65 ಸಾವಿರ ಜನರಿಗೆ ಎರಡನೇ ಹಂತದ ವ್ಯಾಕ್ಸಿನ್: ವೈದ್ಯಾಧಿಕಾರಿ ಕಾಗೆ
ಕಾಗವಾಡ 07: ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ 18 ವರ್ಷ ಮೇಲ್ಪಟ್ಟ 3ಲಕ್ಷ 90 ಸಾವಿರ ಜನರಲ್ಲಿ 3 ಲಕ್ಷ ಜನರಿಗೆ ಮೊದಲ ಹಂತದ ಲಸಿಕೆ ನೀಡಲಾಗಿದ್ದು, ಎರಡನೇ ಹಂತದ ಲಸಿಕೆಯನ್ನು 65 ಸಾವಿರ ಜನರಿಗೆ ವ್ಯಾಕ್ಸಿನ್ ಹಾಕಲಾಗಿದೆ. ಎಂದು ಅಥಣಿ ತಾಲೂಕಾ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ತಿಳಿಸಿದರು.
ಇಂದು ಕೃಷ್ಣಾ ಕಿತ್ತೂರ ಗ್ರಾಮಕ್ಕೆ ಭೇಟ್ಟಿ ನೀಡಿ ಮಾತನಾಡಿದ ಅವರು ಈಗಾಗಲೇ ಮುಖ್ಯಮಂತ್ರಿಗಳ ಹಾಗೂ ಆರೋಗ್ಯ ಸಚಿವರ ಸೂಚನೆಯ ಮೇರೆಗೆ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಸಹಯೋಗದೊಂದಿಗೆ ಪ್ರತಿ ಬುಧವಾರ ವ್ಯಾಕ್ಸಿನ್ ಮೇಳ ಮಾಡುತ್ತಿದ್ದು, ಮೊದಲನೇ ಹಾಗೂ ಎರಡನೇ ಹಂತದ ಲಸಿಕೆ ನೀಡಲಾಗುತ್ತಿದೆ ಎಂದು ಡಾ.ಕಾಗೆ ತಿಳಿಸಿದರು.
ಆರೋಗ್ಯ ಸಚಿವರು ಒಂದು ಸಿಹಿ ಸುದ್ದಿಯನ್ನು ನೀಡಿದ್ದು ಸಪ್ಟೆಂಬರ ಕೊನೆಯ ವಾರದೊಳಗಾಗಿ ಮೊದಲನೇ ಹಂತದ ಲಸಿಕೆಪೂರ್ಣಗೊಳಿಸುವುದು ಮತ್ತು ನವ್ಹೆಂಬರ ಕೊನೆಯೊಳಗಾಗಿ ಎರಡನೇ ಹಂತದ ವ್ಯಾಕ್ಸಿನ್ ಹಾಕುವ ಕಾರ್ಯ ಬಹುತೇಕ ಪೂರ್ಣಗೊಳ್ಳಲಿದೆ. ಆ ನಿಟ್ಟಿನಲ್ಲಿ ನಮ್ಮ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಕಾಗೆ ಹೇಳಿದರು.
ದೇಶದಲ್ಲಿಂದು ಮಹಾಮಾರಿ ಕೊರೊನಾ ಹರಡಿದ್ದು ಅದನ್ನು ತಡೆಗಟ್ಟಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಆರೋಗ್ಯ ಇಲಾಖೆಯ ಮೂಲಕ ಮನೆ ಬಾಗಿಲಿಗೆ ಬಂದು ಲಸಿಕೆ ನೀಡುತ್ತಿದ್ದು ಪ್ರತಿಯೊಬ್ಬರು ಪುರುಷರು ಹಾಗೂ ಮಹಿಳೆಯರು ಹೆದರದೆ ಧೈರ್ಯದಿಂದ ಬಂದು ಲಸಿಕೆ ಪಡೆದು ಆರೋಗ್ಯವಂತರಾಗಿರಿ ಎಂದು ಗೀತಾ ಪೂಜಾರಿ ಹೇಳಿದರು.
ಲಸಿಕೆ ಪಡೆದ 15 ನಿಮಿಷಗಳ ಕಾಲ ವಿಶ್ರಾಂತಿ ಪಡೆದು ಮನೆಗಳಿಗೆ ತೆರಳಬಹುದೆಂದು ಹೇಳಿದರು.
ಈ ಅಭಿಯಾನದಲ್ಲಿ ಐನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕ ಕೆ.ಬಿ.ಪವಾರ, ಆರೋಗ್ಯ ನಿರಿಕ್ಷಕಿ ಎಂ.ಎಂ.ಕುಡಲಗಿ ಲಸಿಕೆ ನೀಡಿದರು.
ಸಾಮಾಜಿಕ ಕಾರ್ಯಕರ್ತ ರಾಜು ಮದನೆ, ಅಪ್ಪು ಮಗದುಮ್, ಪ್ರಕಾಶ ಕಲಾಲ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಅನೇಕ ಮುಖಂಡರು ಲಸಿಕೆ ಪಡೆದರು.