ಧಾರವಾಡ - ಹುಬ್ಬಳ್ಳಿ

ಭಾರತೀಯ ಸಾಹಿತ್ಯದಲ್ಲಿ ಸಖೀಗೀತಕ್ಕೆ ಮಹೋನ್ನತ ಸ್ಥಾನವಿದೆ : ಡಾ.ಜಿ.ಎಂ.ಹೆಗಡೆ

ಭಾರತೀಯ ಸಾಹಿತ್ಯದಲ್ಲಿ ಸಖೀಗೀತಕ್ಕೆ ಮಹೋನ್ನತ ಸ್ಥಾನವಿದೆ : ಡಾ.ಜಿ.ಎಂ.ಹೆಗಡೆ

ವರಕವಿ ಡಾ.ದ.ರಾ.ಬೇಂದ್ರೆ ಅವರ 43ನೆಯ ಪುಣ್ಯಸ್ಮರಣೆ 

ಧಾರವಾಡ 27: ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ ಎಂಬ ಸಂದೇಶವನ್ನು ನೀಡಿದ ಮಹಾನ್ ಶಬ್ದ ಗಾರುಡಿಗ ವರಕವಿ ಬೇಂದ್ರೆ.  ಶಬ್ದಗಳ ಮೂಲಕ ಲೀಲಾಜಾಲವಾಗಿ ನಮ್ಮನ್ನು ಕವಿತೆಯ ಆಳಕ್ಕೆ ಕರೆದೊಯ್ದವರು, ಕನ್ನಡಕ್ಕೆ ಭುವನದ ಭಾಗ್ಯ ಬಂದಿದ್ದು ಬೇಂದ್ರೆಯವರ ಕಾವ್ಯದಿಂದ, ಬೇಂದ್ರೆಯವರ ಕಾವ್ಯ ಭಾವಗೀತೆಗಳ ನವಮನ್ವಂತರಕ್ಕೆ  ಕಾರಣವಾಯಿತು ಎಂದು ಹಿರಿಯ ಸಾಹಿತಿ ಡಾ. ಜಿ.ಎಂ.ಹೆಗಡೆ ಅಭಿಪ್ರಾಯ ಪಟ್ಟರು.   

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌  26 ರಂದು ಸಂಜೆ ಧಾರವಾಡದ ಸಾಧನಕೇರಿ ಬೇಂದ್ರೆ ಭವನದಲ್ಲಿ ಏರಿ​‍್ಡಸಿದ್ದ ವರಕವಿ ಡಾ.ದ.ರಾ.ಬೇಂದ್ರೆ ಅವರ 43ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ ಬೇಂದ್ರೆಯವರ ಕವಿತೆಗಳ ಸಾಲುಗಳು ನಮ್ಮನ್ನು ಸಮ್ಮೋಹನಗೊಳಿಸಿವೆ, ಅವು ನಮ್ಮ ಕಿವಿಯಲ್ಲಿ ಸದಾ ನಿನಾದಿಸುತ್ತಿವೆ.  ಸಖೀಗೀತವು ಉತ್ಕೃಷ್ಠವಾದ ಖಂಡ ಕಾವ್ಯವಾಗಿದೆ.  ಭಾರತೀಯ ಸಾಹಿತ್ಯದಲ್ಲಿ ಅದಕ್ಕೆ ಮಹೋನ್ನತ ಸ್ಥಾನವಿದೆ ಎಂದರು.   

ಬೇಂದ್ರೆಯವರು ಬರೆದ 1427 ಕವನಗಳನ್ನೊಳಗೊಂಡ ಓದುಂಬರ ಗಾಥೆಯ ಆರು ಬೃಹತ್ ಸಂಪುಟಗಳು ಅವರ ಜೀವನ ಮಹಾಕಾವ್ಯವಾಗಿದೆ. ಬೇಂದ್ರೆ ಹಾಗೂ ಕುವೆಂಪುರವರು ಕನ್ನಡದ ಭಾವಗೀತದ ಮಹಾಕವಿಗಳು.  ಕುವೆಂಪುರವರನ್ನು ಸೂರ್ಯೋದಯದ ಕವಿಗಳೆಂದರೆ, ಬೇಂದ್ರೆಯವರನ್ನು ಶ್ರಾವಣದ ಕವಿ ಎಂದೂ ಚನ್ನವೀರ ಕಣವಿಯವರನ್ನು ಮಳೆಗಾಲದ ಕವಿ ಎಂದು ಕರೆಯುತ್ತಾರೆ.  ಬೇಂದ್ರೆಯವರು ಕನ್ನಡದಲ್ಲಿ ಛಂದಸ್ಸಿನ ವಿವಿಧ ಪ್ರಯೋಗಗಳನ್ನು ಮಾಡಿದರು. ಬೇಂದ್ರೆಯವರ ಕವನಗಳು ಮುಂದಿನ ಎಲ್ಲ ಕವಿಗಳಿಗೆ ಮಾರ್ಗದರ್ಶಿಯಾಗುವುದರ ಮೂಲಕ, ಕನ್ನಡ ಕಾವ್ಯಕ್ಕೆ ಹೊಸ ದೆಸೆಯನ್ನು ಕಲ್ಪಿಸಿಕೊಟ್ಟರು ಎಂದರು.       

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ ಅಧ್ಯಕ್ಷರಾದ ಡಾ.ಡಿ.ಎಂ.ಹಿರೇಮಠ ಮಾತನಾಡುತ್ತ ವರಕವಿ ಡಾ.ದ.ರಾ.ಬೇಂದ್ರೆಯವರು ಆಧುನಿಕ ಕನ್ನಡ ಸಾಹಿತ್ಯದ ಅಗ್ರಕವಿ, ಅವಧೂತ ಪ್ರಜ್ಞೆ ಮತ್ತು ದೇಶಿ ಅಭಿವ್ಯಕ್ತಿಗಳ ಅಪೂರ್ವ ಸಂಗಮವೆನಿಸಿದ ಇವರ ಕಾವ್ಯ ಕನ್ನಡದ ಒಂದು ಅತ್ಯಪೂರ್ವ ಪ್ರಯೋಗ.  ಈ ಕಾವ್ಯ ಪದ್ಧತಿಗೆ ಇವರೇ ಆದಿ, ಇವರ ಪದ್ಯ ಭಂಡಾರದಲ್ಲಿ 1427 ಕವನಗಳಿವೆ.  ಸಖೀಗೀತ ಮತ್ತು ಮೇಘದೂತಗಳಂಥ ಖಂಡಕಾವ್ಯಗಳಿವೆ.  ಅಷ್ಟೇ ಅಲ್ಲದೆ ನಾಟಕ, ವಿಮರ್ಶೆ, ಕಾವ್ಯ ಮೀಮಾಂಸೆ, ವಿಚಾರ ಸಾಹಿತ್ಯ, ಸಂಶೋಧನಾ ಪ್ರಬಂಧ, ಉಪನ್ಯಾಸಗಳು ಇವರ ಸಾಹಿತ್ಯ ಪ್ರಕಾರಗಳಾಗಿವೆ ಎಂದರು.   

ನಂತರ ವಿಜಯಪುರ ಜಿಲ್ಲೆಯ ಖ್ಯಾತ ಕಲಾವಿದರಾದ ಜ್ಯೋತಿರ್ಲಿಂಗ ಹೊನಕಟ್ಟಿ ಅವರು ಬೇಂದ್ರೆ ಭಾವಗೀತ ಗಾಯನವನ್ನು ಅತ್ಯಂತ ಮನಮೋಹಕವಾಗಿ ಪ್ರಸ್ತುತ ಪಡಿಸಿದರು.  ಅವರೊಂದಿಗೆ ಸಹಗಾಯನದಲ್ಲಿ ಶಿವರಂಜಿನಿ, ಗಾಯನಾ, ಸ್ವರಾ ಭಾವಗೀತೆಗಳನ್ನು ಸುಶ್ರ್ಯಾವ್ಯವಾಗಿ ಸಾದರ ಪಡಿಸಿದರು. ತಬಲಾದಲ್ಲಿ ನೂರುದ್ದೀನ ಬೈಲಹೊಂಗಲ ಹಾಗೂ ಹಾರ್ಮೊನಿಯಂದಲ್ಲಿ ಆಕಾಶ ಮನಗೂಳಿ, ಡೋಲಕದಲ್ಲಿ ವಲಿಅಹಮ್ಮದ ಸಾಥ್ ಸಂಗತ ನೀಡಿದರು.   

ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಜಯಲಕ್ಷ್ಮೀ ಎಚ್‌. ನಿರೂಪಿಸಿದರು.  ಟ್ರಸ್ಟ್‌ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ ವಂದಿಸಿದರು.   

ಸುರೇಶ ಕುಲಕರ್ಣಿ, ಮಲ್ಲಿಕಾರ್ಜುನ ಹಿರೇಮಠ, ಡಾ.ಎ.ಎಲ್‌.ದೇಸಾಯಿ, ಎಂ.ಎಂ.ಚಿಕ್ಕಮಠ, ಎನ್‌.ಎಸ್‌.ಗೋವಿಂದರೆಡ್ಡಿ, ಸಿದ್ದಣ್ಣ ಕಂಬಾರ, ಶಂಕರ ಗುರವ, ಸಂಗಮೇಶ ಹಡಪದ, ಡಾ.ಜಿ.ಕೆ.ಹಿರೇಮಠ, ಎಮ್‌.ಜಿ.ಹಿರೇಮಠ ಎಮ್‌.ವಿ.ಹೊಸಮನಿ, ಎಸ್‌.ಎಸ್‌.ಬಂಗಾರಿಮಠ, ಶಿವಾನಂದ ಹಡಪದ, ಚಂದ್ರಣ್ಣವರ, ಶೋಭಾ ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ