ರಾಣೆಬೆನ್ನೂರ

ಪ್ರತಿಯೊಬ್ಬರೂ ಕೃಷ್ಣನ ಬೋಧನೆ ಅಳವಡಿಸಿಕೊಂಡಲ್ಲಿ ಸ್ವಸ್ಥ ಸಮಾಜ ಸಾಧ್ಯ : ರುದ್ರಪ್ಪ ಲಮಾಣಿ

ಪ್ರತಿಯೊಬ್ಬರೂ ಕೃಷ್ಣನ ಬೋಧನೆ ಅಳವಡಿಸಿಕೊಂಡಲ್ಲಿ ಸ್ವಸ್ಥ ಸಮಾಜ ಸಾಧ್ಯ : ರುದ್ರಪ್ಪ ಲಮಾಣಿ

ರಾಣಿಬೆನ್ನೂರ 30:  ಶ್ರೀ ಕೃಷ್ಣ ಜಯಂತಿಯೂ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೇ ಪ್ರತಿಯೊಬ್ಬರೂ ಕೃಷ್ಣನ ಬೋಧನೆ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸ್ವಸ್ಥ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರ​‍್ಪ ಲಮಾಣಿ ಹೇಳಿದರು.  

ರವಿವಾರ ತಾಲೂಕಿನ ಬೇಲೂರು ಗ್ರಾಮದ ಹಾಲಸ್ವಾಮಿ ಮಠದ ಆವರಣದಲ್ಲಿ ಜಿಲ್ಲಾ ಯಾದವ ಸಂಘ ಹಾಗೂ ಯಾದವ ಸಂಘ ಬೇಲೂರು ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಹಾಗೂ ಪ್ರಸಕ್ತ ಸಾಲಿನ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಜಿಲ್ಲಾ ಯಾದವ ಸಮಾವೇಶ,  ನಿವೃತ್ತ ನೌಕರರ ಹಾಗೂ ಪ್ರಶಸ್ತಿ ವಿಜೇತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.  

ಭಗವದ್ಗೀತೆ ಜ್ಞಾನದ ಪ್ರಕಾಶವಾಗಿದ್ದು, ಅಸಾಧ್ಯವಾದುದ್ದನ್ನು ಸಾಧಿಸಲು ಜನರಲ್ಲಿ ಆತ್ಮಸ್ಥೈರ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಶ್ರೀ ಕೃಷ್ಣನು ಜೀವನದ ಸಾರವನ್ನು  ಬೋಧಿಸಿ ಜಗತ್ತಿಗೆ ಗುರುವಾದವನು. ಯಾದವ ಕುಲದಲ್ಲಿ ಹುಟ್ಟಿದ ಬಹುತೇಕರು ಶಿಕ್ಷಕ/ಶಿಕ್ಷಕಿಯರಾಗಿ ಸೇವೆ ಸಲ್ಲಿಸಿ ತಮ್ಮ ಶಿಷ್ಯರಿಗೆ ಬೋಧನೆ ಮಾಡುವ ಮೂಲಕ ಗುರುಗಳಾಗಿದ್ದಾರೆ. ಯಾದವ ಜನಾಂಗ ತಮ್ಮ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕಲ್ಪಿಸುವ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಗಮನ ನೀಡಬೇಕು ಎಂದರು. 

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಿ, ಅವರಿಗೆ ಉನ್ನತ ವ್ಯಾಸಂಗ ಕೊಡಿಸಿ. ಸಮುದಾಯದ ಅಭಿವೃದ್ದಿಗೆ ಶಿಕ್ಷಣವೇ ಪ್ರಮುಖ ಅಸ್ತ್ರ. ನಮಗೆ ಸಮಾಜ ಏನು ಮಾಡಿದೆ? ಎಂದು ಪ್ರಶ್ನೆ ಮಾಡುವುದಕ್ಕಿಂತ ಸಮಾಜಕ್ಕೇ ನಾವು ಏನು ಮಾಡಿದ್ದೇವೆ ಎಂಬುದನ್ನು ನಾವೇಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಾಜವನ್ನು ನಾವು ಬೆಳೆಸಿದರೆ ಸಮಾಜವು ನಮ್ಮನ್ನು ಬೆಳೆಸುತ್ತದೆ ಎಂಬ ಉದ್ದೇಶವನ್ನು ಇಟ್ಟುಕೊಂಡು ನಾವೆಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕಿದೆ ಎಂದರು.  

ಸಂಘಟನೆ, ಶಿಕ್ಷಣ, ಹೋರಾಟದಿಂದ ಏನನ್ನಾದರೂ ಸಾಧಿಸಲು ಹಾಗೂ ಪಡೆಯಲು ಸಾಧ್ಯ. ಗುಡಿ ಮತ್ತು ಗೋಪುರಗಳ ಗಂಟೆಗಳ ಸದ್ದು  ಹೆಚ್ಚು ಭಾರಿಸುವುದಕ್ಕಿಂತ ಯಾವ ದೇಶದಲ್ಲಿ ಶಾಲೆಯ ಗಂಟೆಯು ಹೆಚ್ಚು ಬಾರಿಸುತ್ತದೆಯೋ ಆ ದೇಶವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿಯಾಗುತ್ತದೆ. ಎಲ್ಲಿ ಅನಕ್ಷರತೆ ತಾಂಡವವಾಡುತ್ತದೆಯೋ ಅಲ್ಲಿ ಜ್ಞಾನದ ವೃದ್ಧಿ ಕುಂಠಿತವಾಗುತ್ತದೆ. ಅಜ್ಞಾನ, ಅಂಧಕಾರ, ಮೂಢನಂಬಿಕೆಯಿಂದ ಹೊರಬಂದು ಸುಭದ್ರ, ಸುಶಿಕ್ಷಿತ, ಸುರಕ್ಷತೆಯಿಂದ ಜೀವಿಸಬೇಕಾದರೆ ಶಿಕ್ಷಣ ಅತ್ಯಗತ್ಯ. ದೇವರು ಇದ್ದಾನೆ ಎಂಬ ನಂಬಿಕೆ ಇರಬೇಕು. ಆ ನಂಬಿಕೆ ನಮ್ಮ ಶ್ರದ್ಧೆ, ಕೆಲಸ, ಪ್ರಾಮಾಣಿಕೆಯಲ್ಲಿ ಅಚ್ಚಳಿಯದೆ ಉಳಿಯಬೇಕು ಎಂದು ಗೊಲ್ಲರ ಹೇಳಿದರು.  

ದಿವ್ಯ ಸಾನಿಧ್ಯ ವಹಿಸಿದ್ದ ಚಿತ್ರದುರ್ಗದ ಶ್ರೀಕೃಷ್ಣ ಯಾದವ ಮಹಾಸಂಸ್ಥಾನದ ಕೃಷ್ಣ ಯಾದವಾನಂದ ಮಹಾಸ್ವಾಮಿಗಳು ಹಾಗೂ ಹಿರೇಹಡಗಲಿಯ ಹಾಲಸ್ವಾಮಿ ಸಂಸ್ಥಾನಮಠ ಹಾಗೂ ಬೆಲೂರು ಶಾಖಾಮಠದ ಶಿವಯೋಗಿ ಹಾಲಸ್ವಾಮಿಗಳು ಆಶೀರ್ವಚನ ನೀಡಿದರು. 

ವಿಧಾನ ಪರಿಷತ್ ಸದಸ್ಯ, ಯಾದವ ಸಂಘದ ರಾಜ್ಯಾಧ್ಯಕ್ಷ ಡಿ.ಟಿ. ಶ್ರೀನಿವಾಸ, ಯಾದವ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ ಬಿ, ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಹೊನ್ನಪ್ಪ ಹಾಲಗಿ, ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಸಮಾಜದ ಮುಖಂಡರಾದ ಡಾಽ ಸೋಮಲಿಂಗಪ್ಪ ಚಿಕ್ಕಳ್ಳವರ, ರಾಜಶೇಖರಗೌಡ ಕಟ್ಟೇಗೌಡ್ರ, ಹೇಮಣ್ಣ ಗೊಲ್ಲರ, ತಿಮ್ಮಣ್ಣ ಗೊಲ್ಲರ, ಶ್ರೀನಿವಾಸ ಗೊಲ್ಲರ, ಮಹೇಶಪ್ಪ ಎನ್, ತಿಮ್ಮಾರಡ್ಡಿ, ಪುಟ್ಟರಾಜ ಯಾದವ, ಗ್ರಾಪಂ ಅಧ್ಯಕ್ಷೆ ಸುಧಾ ಕಾಟೇನಹಳ್ಳಿ, ಪ್ರೇಮಾ ಬೆಂಗಳೂರು, ರಂಗಸ್ವಾಮಿ ಸೇರಿದಂತೆ ಜಿಲ್ಲಾ /ತಾಲೂಕು ಯಾದವ ಸಂಘದ ಪದಾಧಿಕಾರಿಗಳು, ಗ್ರಾಮದ ಮುಖಂಡರು  ಇದ್ದರು.  

ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಕರಿಯಮ್ಮದೇವಿ ಪ್ರೌಢ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಹೊನ್ನಪ್ಪ ಹಾಲಗಿ ಸ್ವಾಗತಿಸಿದರು. ಶಿಕ್ಷಕಿ ಜಯಶ್ರೀ ಆರ್ ನಿರೂಪಿಸಿದರು. ಕುಮಾರ ಬೇಗೂರು ವಂದಿಸಿದರು.  

ಸುದ್ದಿ ಓದಿ