ಸ್ಮರಣೀಯ ಸೇವೆಯಿಂದ ಸಾರ್ಥಕ ಭಾವ ಮೂಡುತ್ತದೆ: ಪ್ಯಾಟಿ
ಲೋಕದರ್ಶನ ವರದಿ
ಬೈಲಹೊಂಗಲ 03: ಶಿಕ್ಷಕ ಹುದ್ದೆ ಅತ್ಯಂತ ಪವಿತ್ರವಾದದ್ದು. ಆದ್ದರಿಂದ ಸೇವಾರಂಭದಿಂದ ಕೊನೆಯವರೆಗೂ ಶಿಷ್ಯಂದಿರು ಮತ್ತು ಸಮಾಜದ ಪ್ರತಿಯೊಬ್ಬರ ಹೃದಯದಲ್ಲಿ ಸದಾಕಾಲ ಸ್ಮರಣೀಯರಾಗಿ ಉಳಿದರೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಕ್ಕೆ ಜೀವನದಲ್ಲಿ ಸಾರ್ಥಕ ಭಾವ ಮೂಡುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ಹೇಳಿದರು.
ಅವರು ತಾಲೂಕಿನ ದೊಡವಾಡ ಗ್ರಾಮದ ಶಾಂತಿನಗರದಲ್ಲಿನ ಹೊಸ ಬಡಾವಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಿ.ಸಿ.ಬೆಳವಡಿ ಸೇವಾ ನಿವೃತ್ತಿ ಹೊಂದಿದ ನಿಮಿತ್ತ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಜಿ.ಸಿ.ಬೆಳವಡಿ ಗುರುಗಳು ಮುಖ್ಯ ಶಿಕ್ಷಕರಾಗಿ ಅಷ್ಟೇ ಅಲ್ಲದೆ ನೂರಾರು ಮಕ್ಕಳಿಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತ ಯೋಗ ಗುರುವಾಗಿ, ಸಮಾಜದ ವಿವಿಧ ಕ್ಷೇತ್ರಗಳ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಪಾರ ಜನರ ಪ್ರೀತಿ ಗಳಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ, ಆರ್ಪಿ ರಾಜು ಹಕ್ಕಿ, ನಿವೃತ್ತ ಶಿಕ್ಷಕ ಆರ್.ವಿ.ರಾಚಣ್ಣವರ, ದಾರವಾಡ ತಾಪಂ ಮಾಜಿ ಅಧ್ಯಕ್ಷೆ ಸುಮಿತ್ರಾ ಗೋಸಲ ಮಾತನಾಡಿದರು.
ಹಿರೇಮಠದ ಜಡಿಸಿದ್ದೇಶ್ವರ ಸ್ವಾಮಿಜಿ, ಹುಬ್ಬಳ್ಳಿ ಇಂಚಗೇರಿ ಶಾಖಾ ಮಠದ ಗೋಪಾಲ ಮಹಾರಾಜರು ಆಶೀರ್ವಚನ ನೀಡಿದರು.
ಎಸ್ಡಿಎಂಸಿ ಅಧ್ಯಕ್ಷ ಸುರೇಶ ಸಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಬಾಳಪ್ಪ ಚೌಡಣ್ಣವರ, ಚನ್ನಪ್ಪ ಧಾರವಾಡ ಶಂಕ್ರೆಪ್ಪ ಕೌಜಲಗಿ ಮಹಾರಾಜ, ಶಿವನಪ್ಪ ಚೌಡಣ್ಣವರ, ಮಲ್ಲಪ್ಪ ಅಂದಾನಶೆಟ್ಟಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಬುಡರಕಟ್ಟಿ, ಬೆಳವಡಿ ಕ್ಲಷ್ಟರ್ನ ಎಲ್ಲ ಶಾಲೆಗಳ ಶಿಕ್ಷಕರು ಹಾಗೂ ವಿವಿಧ ಸಂಘ ಸಂಸ್ಥೆಗಳವರು ಮತ್ತು ಅವರ ಅಭಿಮಾನಿಗಳು, ಶಿಷ್ಯಂದಿರು ಜಿ.ಸಿ.ಬೆಳವಡಿಯವರನ್ನು ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿದರು. ಶಿಕ್ಷಕರಾದ ಎಮ್.ಎಸ್.ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಆರ್.ವಿ.ಪರ್ವತಗೌಡರ ಪರಿಚಯಿಸಿದರು. ಸಿ.ಡಿ.ಹಂಜಿ ಸ್ವಾಗತಿಸಿದರು. ಆರ್.ಎ.ಭಜಂತ್ರಿ ವಂದಿಸಿದರು. ಗ್ರಾಮದ ಪ್ರಮುಖರು, ವಿದ್ಯಾರ್ಥಿಗಳು ಸೇರಿದ್ದರು.