ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಸಚಿವರಿಗೆ ಮನವಿ
ರಾಜ್ಯ ಸರಕಾರಿ ನೌಕರ ಸಂಘದಿಂದ ಬೃಹತ್ ಮೆರವಣಿಗೆ
ಧಾರವಾಡ, ಜುಲೈ.12: ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಜಾರಿಗೊಳಿಸಲು ಸೂಕ್ತ ಕ್ರಮ ಕೃಗೊಳ್ಳುವಂತೆ ಮತ್ತು ಎನ್.ಪಿ.ಎಸ್ ರದ್ದತಿ, ಓಪಿಎಸ್ ಸೌಲಭ್ಯ, ಆರೋಗ್ಯ ಸಂಜೀವಿನ ಜಾರಿ ಮತ್ತು 7ನೇ ವೇತನ ಆಯೋಗ ಜಾರಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ನೇತೃತ್ವದಲ್ಲಿ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಇಂದು ಬೆಳಿಗ್ಗೆ ಧಾರವಾಡದಲ್ಲಿ ಮನವಿ ಅರ್ಸಲಾಯಿತು.
ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರಿ ಆದೇಶ ಹೊರಡಿಸಬೇಕು. ಈ ಹಿಂದಿನ 6 ನೇ ವೇತನ ಆಯೋಗವು ದಿ. 01-06-2017 ರಲ್ಲಿ ರಚನೆಯಾಗಿ ದಿ. 31-01-2018ರಲ್ಲಿ ವರದಿ ಸಲ್ಲಿಸಿ ಸರ್ಕಾರವು ದಿ. 01-03-2018 ರಲ್ಲಿ ಸರ್ಕಾರಿ ಆದೇಶ ಹೊರಡಿಸಿ ಕೇವಲ 9 ತಿಂಗಳಲ್ಲೇ 6 ನೇ ವೇತನ ಆಯೋಗ ಜಾರಿಗೊಳಿಸಲಾಗಿತ್ತು ಎಂದು ಅವರು ತಿಳಿಸಿದರು.
ಸಂಘದ ಒತ್ತಡದ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರವು ದಿ. 19-11-2022ರಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರ ರಾವ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ 7ನೇ ವೇತನ ಆಯೋಗವನ್ನು ರಚಿಸಿ, ಆರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಿತ್ತು. ಕರ್ನಾಟಕ ಸರ್ಕಾರವು ರಾಜ್ಯ 7ನೇ ವೇತನ ಆಯೋಗಕ್ಕೆ ನಿಗದಿ ಪಡಿಸಿದ್ದ ಆರು ತಿಂಗಳ ಅವಧಿಯೊಳಗೆ ವರದಿಯನ್ನು ಪಡೆಯದೇ ದಿ. 19-05-2023 ರಿಂದ 6 ತಿಂಗಳು ಮತ್ತು ದಿ. 06-11-2023 ರಿಂದ 6 ತಿಂಗಳು ಸೇರಿದಂತೆ ಎರಡು ಭಾರಿ ಅವಧಿಯನ್ನು ವಿಸ್ತರಿಸಿತು.
ತದನಂತರ ವೇತನ ಆಯೋಗವು ದಿ. 16-3-2024 ರಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದು, ವೇತನ ಆಯೋಗ ರಚನೆಯಾಗಿ ಇಂದಿಗೆ 19 ತಿಂಗಳು ಕಳೆದಿದೆ. ವೇತನ ಆಯೋಗದ ಮುಂದೆ ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ಸಂಬಂಧ ಸಮಗ್ರ ವರದಿಯನ್ನು ಸಿದ್ದಪಡಿಸಿ ಶೇ.40 ಫಿಟ್ಮೆಂಟ್ ಸೌಲಭ್ಯ ನೀಡಲು ಮನವಿಯನ್ನು ಸಲ್ಲಿಸಲಾಗಿತ್ತು. ಈ ಮಧ್ಯೆ ಸಂಘವು ದಿ.01-03-2023 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡ ಪರಿಣಾಮ ಸರ್ಕಾರವು ದಿ.01-04-2023 ರಿಂದ ಅನ್ವಯವಾಗುವಂತೆ ಶೇ. 17 ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು ಎಂದು ಅವರು ಸಂಘದ ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯ 7ನೇ ವೇತನ ಆಯೋಗವು ಅಂತಿಮವಾಗಿ ದಿ.16-03-2024 ರಂದು ಶೇ. 27.5 ಫಿಟ್ಮೆಂಟ್ ಸೌಲಭ್ಯದೊಂದಿಗೆ ವೇತನ ಪರಿಷ್ಕರಣೆ ಮಾಡಲು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುತ್ತದೆ. ರಾಜ್ಯ 7ನೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸುವ ಸಂಬಂಧ ಮುಖ್ಯಮಂತ್ರಿಗಳನ್ನು ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನು ಸಂಘದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದಾಗ್ಯೂ, ನೀತಿ ಸಂಹಿತೆ ಮುಗಿದ ನಂತರ ನೀಡುವ ಭರವಸೆಯನ್ನು ನೀಡಿದ್ದರು.
ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಸಲುವಾಗಿ ಈ ಹಿಂದಿನ ಸರ್ಕಾರ ಇತರೆ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಲು ಸರ್ಕಾರ ದಿ.01-03-2023 ರಂದು ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು.
ಸಮಿತಿಯು ಇದುವರೆವಿಗೂ ಒಂದೂ ಸಭೆಯನ್ನು ನಡೆಸಿಲ್ಲ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನವನ್ನು ಸಹ ನಡೆಸಿರುವುದಿಲ್ಲ. ಅಲ್ಲದೆ ಈ ಸಂಬಂಧ ಸರ್ಕಾರಕ್ಕೆ ಯಾವುದೇ ವರದಿಯನ್ನು ಇಲ್ಲಿಯವರೆವಿಗೂ ನೀಡಿರುವುದಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಭರವಸೆಯನ್ನು ನೀಡಿರುತ್ತದೆ.
ಕೆಲವು ರಾಜ್ಯಗಳಲ್ಲಿ ಎನ್.ಪಿ.ಎಸ್. ಓ.ಪಿ.ಎಸ್. ಜಾರಿಗೊಳಿಸಲು ಆದೇಶ ಹೊರಡಿಸಿವೆ.. ಎನ್.ಪಿ.ಎಸ್. ಯೋಜನೆಯಲ್ಲಿ ನೇಮಕಗೊಂಡು ನಿವೃತ್ತಿಯಾಗಿರುವ ಸರ್ಕಾರಿ ನೌಕರರಿಗೆ ಮಾಸಿಕ ಕೇವಲ ರೂ.1500/- ಪಿಂಚಣಿ ಲಭ್ಯವಾಗುತ್ತಿದ್ದು, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 2.50 ಲಕ್ಷ ಎನ್.ಪಿ.ಎಸ್ ಯೋಜನೆ ವ್ಯಾಪ್ತಿಯ ನೌಕರರ ಸಂಧ್ಯಾ ಕಾಲದ ಬದುಕು ಆರ್ಥಿಕ ಭದ್ರತೆಯಿಲ್ಲದೆ ದುಸ್ತರಗೊಳ್ಳುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ಗೌರವಾಧ್ಯಕ್ಷ ರಮೇಶ ಲಿಂಗದಾಳ, ಜಿಲ್ಲಾ ಖಜಾಂಚಿ ರಾಜಶೇಖರ ಬಾಣದ, ಭವನ ಕಾರ್ಯದರ್ಶಿ ಗೀರೀಶ ಚೌಡಕಿ, ಪ್ರಹ್ಲಾದ ಗೆಜ್ಜಿ, ರಮೇಶ ಹೊಲ್ತಿಕೋಟಿ, ರಾಜಶೇಖರ ಹೂನ್ನಪ್ಪನವರ, ರಾಜಶೇಖರ ಕೋನರಡ್ಡಿ, ಚಂದ್ರಿಕಾ ದಮ್ಮಳ್ಳಿ, ಸುರೇಶ ಹೀರೆಮಠ ಹಾಗೂ ಧಾರವಾಡ ಜಿಲ್ಲೆಯ ಎಲ್ಲಾ ಇಲಾಖೆಗಳ ನೌಕರರು, ಜಿಲ್ಲಾ ಸಂಘದ ಪದಾಧಿಕಾರಿಗಳು, ತಾಲೂಕ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಎಲ್ಲ ಇಲಾಖೆಯ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.