ತ್ಯಾಜ್ಯ ವಸ್ತುಗಳಿಂದ ಉಪಯುಕ್ತವಸ್ತುಗಳ ತಯಾರಿಸುವ ಸ್ಪರ್ಧೆ
ರಾಣೇಬೆನ್ನೂರು: ತಾಲೂಕಿನ ಕುಮಾರಪಟ್ಟಣ ಗ್ರಾಮದ ಅಮೃತ ವರ್ಷಿಣಿ ವಿದ್ಯಾಲಯದಲ್ಲಿ 6ರಿಂದ 9ನೇ ತರಗತಿಗಳ ಮಕ್ಕಳಿಗೆ ನಾವು ದಿನನಿತ್ಯದ ಜೀವನದಲ್ಲಿ ತ್ಯಾಜ್ಯವೆಂದು ಪರಿಗಣಿಸಿ ಎಸೆಯುವ ಹತ್ತಾರು ವಸ್ತುಗಳಿಂದ ಉಪಯುಕ್ತವಸ್ತುಗಳನ್ನು ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಈ ಸ್ಪರ್ಧೆಯಲ್ಲಿ ಸುಮಾರು 400 ಮಕ್ಕಳು ಅದಮ್ಯ ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳು ಪ್ಲಾಸ್ಟಿಕ್, ರಟ್ಟು, ತೆಂಗಿನ ನಾರು, ಪ್ಲಾಸ್ಟಿಕ್ ತುಣುಕುಗಳು, ಬಳೆಗಳು, ಎಲೆಗಳು, ಕಾಗದ, ವೃತ್ತಪತ್ರಿಕೆ, ಪೆನ್ನು, ಬಾಟಲಿಗಳು, ಚಿಪ್ಪುಗಳು, ಪ್ಲಾಸ್ಟಿಕ್ಕವರುಗಳು, ಸೀರೆಯ ಝರಿ ತುಣುಕುಗಳು-ಮೊದಲಾದ ವೈವಿಧ್ಯಮಯ ತ್ಯಾಜ್ಯಗಳನ್ನು ಸೃಜನಾತ್ಮಕದೃಷ್ಟಿಯಿಂದ ಬಗೆ ಬಗೆಯ ಅರ್ಥಪೂರ್ಣ ಸುಂದರ ಪ್ರದರ್ಶಿಕೆಗಳನ್ನಾಗಿ ಸಿದ್ದಗೊಳಿಸಿದದ್ದರು. ಮಕ್ಕಳ ತಯಾರಿಸಿದ ಬಗೆ ಬಗೆಯ ಚಿತ್ರ ಪರಿಕರಗಳು ನೋಡುಗರ ಮನಸ್ಸನ್ನು ಆಕರ್ಷಿಸುವಂತಿತ್ತು. ಈ ಯೋಜನೆಗೆ ಮಕ್ಕಳು ಸುಮಾರು ಒಂದು ವಾರದ ಸಿದ್ದತೆಯನ್ನು ಮಾಡಿಕೊಂಡಿದ್ದರು. ಅಂತಿಮ ಸ್ಪರ್ಧೆಯಲ್ಲಿ ವಸ್ತುಗಳನ್ನು ಶಿಕ್ಷಕರ ಮಾರ್ಗದರ್ಶನದ ಮೇರೆಗೆ ಸಿದ್ದಗೊಳಿಸಬೇಕಾಗಿತ್ತು. ಶಿಕ್ಷಕರೊಂದಿಗೆ ಮಕ್ಕಳು ಮುಕ್ತವಾಗಿ ಚರ್ಚಿಸಿ ಸುಂದರ ಗೊಂಬೆ ಮತ್ತಿತರೆ ಅಲಂಕಾರಿಕ ವಸ್ತುಗಳನ್ನು ಸಿದ್ದಪಡಿಸಿದ್ದರು.
ಮಕ್ಕಳು ಕೇವಲ ಪುಸ್ತಕಗಳ ಮೇಲೆಯೇ ಅವಲಂಬಿತರಾಗಿರುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಅರ್ಥಪೂರ್ಣವೆನಿಸುವುದಿಲ್ಲ. ಕಸದಿಂದರಸ ಎಂದೇ ಬಣ್ಣಿಸಲ್ಪಟ್ಟಿರುವ ಈ ಪ್ರಕಾರದ ಕಾರ್ಯಕ್ರಮಗಳು ಮಕ್ಕಳ ಭಾಷಾಕಲಿಕೆ, ಗಣಿತ, ವಿಜ್ಞಾನ, ಕಲೆ. ವಿನ್ಯಾಸ, ಯೋಚನಾಶಕ್ತಿ, ಪ್ರಾಪಂಚಿಕ ಅರಿವು, ಸಾಮಾಜಿಕ ಜವಾಬ್ದಾರಿ ಇವೆಲ್ಲವುಗಳನ್ನು ಒಳಗೊಂಡಿರುವುದರಿಂದ ಮಕ್ಕಳು ಅಪರಿಮಿತ ಲಾಭವನ್ನು ಪಡೆಯುತ್ತಾರೆ, ಅವರ ಮಾನಸಿಕ ಬೆಳವಣಿಗೆಗೆ ಈ ಬಗೆಯ ಸ್ಪರ್ಧೆಗಳು ಪೂರಕವೆನಿಸುತ್ತವೆ-ಎಂದು ಶಾಲೆಯ ಶಿಕ್ಷಕರು ಹಾಗೂ ಮುಖ್ಯಸ್ಥರಾದ ಪ.ಕೆ ಪ್ರಕಾಶರಾವ್ ವಿವರಿಸಿದರು.