ಮುತಗಿ ಗ್ರಾಮದ ಸಾರ್ವಜನಿಕರಲ್ಲಿ ಉಂಟಾಗಿದ್ದ ವಾಂತಿ ಬೇಧಿ ಪ್ರಕರಣ ; ಡಿಎಚ್ಓ ಡಾ. ಶಶಿ ತಂಡ ಭೇಟಿ
ಧಾರವಾಡ 27 : ಕಲಘಟಗಿ ತಾಲೂಕಿನ ಮುತಗಿ ಗ್ರಾಮದಲ್ಲಿನ ಮೂರು ಓಣಿಗಳಲ್ಲಿ ಸರಬರಾಜು ಆಗಿದ್ದ ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರಲ್ಲಿ ಉಂಟಾಗಿದ್ದ ವಾಂತಿ ಬೇಧಿ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದ್ದು ಇಂದು ( ಅ.26) ಸಂಜೆ 22 ಜನ ಗ್ರಾಮಸ್ಥರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರನ್ನು ಪ್ರತ್ಯೇಕ ಟ್ಯಾಂಕರ ಮೂಲಕ ಸರಬರಾಜು ಮಾಡಲಾಗುತ್ತಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ನೇತೃತ್ವದಲ್ಲಿ ಗ್ರಾಮದ ಮನೆಮನೆಗೆ ಆರೋಗ್ಯ ತಂಡ ಭೇಟಿ ನೀಡಿ ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರು ಆರೋಗ್ಯ ಸಮೀಕ್ಷೆ ಮಾಡುತ್ತಿದ್ದಾರೆ. ಮತ್ತು ಜನರಲ್ಲಿ ನೈರ್ಮಲ್ಯತೆ ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ವಾಂತಿ ಬೇಧಿ ಪ್ರಕರಣಗಳು ದಾಖಲಾದ ದಿನದಿಂದಲೂ ಕಟ್ಟೆಚ್ಚರವಹಿಸಲಾಗಿದೆ. 5 ಜನ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, 3 ಜನ ಆರೋಗ್ಯ ನೀರೀಕ್ಷಣಾಧಿಕಾರಿಗಳು, 3 ಜನ ಸಮುದಾಯ ಆರೋಗ್ಯ ಅಧಿಕಾರಿಗಳು, 6 ಜನ ಆಶಾ ಕಾರ್ಯಕರ್ತೆಯರನ್ನು ಮತ್ತು ಆರಿ್ಬ.ಎಸ್.ಕೆ ವೈದ್ಯಧಿಕಾರಿಗಳು ಹಾಗೂ 2 ಜನ ಶುಶ್ರೂಷಕ ಅಧಿಕಾರಿಗಳನ್ನು ಒಳಗೊಂಡಿರುವ ತಂಡವನ್ನು ರಚಿಸಿ, ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಾಹಿಸುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ.ಯಶವಂತ ಮದಿನಕರ ಉಸ್ತುವಾರಿಯಲ್ಲಿ, ಒಳರೋಗಿಗಳ ಚಿಕಿತ್ಸೆಗಾಗಿ ವೈದ್ಯರು ಮತ್ತು ಶುಶ್ರೂಷಕ ಅಧಿಕಾರಿಗಳು ದಿನದ 3 ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಆಸ್ಪತ್ರೆಗಳ ಹೆಚ್ಚುವರಿ ಚಿಕಿತ್ಸೆಗಾಗಿ ಎರಡು ಆಂಬುಲೆನ್ಸ್ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳನ್ನು ತಾಲೂಕು ಆಸ್ಪತ್ರೆಯಲ್ಲಿ ರಾತ್ರಿಯ ಸಮಯದಲ್ಲಿಯೂ ಕರ್ತವ್ಯವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುತಗಿ ಗ್ರಾಮದ ಪ್ರಕರಣಕ್ಕೆ ಸಂಬಂದಿಸಿದಂತೆ ಗ್ರಾಮದ ಎಲ್ಲ ವಯೋವೃದ್ದರ, ಗರ್ಭಿಣಿಯರ, ಮಕ್ಕಳ ಮತ್ತು ಅಧಿಕ ರಕ್ತದೋತ್ತಡ ಇರುವ ರೋಗಿಗಳಿಗೆ ವಿಶೇಷ ಕಾಳಜಿ ವಹಿಸಕು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಂದು 22 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ, 38 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ ವಾಂತಿ ಬೇಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುತಗಿ ಗ್ರಾಮದ 22 ಜನರು ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಈಗ ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ 38 ಜನರಿಗೆ ಮತ್ತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 13 ಜನರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಆಸ್ಪತ್ರೆಗಳಲ್ಲಿರುವವರ ಆರೋಗ್ಯ ಸುಧಾರಣೆ ಆಗಿದ್ದು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ವೈದ್ಯರು ಉತ್ತಮ ಚಿಕಿತ್ಸೆ ಅಗತ್ಯ ಓಷಧಿಗಳನ್ನು ನಿಯಮಿತವಾಗಿ ಕೊಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಜಿಲ್ಲಾಡಳಿತವು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.