87ನೇಯ ವರ್ಷದ ನಾಡಹಬ್ಬ ಆರನೆಯ ದಿನದ ಕಾರ್ಯಕ್ರಮ
ಲೋಕದರ್ಶನ ವರದಿ
ರಾಣೇಬೆನ್ನೂರು 25: ಜಾನಪದ ಕಲೆಯನ್ನು ಯಾರಿಂದಲೋ ಹೇಳಿಸಿಕೊಂಡು ಕಲೆಯುವ ಕಲೆಯಲ್ಲ ಜನರ ಮಧ್ಯದಲ್ಲಿದ್ದುಕೊಂಡು ನಿರಂತರವಾಗಿ ಅಭ್ಯಸಿಸುವ ಮೂಲಕ ಕರಗತಮಾಡಿಕೊಳ್ಳಲು ಸಾಧ್ಯ ಎಂದು ನ್ಯಾಯವಾದಿಗಳು, ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಹೇಳಿದರು.
ನಗರದ ಕರ್ನಾಟಕ ಸಂಘದಲ್ಲಿ ಶುಕ್ರವಾರ ಸಂಜೆ 87ನೇಯ ವರ್ಷದ ನಾಡಹಬ್ಬ ಆರನೆಯ ದಿನದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತ, ಜಾನಪದದ ವಿವಿಧ ಪ್ರಾಕಾರಗಳಿಗೆ ನಮ್ಮ ವೇದಿಕೆಯಲ್ಲಿ ನಾಡಹಬ್ಬದ ಕಾರ್ಯಕ್ರಮಗಳಲ್ಲಿ ಅವಕಾಶ ನೀಡಿ ಕಲಾವಿದರಿಗೆ ಪ್ರೋತ್ಸಾಹಿಸುವ ಮೂಲಕ ಜಾನಪದಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಸಂಘ ನಿರತವಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಅತಿಥಿಯಾಗಿ ವಿನಾಯಕ ಕಾರುಚಾಲಕರ ಸಂಘದ ಅಧ್ಯಕ್ಷ ಶಿವಾನಂದ ಹಂಚಿನಾಳ ಹಾಗೂ ಹಾವೇರಿ ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಉಪಸ್ಥಿತರಿದ್ದರು.
ಶಿಗ್ಗಾಂವದ ಜಾನಪದ ಕಲಾವಿದ ಎಸ್. ಎಸ್. ಹಿರೇಮಠ ಮತ್ತು ಸಂಗಡಿಗರು ನಡೆಸಿಕೊಟ್ಟ ಜಾನಪದ ಸಂಜೆ ಕಾರ್ಯಕ್ರಮ ಜನರನ್ನು ರಂಜಿಸಿತು. ವಿಜಯಕುಮಾರ ಜೋಶಿ ನಾಡಗೀತೆ ಹಾಡಿದರು, ಶ್ರೀನಿಧಿ ಶಿರಹಟ್ಟಿ ಸ್ವಾಗತಿಸಿ, ಪರಿಚಯಿಸಿದರು, ವೀಣಾ ನಾಗರಾಜ ಜೋಶಿ ವಂದಿಸಿದರು, ಚಿದಂಬರ ಜೋಶಿ ಕಾರ್ಯಕ್ರಮ ನಿರ್ವಹಿಸಿದರು