಹೆಚ್ಚು ಮತದಾರರು ಹಾಲುಮತ ಸಮಾಜಬಾಂಧವರಿದ್ದು, ಅಥಣಿ ಮತಕ್ಷೇತ್ರದಲ್ಲಿಯೂ ಸಹ 35 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ ಎಂದ ಅವರು ಹಾಲುಮತ ಸಮಾಜದ ಅನೇಕ ಸಾಮಾನ್ಯ ವ್ಯಕ್ತಿಗಳು ಆಧ್ಯಾತ್ಮ ಸಾಧನೆಯಿಂದ ದೈವತ್ವ ಪಡೆದುಕೊಂಡಿದ್ದಾರೆ. ಇಂತಹ ಸಾಧಕರ ಸ್ಮರಣೆ ಮಾಡಬೇಕು ಎಂದರು.
ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಹಾಲುಮತ ಸಮಾಜವನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರೆ್ಡ ಮಾಡಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದ ಪೆಂಡಾಲ ಸೇವೆ ಮಾಡಿದ ನ್ಯಾಯವಾದಿ ಎ.ಎಮ್.ಖೊಬ್ರಿ ಮಾತನಾಡಿದರು.
ಸುರೇಶ ಮಾಯಣ್ಣವರ, ಮಾಯಪ್ಪಾ ಸಾವಳಗಿ, ಶ್ರೀಶೈಲ ಶಲ್ಯಪ್ಪಗೋಳ, ಸಿದ್ದು ಕೋಕಟನೂರ, ಕಾಸಪ್ಪಾ ಶಲ್ಯಪ್ಪಗೋಳ, ಬೀಮಪ್ಪಾ ಶಲ್ಯಪ್ಪಗೋಳ, ಅರವಿಂದ ಉಂಡೋಡಿ, ಡಾ, ಬಸವರಾಜ ರೂಡಗಿ, ಸುಭಾಷ ಮೋರೆ, ಮಾಯಪ್ಪಾ ನಿಡೋಣಿ, ವಿಲಾಸ ಮೋರೆ, ಡಾ.ಇಂಚಗೇರಿ, ಮಾಹಾದೇವ ಬಸಗೌಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಾನಿಧ್ಯವಹಿಸಿದ್ದ ಹಣಮಾಪುರದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ರೇವಣಸಿದ್ಧೇಶ್ವರ ಗುರು ಪೀಠದ ಶಾಂತಮಯ ರೇವಣಸಿದ್ಧ ಮಹಾರಾಜರು, ಕುಂಬಾರ ಗುರುಪೀಠದ ಬಸವಕುಂಬಾರ ಗುಂಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.