ವೃತ್ತಿ ರಂಗ ಭೂಮಿ ನಾಡಿನ ಸಾಂಸ್ಕೃತಿಕ ವೇದಿಕೆ: ರಾಜು ತಾಳಿಕೋಟಿ
ಅಥಣಿ 26: ವೃತ್ತಿ ರಂಗ ಭೂಮಿ ಈ ನಾಡಿನ ಸಾಂಸ್ಕೃತಿಕ ವೇದಿಕೆಯಾಗಿದ್ದು, ರಂಗ ಭೂಮಿ ಉಳಿಸಿ, ಬೆಳೆಸಲು ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಅನುದಾನ, ಕಲಾವಿದರ ತರಬೇತಿಗಾಗಿ ಕೇಂದ್ರ ಹಾಗೂ ಕಲಾ ಪ್ರದರ್ಶನಕ್ಕೆ ಅನಕೂಲ ಮಾಡಿಕೊಡಬೇಕಿದೆ ಎಂದು ಗುರು ಖಾಸ್ಗತೇಶ್ವರ ನಾಟ್ಯ ಸಂಘದ ಮಾಲಿಕ, ಚಲನಚಿತ್ರ ಕಲಾವಿದ ರಾಜು ತಾಳಿಕೋಟಿ ಹೇಳಿದರು.
ಅವರು ಖಾಸ್ಗತೇಶ್ವರ ನಾಟ್ಯ ಸಂಘದಿಂದ ಪ್ರಾರಂಭಗೊಂಡ ನಾಟಕ ಪ್ರದರ್ಶನ ಕಾರ್ಯಕ್ರಮ ಪೂರ್ವದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಕರೋನಾ ಸಾಂಕ್ರಾಮಿಕ ರೋಗದ ಸಂಕಷ್ಟದ 18 ತಿಂಗಳ ಈ ಅವಧಿಯಲ್ಲಿ ವೃತ್ತಿ ರಂಗ ಭೂಮಿ ಕಲಾವಿದರು ಕಲಾ ಪ್ರದರ್ಶನಕ್ಕೆ ಅವಕಾಶ ಇಲ್ಲದೆ ಮತ್ತೊಂದೆಡೆ ನಾಟಕ ಕಂಪನಿಗಳನ್ನು ನಡೆಸಿಕೊಂಡು ಹೋಗದೇ ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು ಎಂದ ಅವರು ಕೊವೀಡ್ ಸಂದರ್ಭದಲ್ಲಿ ಕಲಾವಿದರಿಗಾಗಿ ಸರಕಾರ 3000 ರೂ.ಗಳನ್ನು ಸಹಾಯ ಧನ ಘೋಷಿಸಿತ್ತು ಆದರೆ ರಂಗ ಭೂಮಿ ಕಲಾವಿದರಿಗೆ ಮಾತ್ರ ಸಹಾಯ ಧನದ ಮೊತ್ತ ತಲುಪಲೇ ಇಲ್ಲ ಎಂದರು.
ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ದಲ್ಲಾಳಿಗಳು ತುಂಬಿ ತುಳುಕುತ್ತಿದ್ದಾರೆ ಇದರಿಂದ ಇಲಾಖೆ ಮೂಲಕ ವೃತ್ತಿ ರಂಗಭೂಮಿ ಅಭಿವೃದ್ಧಿಗಾಗಿ ಯಾವುದೇ ಯೋಜನೆಗಳ ಲಾಭ ವೃತ್ತಿ ರಂಗಭೂಮಿಗಾಗಲಿ ಅಥವಾ ಕಲಾವಿದರಿಗಾಗಲಿ ಸಿಗುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಲಿ ವೃತ್ತಿ ರಂಗಭೂಮಿ ಉಳಿವಿಗಾಗಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು.
ದಾವಣಗೇರಿಯಲ್ಲಿ ರಾಜ್ಯ ಸರಕಾರ ನಾಟ್ಯ ಶಾಲೆಯನ್ನು ಪ್ರಾರಂಭಿಸುತ್ತಿದ್ದು, ಈ ಶಾಲೆಯಲ್ಲಿ ಕಲಾವಿದರಿಗೆ ರಂಗಾಯಣ ಮಾದರಿಯಲ್ಲಿ ತರಬೇತಿ ನೀಡುವ ಯೋಜನೆಯಿದ್ದು, ರಂಗಭೂಮಿ ಮಾದರಿಯಲ್ಲಿಯೇ ತರಬೇತಿ ನೀಡಬೇಕು. ಆಗ ಮಾತ್ರ ರಂಗಭೂಮಿಗೆ ಹೊಸ ಹೊಸ ಕಲಾವಿದರ ಆಗಮನ ಆಗುತ್ತದೆ ಎಂದರು.
ವಿಜಯಪುರ ಜಿಲ್ಲೆಯ ಸಿಂದಗಿಯ ತಮ್ಮ ತೋಟದಲ್ಲಿ ಕಲಾವಿದರಿಗಾಗಿ ನಾಟ್ಯ ಶಾಲೆಯನ್ನು ಪ್ರಾರಂಭಿಸುವ ಯೋಜನೆ ತಮ್ಮದಾಗಿದ್ದು, ಈ ತರಬೇತಿ ಕೇಂದ್ರಕ್ಕೆ ಸರಕಾರದಿಂದ ಯಾವುದೇ ಸಹಾಯ ಧನ ಕೇಳುವುದಿಲ್ಲ ಎಂದ ಅವರು 1983 ರಲ್ಲಿ ಬಿ.ಆರ್.ಅರಶಿಣಗೋಡಿ ಯವರಿಂದ ಪ್ರಾರಂಭಗೊಂಡಿರುವ ಈ ನಾಟಕ ಕಂಪನಿಯನ್ನು 1998 ರಿಂದ ನಾನು ಮುನ್ನಡೆಸಿಕೊಂಡು ಹೋಗುತ್ತಿರುವೆ ಎಂದು ತಿಳಿಸಿದರು.
ಅಥಣಿಯ ಗಚ್ಚಿನ ಮಠದ ಸ್ಥಳದಲ್ಲಿ ಪ್ರಾರಂಭಗೊಂಡ ನಾಟಕ ಪ್ರದರ್ಶನಕ್ಕೆ ಮಹಿಳಾ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ದೃಷ್ಟಿಯಿಂದ ಒಬ್ಬ ಮಹಿಳೆ ಟಿಕೇಟ್ ಪಡೆದರೆ ಮತ್ತೊಂದು ಟಿಕೇಟ್ ಉಚಿತವಾಗಿ ನೀಡಲಾಗುವುದು ಈ ಯೋಜನೆಯ ಲಾಭ ಅಥಣಿ ಕಲಾಭಿಮಾನಿಗಳು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ರಂಗಭೂಮಿ ಕಲಾವಿದ, ನ್ಯಾಯವಾದಿ ಎ.ಎಮ್.ಖೊಬ್ರಿ, ಎಸ್.ಆರ್.ಪಾಟೀಲ, ಪ್ರೇಮಾ ತಾಳಿಕೋಟಿ, ಶ್ರೀಮಂತ ದರೂರ ಉಪಸ್ಥಿತರಿದ್ದರು.