ಮದನಭಾವಿ ಗ್ರಾಮದ ಗ್ರಾಮ ಸಭೆಯಲ್ಲಿ ಸಾರ್ವಜನಿಕರಿಗೆ ಡೆಂಗ್ಯೂ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ
ಧಾರವಾಡ,01: ಡ್ರಮ್, ಬ್ಯಾರಲ್ ಮತ್ತು ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿದ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಜಾಗೃತಿ ಮೂಡಿಸಿ ಕೋಟುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ಸಿ.ಪಿ. ಮಾತನಾಡಿದರು.
ಡೆಂಗ್ಯೂ ಜ್ವರಕ್ಕೆ ನಿರ್ದಿಷ್ಟ ಚಿಕಿತ್ಸೆಯಿಲ್ಲ ಬದಲಾಗಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ತಪ್ಪದೇ ಅನುಸರಿಸಿ ರೋಗದಿಂದ ದೂರ ಉಳಿಯಬೇಕು ಎಂದು ಕೋಟುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ಸಿ.ಪಿ. ತಿಳಿಸಿದರು.
ಈಡೀಸ್ ಜಾತಿಯ ಸೋಂಕು ಹೊಂದಿದ ಸೊಳ್ಳೆಗಳು, ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ವೃದ್ದರು, ಗರ್ಭಿಣಿಯರು ಹಾಗೂ ಮಕ್ಕಳು ಸೊಳ್ಳೆ ಪರದೆಯನ್ನು ಕಡ್ಡಾಯವಾಗಿ ಬಳಸಬೇಕು. ಅಥವಾ ಸೊಳ್ಳೆ ಬತ್ತಿ, ಮಲಾಮು ಇತ್ಯಾದಿ ಸೊಳ್ಳೆ ನಿರೋಧಕಗಳನ್ನು ಉಪಯೋಗಿಸುವುದು ಉತ್ತಮ. ಈಡೀಸ್ ಲಾರ್ವಾ ಸಮೀಕ್ಷೆಗಾಗಿ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಾರ್ವಜನಿಕರು ಸಹಕರಿಸುವುದರೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ನೀಡುವ ಸಲಹೆಗಳನ್ನು ಪಾಲಿಸಬೇಕು. ಸೊಳ್ಳೆಗಳು ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸಬೇಕು ಎಂದು ಸಲಹೆ ನೀಡಿದರು.
ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು, ವಾಕರಿಕೆ, ವಾಂತಿ, ಮೈಮೇಲೆ ಚಿಕ್ಕ ಚಿಕ್ಕ ಗುಳ್ಳೆಯ ಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್. ಎಸ್. ಹಜೇರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶೋಭಾ ಗುಳೇದಕೊಪ್ಪ, ಪಂಚಾಯತ್ ಅಭಿವ್ರದ್ಧಿ ಅಧಿಕಾರಿಗಳಾದ ಎಸ್. ಬೆಟದೂರ ಕಾರ್ಯದರ್ಶಿ ಮಹಾವೀರ ದೇವಲಾಪೂರ, ಪಿ.ಎಸ್.ಐ ಗರಗ ಎಫ್. ಎಮ್ ಮಂಟೂರ, ಗ್ರಾಮ ಪಂಚಾಯತಿಯ ಸದಸ್ಯ ಕಸ್ತೂರೆವ್ವ ದೊಡವಾಡ, ಮಂಜುನಾಥ ಪಾಟೀಲ, ಸಂತೋಷ ಪಾಟೀಲ, ಗಂಗಪ್ಪಾ ತೊಟಗಿ, ಮಂಜುನಾಥ ಗುಳೇದಕೊಪ್ಪ ಹಾಗೂ ಇತರರು ಉಪಸ್ಥಿತರಿದ್ದರು.