ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಿದ ಕನ್ನಡಿಗರ ಮೇಲೆ ಮರಾಠಿಗರ ಪುಂಡಾಟಿಕೆ ಖಂಡನೀಯ: ಮುಖ್ಯಮಂತ್ರಿ ಚಂದ್ರು
ಬೆಂಗಳೂರು,
ಆಗುಸ್ಟ್ 28: ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದ ಮುಖ್ಯ ವೃತ್ತದಲ್ಲಿ ಕನ್ನಡ ಹೋರಾಟಗಾರರು
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಿರುವುದರ ವಿರುದ್ಧ ಮರಾಠಿಗರು ಪುಂಡಾಟಿಕೆ ನಡೆಸುತ್ತಿರುವುದನ್ನು
ಚಿತ್ರನಟ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಕನ್ನಡ ಗೆಳೆಯರ ಬಳಗದ ಸಂಚಾಲಕ
ಮುಖ್ಯಮಂತ್ರಿ ಚಂದ್ರು ಖಂಡಿಸಿದ್ದಾರೆ.
ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮನಾದ ಕನ್ನಡ ಕಲಿಯ ಪ್ರತಿಮೆಯ ಸ್ಥಾಪನೆಗೆ ಸರ್ಕಾರ ಮೀನಾ ಮೇಷ ಎಣಿಸುತ್ತಿದ್ದಾಗ ಪ್ರತಿಮೆ ಸ್ಥಾಪಿಸಿದ ಕನ್ನಡ ಕಲಿಗಳ ಕೆಚ್ಚು ಅಭಿನಂದನೀಯವಾದದ್ದು. ಆದರೆ ಇದನ್ನು ಒಪ್ಪದ ಮರಾಠಿ ಪುಂಡರು ದಾಂದಲೆ ನಡೆಸಿರುವುದು ಸರಿಯಲ್ಲ. ಅಲ್ಲದೇ 20 ಕನ್ನಡಿಗರ ಮೇಲೆ ಸರ್ಕಾರ ಮೊಕದ್ದಮೆ ಹೂಡಿರುವುದನ್ನು ಖಂಡಿಸುತ್ತೇನೆ ಎಂದಿದ್ದಾರೆ.
ರಾಯಣ್ಣನ ಪ್ರತಿಮೆ ಸ್ಥಾಪನೆ ವಿರೋಧಿಸಿ ಮಹಾರಾಷ್ಟ್ರ ಏಕಿಕರಣ ಸಮಿತಿಯ ಪುಂಡರು ಕನ್ನಡಿಗರ ಮೇಲೆ ಕಲ್ಲು ತೂರಿ, ಚಪ್ಪಲಿ ಎಸೆದು ಹಲ್ಲೆ ನಡೆಸಿ, ಅದೇ ಸ್ಥಳದಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ಮುಂದಾದಾಗ ಪೊಲೀಸರು ಬೆತ್ತ ಪ್ರಹಾರ ನಡೆಸಿದರು. ಈ ವಿಷಯ ತಿಳಿದ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ, ಎಂ.ಇ.ಎಸ್.ನವರ ಮೇಲೆ ಲಾಠಿ ಪ್ರಹಾರ ನಡೆಸದಂತೆ ಸೂಚಿಸಿದ್ದಾರೆ. ಇದು ಕನ್ನಡಿಗರಿಗೆ ಎಸದ ದ್ರೋಹ ಎಂದು ಟೀಕಿಸಿದ್ದಾರೆ.
ಕನ್ನಡಿಗರ ಮತದಿಂದ ಆಯ್ಕೆಯಾಗಿ ಮಂತ್ರಿಯಾಗಿರುವವರು ಕನ್ನಡಿಗರ ಬಗ್ಗೆ ನಡೆದುಕೊಳ್ಳುವ ರೀತಿ ಸರಿಯಲ್ಲ. ಕನ್ನಡನಾಡಿನ ವೀರಪುತ್ರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗದಿದ್ದರೆ ಇನ್ನೆಲ್ಲಿ ಸ್ಥಾಪಿಸಲಾದೀತು ಎಂಬುದನ್ನು ನಮ್ಮ ನಾಯಕರು ಯೋಚಿಸಬೇಕು. ಮರಾಠಿಗರ ಪುಂಡಾಟಿಕೆ ಇನ್ನು ಸಹಿಸಲಾಗದು, ಇದಕ್ಕೆ ಅಂತ್ಯ ಹಾಡಲೇ ಬೇಕು. ಬೆಳಗಾವಿ ಜಿಲ್ಲೆಯ ಶಾಸಕರು, ಸಂಸದರು ಮರಾಠಗರ ಮತಕ್ಕಾಗಿ ಕನ್ನಡದ ಹಿತ ಕಡೆಗಣಿಸುವುದನ್ನು ಸಹಿಸಲಾಗದು. ಕರ್ನಾಟಕ ಸರ್ಕಾರವೂ ಈ ವಿಚಾರದಲ್ಲಿ ಕಣ್ಣುಮುಚ್ಚಿ ಕೂತಿದೆಯೇ ಎಂಬ ಅನುಮಾನ ಬರುತ್ತದೆ. ಕನ್ನಡ ಸಂಘಟನೆಗಳು ಮರಾಠಿಗರ ಪುಂಡಾಟಿಕೆಗೆ ಸರಿಯಾದ ಉತ್ತರ ನೀಡಲು ಮುಂದಾಗಬೇಕು. ಮರಾಠಿಗರ ಪರವಾಗಿರುವ ಜನಪ್ರತಿನಿಧಿಗಳಿಗೆ ಸೂಕ್ತ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ.