ಧಾರವಾಡ - ಹುಬ್ಬಳ್ಳಿ

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹಿಸಿ ಎಐಡಿಐಓ ಸಹಿ ಸಂಗ್ರಹಣಾ ಅಭಿಯಾನ

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹಿಸಿ ಎಐಡಿಐಓ ಸಹಿ ಸಂಗ್ರಹಣಾ ಅಭಿಯಾನ

ಧಾರವಾಡ 10: ರೈಲ್ವೇ ಖಾಸಗೀಕರಣವನ್ನು ನಿಲ್ಲಿಸಲು, ರೈಲ್ವೇಗಳಲ್ಲಿ ಸಾಮಾನ್ಯ ಹಾಗೂ ಸ್ಲೀಪರ್ ಭೋಗಿಗಳನ್ನು ಹೆಚ್ಚಿಸಲು, ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹಿಸಿ ಎಐಡಿಐಓ ಅಖಿಲ ಭಾರತ ಸಮಿತಿಯಿಂದ ದೇಶವ್ಯಾಪಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ಎಐಡಿವೈಓ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ  ಸಹಿ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. 

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಉದ್ಯಮವಾಗಿರುವ ಭಾರತೀಯ ರೈಲ್ವೆ (ಋ) ಯು ಸಂಪೂರ್ಣ ವಿನಾಶದತ್ತ ಸಾಗುತ್ತಿದೆ. ಆನಸಾಮಾನ್ಯರ ಬೃಹತ್ ಪ್ರಮಾಣದ ತೆರಿಗೆ ಹಣದಿಂದ ದಶಕಗಳಿಂದ ಭಾರತೀಯ ರೈಲ್ವೆಯನ್ನು ಕಟ್ಟಿ ಬೆಳೆಸಿ, ಪ್ರತೀ ಬಜೆಟ್‌ನಲ್ಲಿಯೂ ವಿಸ್ತರಿಸುತ್ತಾ ಬರಲಾಗಿತ್ತು. ಆದರೀಗ ಕ್ರಮೇಣವಾಗಿ ಭಾರತೀಯ ರೈಲ್ವೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ  ಸರ್ಕಾರವು ಕೈಗೊಂಡ ಕ್ರಮಗಳಿಂದ ಪ್ರತಿ ವರ್ಷವೂ ಇದು ತೀವ್ರಗೊಳ್ಳುತ್ತಿದೆ. ಖಾಸಗೀಕರಣ ಮತ್ತು  ವ್ಯಾಪಾರೀಕರಣದ ಕ್ರಮಗಳು ರೈಲ್ವೆ ಪ್ರಯಾಣಿಕರನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿವೆ. ರೈಲುಗಳಲ್ಲಿನ ದೂರದ ಪ್ರಯಾಣವು ದುಸ್ಸಾಧ್ಯವಾಗಿದೆ ಮತ್ತು ಸಾಮಾನ್ಯ ಜನರು ಅಸಹನೀಯ ಪರಿಸ್ಥಿತಿಗಳಲ್ಲಿ  ಪ್ರಯಾಣಿಸುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ರೈಲ್ವೆ ಪ್ರಯಾಣದಲ್ಲಿ ಸುರಕ್ಷತೆ ಎಂಬುದು ತೀವ್ರ  ಆತಂಕಕಾರಿಯಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಖಾತರಿ ಇಲ್ಲದಂತಾಗಿದೆ. 

ರೈಲ್ವೆಯಲ್ಲಿ 3.5 ಲಕ್ಷ ಸಿಬ್ಬಂದಿ ಕೊರತೆ ಇದೆ. ಗ್ರೂಪ್ ಸಿ ಮತ್ತು ಲೆವೆಲ್ 1 ವರ್ಗಗಳಲ್ಲಿ ಸುಮಾರು  2.74 ಲಕ್ಷ ಹುದ್ದೆಗಳು ಖಾಲಿ ಇವೆ. ಜೂನ್ 2023ರ ಅಂಕಿಅಂಶಗಳ ಪ್ರಕಾರ ಸುರಕ್ಷತಾ ವಿಭಾಗಗಳಲ್ಲೇ 1.7 ಲಕ್ಷ ಹುದ್ದೆಗಳು ಖಾಲಿ ಇವೆ. ಮೆಕ್ಯಾನಿಕ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ 1.57 ಲಕ್ಷ ಹುದ್ದೆಗಳು ಖಾಲಿ ಇವೆ. ಶುಚಿತ್ವ, ನಿರ್ವಹಣೆ ಮತ್ತು ಕೆಲವು ಭದ್ರತೆಗೆ ಸಂಬಂಧಿಸಿದ ವಿಭಾಗಗಳನ್ನು ಈಗಾಗಲೇ ಖಾಸಗಿ ಗುತ್ತಿಗೆದಾರರಿಗೆ ಹೊರಗುತ್ತಿಗೆ ನೀಡಲಾಗಿದೆ. ಅವರು ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗುವಂತೆ  ಅನರ್ಹರಾದ ಅಥವಾ ಸೂಕ್ತ ಅರ್ಹತೆ ಇಲ್ಲದ ಜನರನ್ನು ನೇಮಿಸಿಕೊಳ್ಳುತ್ತಾರೆ. ಇನ್ನು ಲೋಕೋ  ಪೈಲಟ್‌ಗಳ ಕೊರತೆಯೂ ಇದೆ. 2019 ರಿಂದ 2023 ರವರೆಗೆ ಒಟ್ಟು 162 ರೈಲು ಅಪಘಾತಗಳು  ಸಂಭವಿಸಿವೆ. ಇವುಗಳಲ್ಲಿ 118 ಹಳಿತಪ್ಪುವಿಕೆಗಳು ಮತ್ತು ಹದಿನಾರು ಒಂದಕ್ಕೊಂದು ಡಿಕ್ಕಿ ಅಪಘಾತಗಳು ಸೇರಿವೆ. ಖಾಲಿ ಹುದ್ದೆಗಳು ಭರ್ತಿಯಾಗದಿರುವುದರಿಂದಲೇ 2ನೇ ಜೂನ್ 2023ರ ಬಾಲಸೋರ್,  ಒರಿಸ್ಸಾದಂತಹ ಅಪಘಾತಗಳು ಸಂಭವಿಸಿವೆ. ಇದು ಈ ಶತಮಾನದಲ್ಲೇ ನಡೆದ ಅತ್ಯಂತ ಭೀಕರ  ದುರಂತವಾಗಿದೆ. 

ಈ ತೀವ್ರವಾದ ಸಿಬ್ಬಂದಿ ಕೊರತೆ ಕುರಿತು ಅಖಿಲ ಭಾರತ ಲೋಕೋ ರನ್ನಿಂಗ್ ಸ್ಟಾಫ್  ಅಸೋಸಿಯೇಷನ್ ಹಲವು ಬಾರಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ದೂರು ನೀಡಿದೆ. ಕೋಟ್ಯಂತರ  ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿರುವಾಗ, ಕೇಂದ್ರ ಸರ್ಕಾರವು ಖಾಲಿ ಇರುವ ಹುದ್ದೆಗಳನ್ನು  ತಕ್ಷಣವೇ ಭರ್ತಿ ಮಾಡಲು ಮತ್ತು ಸೇವೆಗಳ ವಿಸ್ತರಣೆಗೆ ಅನುಗುಣವಾಗಿ ಹೆಚ್ಚಿನ ಉದ್ಯೋಗಾವಕಾಶಗಳನ್ನು  ಸೃಷ್ಟಿಸಲು ಏಕೆ ಹಿಂಜರಿಯುತ್ತಿದೆ? 

ಉಲ್ಬಣಗೊಳ್ಳುತ್ತಿರುವ ನಿರುದ್ಯೋಗದಿಂದಾಗಿ, ದೇಶದ ಮೂಲೆ ಮೂಲೆಗಳಲ್ಲಿ ವಲಸೆ ಕಾರ್ಮಿಕರ ಸಂಖ್ಯೆ  ಹೆಚ್ಚುತ್ತಲೇ ಇದೆ. ಇದು ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ವಲಸೆ ಕಾರ್ಮಿಕರು ಕೈಗಾರಿಕೆಗಳು, ಕಟ್ಟಡ  ನಿಮಾ?ಣ, ಸಾರ್ವಜನಿಕ ಸೇವೆಗಳು ಮತ್ತು ಖಾಸಗಿ ವಲಯಗಳಲ್ಲಿ ದಿನಗೂಲಿಗಳಂತೆ ಕೆಲಸ ಮಾಡುತ್ತಿದ್ದಾರೆ.  ಅಂಗಡಿಗಳು, ಹೋಟೆಲ್‌ಗಳು, ಸಣ್ಣ ಕಾರ್ಖಾನೆಗಳು ಮತ್ತು ಕೃಷಿಯಲ್ಲಿಯೂ ಸಹ ಅವರನ್ನು ಅಗ್ಗದ  ಕೂಲಿ ಕಾರ್ಮಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿದೆ ಮತ್ತು ಹೆಚ್ಚು ಶೋಷಣೆ ಮಾಡಲಾಗುತ್ತಿದೆ. ಇಂತಹ  ವಲಸೆ ಕಾರ್ಮಿಕರೇ ಇಂದು ದೂರ ಪ್ರಯಾಣದ ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಲ್ಲಿ  ಪ್ರಯಾಣಿಸತ್ತಿದ್ದಾರೆ.  ಇದೆಲ್ಲದರ ಪರಿಣಾಮವಾಗಿ, ಪ್ರತಿ ರೈಲುಗಳೂ ಜನದಟ್ಟಣೆಯಿಂದ ಓಡುತ್ತಿವೆ, ಇದರ ನಿವಾರಣೆಗೆ  ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ. ಕಾಯ್ದಿರಿಸದ (ಗಖ) ಮತ್ತು ಸ್ಲೀಪರ್ (ಖಐ) ರೈಲುಗಳು ತುಂಬಾ ಜನದಟ್ಟಣೆಯಿಂದ ಕೂಡಿದ್ದು, ಶೌಚಾಲಯಗಳ ಒಳಗೆ ಸಹ 8 ರಿಂದ 10 ಜನರು ತಮ್ಮ ಸ್ಥಳಗಳನ್ನು  ತಲುಪಲು ಹೇಗಾದರೂ ಜಾಗ ಮಾಡಿಕೊಂಡು ಉಸಿರುಗಟ್ಟುವ ಪರಿಸ್ಥಿತಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ರೈಲ್ವೆ  ಅಧಿಕಾರಿಗಳು ಕಾಯ್ದಿರಿಸದ (ಯುಆರ್) ಬೋಗಿಗಳು ಮತ್ತು ಸ್ಲೀಪರ್ ಕ್ಲಾಸ್ (ಎಸ್‌ಎಲ್) ಬೋಗಿಗಳ  ಸಂಖ್ಯೆಯನ್ನು ಹೆಚ್ಚಿಸುವ ಬದಲು ಅವುಗಳ ಸಂಖ್ಯೆಯನ್ನು ಮೊಟಕುಗೊಳಿಸುತ್ತಿದ್ದಾರೆ, ಬದಲಿಗೆ ಎಸಿ  ಬೋಗಿಗಳನ್ನು ಹೆಚ್ಚಿಸುತ್ತಿದ್ದಾರೆ. ಸಾರ್ವಜನಿಕ ಉದ್ದಿಮೆಯಲ್ಲಿ ಇಂತಹ ಲಾಭದಾಹ ಯಾತಕ್ಕಾಗಿ? ರೈಲ್ವೆ  ಇಲಾಖೆಯು ಜನರ ಈ ಅಸಹಾಯಕ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಆದಾಯವನ್ನು  ಗಳಿಸುತ್ತಿದೆ. 

ಇಂತಹ ಹೀನಾಯ ಸನ್ನಿವೇಶದಲ್ಲಿ ನಾಗರಿಕ ಪ್ರಯಾಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ  ವಿಫಲವಾಗಿರುವ ಸರ್ಕಾರವು ಪ್ರಧಾನಿ ಮೋದಿಯವರಿಂದ ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸುತ್ತಲೇ ಇದೆ. ಈ ರೈಲುಗಳ ದರವು ಸಾಮಾನ್ಯ ಸೂಪರ್ ಫಾಸ್ಟ್‌ ಗಿಂತ ಆರರಿಂದ ಎಂಟು ಪಟ್ಟು ಹೆಚ್ಚಾಗಿದೆ.  ಮಧ್ಯಮ ವರ್ಗದವರೂ ಸಹ ಅದನ್ನು ಭರಿಸಲು ಸಾಧ್ಯವಿಲ್ಲ. ಅಲ್ಲದೆ, ಕೋವಿಡ್ 19ರ ಸಾಂಕ್ರಾಮಿಕದ ನೆಪದಲ್ಲಿ ಮೊಟಕುಗೊಳಿಸಲಾದ ವಿವಿಧ ವರ್ಗದ ಪ್ರಯಾಣಿಕರಿಗೆ ನೀಡಲಾಗಿದ್ದ ರಿಯಾಯಿತಿಗಳು, ರದ್ಧತಿ  ಶುಲ್ಕಗಳು, ರಿಯಾಯಿತಿ ದರ ಮೊದಲಾದ ಅನೇಕ ಕಲ್ಯಾಣ ಕ್ರಮಗಳನ್ನು ಇನ್ನೂ ಮರು ಚಾಲನೆಗೊಳಿಸಿಲ್ಲ. 

ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತೀಯ ರೈಲ್ವೆ ಸಾರ್ವಜನಿಕರಿಗೆ ಒಂದೊಂದಾಗಿ ಸೇವೆಗಳನ್ನು  ಮೊಟಕುಗೊಳಿಸುತ್ತಿದೆ. ಸೇವೆಗಳ ಖಾಸಗೀಕರಣ ಮತ್ತು ವ್ಯಾಪಾರೀಕರಣವು ಪೂರ್ಣ ಪ್ರಮಾಣಲ್ಲಿ ಭರದಿಂದ  ಸಾಗುತ್ತಿದೆ. ಕಲ್ಯಾಣ ರಾಜ್ಯದ ಪರಿಕಲ್ಪನೆಯಲ್ಲಿ ಕಟ್ಟಲಾದ ರೈಲ್ವೇ ವ್ಯವಸ್ಥೆಯನ್ನು ಬಂಡವಾಳಶಾಹಿ ವರ್ಗದ  ಹಿತಕ್ಕಾಗಿ ಅಡವಿಡಲಾಗುತ್ತಿದೆ. ಅಸಹಾಯಕ ಜನರಿಂದ ರೈಲ್ವೆ ಪ್ಲಾಟ್‌ಫಾರ್ಮ್ಗಳಲ್ಲಿ ಉಸಿರಾಟಕ್ಕೂ  ಹಣವನ್ನು ಕೇಳುವ ದಿನಗಳು ದೂರವಿಲ್ಲ. ಸೇವಾಧಾರಿತ ಸಾರ್ವಜನಿಕ ಸಂಸ್ಥೆಯಾದ ಭಾರತೀಯ ರೈಲ್ವೆಯನ್ನು ಹಸಿದ ಖಾಸಗಿ  ಬಂಡವಾಳಿಗರ ಲಾಭಕ್ಕಾಗಿ ಒಂದು ಉದ್ಯಮವನ್ನಾಗಿ ಪರಿವರ್ತಿಸಲು ಮತ್ತು ನಮ್ಮ ಜನರು ಕಷ್ಟಪಟ್ಟು  ಸಂಪಾದಿಸಿದ ಹಕ್ಕುಗಳನ್ನು ಕಿತ್ತೆಸಯಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರದ ಲಾಭಕೋರ ಕ್ರಮಗಳ  ವಿರುದ್ಧ ಇಂದು ನಾವು ಸಂಘಟಿತರಾಗಿ ಪ್ರಬಲ ಜನಾಂದೋಲನವನ್ನು ಬೆಳೆಸುವ ತುರ್ತು ನಮ್ಮ ಮುಂದಿದೆ.   

ಆದ್ದರಿಂದ, ಈ ಸಂದರ್ಭದಲ್ಲಿ ನಮ್ಮ ಆಗ್ರಹಗಳೇನೆಂದರೆ: 

ಭಾರತೀಯ ರೈಲ್ವೆಯ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ನಿಲ್ಲಿಸಿ. ಎಲ್ಲಾ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿ ಮತ್ತು ರೈಲ್ವೆ ಸೇವೆಗಳ ವಿಸ್ತರಣೆಗೆ ಅನುಗುಣವಾಗಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಿ. ರೈಲುಗಳಲ್ಲಿ ಕಾಯ್ದಿರಿಸದ ಮತ್ತು ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್‌ಗಳನ್ನು ಹೆಚ್ಚಿಸಿ.  ವಲಸೆ ಕಾರ್ಮಿಕರಿಗಾಗಿ ಸಂಪೂರ್ಣ ಕಾಯ್ದಿರಿಸದ ರೈಲುಗಳನ್ನು ಓಡಿಸಿ.ಹಿರಿಯ ನಾಗರಿಕರ ರಿಯಾಯಿತಿಗಳನ್ನು ಮರುಸ್ಥಾಪಿಸಿ. ತತ್ಕಾಲ್ ಪ್ರೀಮಿಯಂ ಸುಲಿಗೆಯನ್ನು  ಕೊನೆಗೊಳಿಸಿ. ಬುಕ್ ಮಾಡಿದ ಟಿಕೆಟ್‌ಗಳ ಮೇಲಿನ ರದ್ದತಿ ಶುಲ್ಕಗಳನ್ನು ತೆಗೆದುಹಾಕಬೇಕು. 

ಈ ಸಂದರ್ಭದಲ್ಲಿ ಭವಾನಿ ಶಂಕರ್ ಗೌಡ, ಜಿಲ್ಲಾ ಕಾರ್ಯದರ್ಶಿಯಾದ ರಣಜಿತ್ ಧೂಪದ, ಜಿಲ್ಲಾ ಸಂಘಟನಾಕಾರರಾದ ಪ್ರೀತಿ ಸಿಂಗಾಡಿ, ಸಿಮೋನ್ ಸೂರ್ಯವಂಶಿ, ಮಹೇಶ್, ಮಂಜುನಾಥ್ ಭಾಗಿಯಾಗಿದ್ದರು. 


ಸುದ್ದಿ ಓದಿ