ಬರುವ ಜೂನ ತಿಂಗಳಲ್ಲಿ ಗಿಡಗಳನ್ನು ನೆಡಲು ಮನವಿ
ಧಾರವಾಡ 01: ಮಹಾನಗರ ಪಾಲಿಕೆಯು ಒಂದು ಲಕ್ಷ ಗಿಡಗಳನ್ನು ನೆಡಲು ನಿರ್ಧರಿಸಿದ್ದು ಮಳೆಗಾಲ ಇದೀಗ ಮುಗಿಯುತ್ತಿರುವುದರಿಂದ ಈಗ ಲಕ್ಷ ಗಿಡಗಳನ್ನು ನೆಡಬಾರದು. ನೆಟ್ಟರೆ ಸೂಕ್ತ ನೀರು, ವಾತಾವರಣ ಇಲ್ಲದೇ ಅವು ಬದುಕುವ ಸಾಧ್ಯತೆ ಕಡಿಮೆ. ಕಾರಣ ಹಚ್ಚುವ ಜಾಗ, ಜವಾಬ್ದಾರಿ ತೆಗೆದುಕೊಳ್ಳುವ ಜನರನ್ನು ನಿರ್ಧಾರ ಮಾಡಿ, ಅಲ್ಲಿಯವರೆಗೆ ಗಿಡಗಳನ್ನು ಜೋಪಾನವಾಗಿ ಕಾಯ್ದಿರಿಸಿಕೊಂಡು ಬರುವ ಜೂನ ತಿಂಗಳಲ್ಲಿ ಗಿಡಗಳನ್ನು ಹಚ್ಚಬೇಕು ಎಂದು ?ಪರಿಸರಕ್ಕಾಗಿ ನಾವು' ಸಂಘಟನೆಯ ಸದಸ್ಯರು ಇಂದು ಮಹಾನಗರ ಪಾಲಿಕೆಯ ಆಯುಕ್ತ ಈಶ್ವರ ಉಳ್ಳಾಗಡ್ಡಿಯವರಿಗೆ ಮನವಿಯನ್ನು ಸಲ್ಲಿಸಿದರು.
ಈಗ ಗಿಡಗಳನ್ನು ನೆಡಲು ಅವಸರ ಮಾಡುವ ಬದಲಿಗೆ ಕಾಂಕ್ರಿಟೀಕರಣದಿಂದ ಗಂಟಲು ಕಟ್ಟಿದಂತಾಗಿರುವ ಗಿಡಗಳ ಸುತ್ತ ಕಾಂಕ್ರೀಟ್ ಬಿಡಿಸಿ ಅವು ಸರಿಯಾಗಿ ಬೆಳೆಯುವಂತೆ ಮಾಡಬೇಕು ಎಂದು ಸಂಘಟನೆಯವರು ವಿನಂತಿ ಮಾಡಿದರು.
ಇನ್ನೂ ಒಂದು ಮನವಿಯನ್ನು ಸಲ್ಲಿಸಿ ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದ ಆವರಣದಲ್ಲಿ ಮಹಾನಗರ ಪಾಲಿಕೆಯ ಎಲ್ಲ ಕಸದ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಕಡಪಾ ರಾಘವೇಂದ್ರರಾಯರು ಆ ಬಯಲು ಜಾಗವನ್ನು ಮಹಾನಗರ ಪಾಲಿಕೆಗೆ ಒಳ್ಳೆಯ ಉಪಯೋಗಕ್ಕಾಗಿ ಉಚಿತವಾಗಿ ನೀಡಿದ್ದಾರೆ. ಧಾರವಾಡದ ಹೆಮ್ಮೆಯ ಪದ್ಮಶ್ರೀ ಡಾ. ಮಲ್ಲಿಕಾರ್ಜುನ ಮನಸೂರ ಅವರ ಹೆಸರಲ್ಲಿ ಕಲಾಭವನ ಇದೆ. ಅಲ್ಲಿ ನಗರದ ಎಲ್ಲಾ ಕಸದ ವಾಹನಗಳನ್ನು ನಿಲ್ಲಿಸುತ್ತಿದ್ದು ಧಾರವಾಡ ನಗರ ಕೇಂದ್ರದ ಸೌಂದರ್ಯಕ್ಕೇ ಮಾಡಿದ ಅವಮಾನ. ಸದಾ ನಾರುತ್ತಿರುವ ಈ ಪ್ರದೇಶ ಅಲ್ಲದೆ ಸಾರ್ವಜನಿಕರಿಗೆ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತಿರುವುದರಿಂದ ಕಸದ ಗಾಡಿಗಳನ್ನು ಸ್ಥಳಾಂತರ ಮಾಡಿ ಎಂದು ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದರು.
ಮಹಾನಗರದಲ್ಲಿ ಕಸದ ವಿಂಗಡಣೆ ಮತ್ತು ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಗಟಾರು ನೀರು ಶುದ್ಧೀಕರಣ ಘಟಕಗಳು ಒಂದೂ ಕಾರ್ಯ ನಿರ್ವಹಿಸುತ್ತಿಲ್ಲ ಈ ಬಗ್ಗೆ ತ್ವರಿತವಾಗಿ ಕೆಲಸ ಆಗಬೇಕು ಎಂದು ಒತ್ತಾಯಿಸಿದರು. ಆಯುಕ್ತರನ್ನ ಭೆೆಟ್ಟಿ ಆದ ನಿಯೋಗದಲ್ಲಿ ಧಾರವಾಡ ಪರಿಸರಕ್ಕಾಗಿ ನಾವು ಸಂಘಟನೆ'ಯ ಲಿನೆಟ್ ಡಿಸಿಲ್ವಾ, ಕವಿತಾ ಎಲೆದಹಳ್ಳಿ, ಶಾರದಾ ದಾಬಡೆ, ಸರಸ್ವತಿ ಪೂಜಾರ, ಡೇಸಿ, ದೀಪಕ ಕಟ್ಟಿಮನಿ ಇದ್ದರು