ಸಫಲತೆಯ ಮೆಟ್ಟಿಲು ಹತ್ತಲು ಶಿಕ್ಷಕರ ಮಾರ್ಗದರ್ಶನ ಅಗತ್ಯ
ರಾಣಿಬೆನ್ನೂರ:11 ವಿದ್ಯಾರ್ಥಿಯು ಸಮಾಜದಲ್ಲಿ ಉತ್ತಮ ಪ್ರಜೆಯಾಗ ಬೇಕಾದರೆ, ವ್ಯಕ್ತಿತ್ವ ರೂಪಿಸುವ ಕೆಲಸ ಪ್ರಾಥಮಿಕ ಶಾಲಾ ಹಂತದಿಂದಲೇ ಆರಂಭಿಸಬೇಕು. ಸಫಲತೆಯ ಮೆಟ್ಟಿಲು ಹತ್ತಲು ಶಿಕ್ಷಕರ ಮಾರ್ಗದರ್ಶನ ಅಗತ್ಯ. ಪರಿಶ್ರಮ ಕಡಿಮೆಯಾಗಬಾರದು. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ತಾನಾಗಿಯೇ ಸಿಗುವುದಿಲ್ಲ, ಅದಕ್ಕಾಗಿ ಅವಿರತ ಶ್ರಮ, ಬದ್ಧತೆ ಬೇಕಾಗುತ್ತದೆ. ವಿದ್ಯಾರ್ಥಿಗಳು ವಿಷಯಗಳನ್ನು ಅರ್ಥೈಸಿಕೊಂಡು ಅಧ್ಯಯನ ಕೈಗೊಳ್ಳಬೇಕು ಎಂದು ತಹಶೀಲ್ದಾರ ಹನುಮಂತಪ್ಪ ಶಿರಹಟ್ಟಿ ಹೇಳಿದರು.
ಬುಧವಾರ ನಗರದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪತ್ತಿನ ಸಹಕಾರಿ ಸಂಘದ ಸಭಾಭವನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಗ್ರಾಮ ವಿಕಾಸ ಸೊಸೈಟಿ ಧಾರವಾಡ ಮತ್ತು ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಮಂಗಳೂರು ಇವರ ಆಶ್ರಯದಲ್ಲಿ ಲನಿಂರ್ಗ್ ಮೇಡ್ ಈಜಿ ವಿತ್ ಪೊಸಿಟಿವ್ ಎನರ್ಜಿ ಎಂಬ ವಿಷಯದ ಕುರಿತು ತಾಲೂಕಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆಗಾಗಿ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಜೀವನ ಶೈನ್ ಮಾಡಲು ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ಈ ವರ್ಷ ಹಬ್ಬ ಹರಿದಿನ, ಜಾತ್ರೆ, ಅಜ್ಜಿ ಊರು ಇದಕ್ಕೆಲ್ಲ ಕಡಿವಾಣ ಹಾಕಿ ತ್ಯಾಗ ಮಾಡಬೇಕು. ಈ ಬಾರಿ ವಾರ್ಷಿಕ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ತಾಲ್ಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆಯಿಂದ ನಗರದಲ್ಲಿ ಮೆರವಣಿಗೆ ಮಾಡಲಾಗುವುದು. ಅಲ್ಲದೇ 10 ಸಾವಿರ ರೂ. ಬಹುಮಾನ ನೀಡಲಾಗುವುದು. ಕಳೆದ ಬಾರಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಣೆಬೆನ್ನೂರಿನ ಇಬ್ಬರು ವಿದ್ಯಾರ್ಥಿನಿಯರು ಹೆಚ್ಚು ಅಂಕಗಳನ್ನು ಗಳಿಸಿದ್ದರು ಎಂದರು.
ಈ ಬಾರಿ ತಾಲ್ಲೂಕಿನ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಾಧನೆಗೆ ಮುಂದಾಗಬೇಕು. ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಹೆಚ್ಚಾಗಬೇಕು. ನಿಮಗೆ ಪರೀಕ್ಷೆಗೆ ಬೇಕಾದ ಎಲ್ಲ ಸಹಾಕಾರ ಸೌಲಭ್ಯ ನೀಡಲು ಇಲಾಖೆ ಬದ್ಧವಾಗಿದೆ. ಶಾಲೆಗಳಲ್ಲಿ ಪೊಷಕರ ಸಭೆ, ತಾಯಂದಿರ ಸಭೆ ನಡೆಸಲಾಗಿದೆ. ಪರಸ್ಪರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ, ರವಿವಾರ ವಿಶೇಷ ತರಗತಿಗಳು, ಕ್ವಿಝ್, ಮಕ್ಕಳ ಮನೆ ಮನೆ ಭೇಟಿ, ಸೆಲ್ಪಿ ವಿತ್ ಮಾನಿಂರ್ಗ್ ಸ್ಟಡಿ, ಸೆಮಿನಾರ್, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗಿದೆ. ದಸರಾ ರಜೆಯಲ್ಲಿ ಕೂಡ ಮಕ್ಕಳ ಓದಿನೊಂದಿಗೆ ಸಂಪರ್ಕದಲ್ಲಿದ್ದೇವೆ. ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಪ್ರತಿ ದಿನ ಸಂಜೆ ಶಿಕ್ಷಕರಿಂದ ವಿಶೇಷ ತರಗತಿ ತೆಗೆದುಕೊಳ್ಳಲಾಗಿದೆ. ಪ್ರಯತ್ನ ಮತ್ತು ಸಹಕಾರದೊಂದಿಗೆ ತಾಲ್ಲೂಕಿನ ಫಲಿತಾಂಶ ಹೆಚ್ಚಿಸುವಲ್ಲಿ ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದರು.
ಮಂಗಳೂರಿನ ಯೂನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಸಂಪನ್ಮೂಲ ವ್ಯಕ್ತಿಗಳಾದ ಸುಮಿತಾ ಶಣೈ, ಸುಬ್ರಮಣ್ಯ ಹಾಗೂ ಸುಮಲತಾ ಅವರು ಮೂರು ಗಂಟೆಗಳ ಕಾಲ ವಾರ್ಷಿಕ ಪರೀಕ್ಷೆ ಬಗ್ಗೆ ತರಬೇತಿ ನೀಡಿದರು. 700 ನೂರಕ್ಕು ಹೆಚ್ಚು ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುತ್ತೇವೆ ಎಂಬ ಭರವಸೆಯನ್ನು ವಿದ್ಯಾರ್ಥಿಗಳು ಶಿಕ್ಷಕರಿಗೆ ಹೇಳಿದರು
ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಂಜು ನಾಯಕ, ಉಪನಿರ್ದೇಶಕರ ಕಚೇರಿಯ ವಿಷಯ ಪರೀವೀಕ್ಷಕ ಮಂಜಪ್ಪ, ದೈಹಿಕ ಶಿಕ್ಷಣ ಅಧಿಕಾರಿ ಹನುಮಂತಪ್ಪ, ನಾಗರಾಜ ಬಣಕಾರ, ರಮೇಶ ಚಲವಾದಿ, ರಮೇಶ, ಎಫ್.ಕೆ. ಬಿಸಲಹಳ್ಳಿ, ಗಂಗಪ್ಪ ನಾಯಕ, ಎನ್.ಎಚ್. ಮೇಗಳಮನಿ, ಚಂದ್ರು ದೇವಾಂಗದ, ಮಂಜುನಾಥ, ರಾಜೇಶ ಮುದ್ದಿ ಮತ್ತು ವಿವಿಧ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಇದ್ದರು.