ಸಾರಿಗೆ ಇಲಾಖೆಗೆ 4 ಸಾವಿರ ಕೋಟಿ ರೂ.ಗಳಷ್ಟು ನಷ್ಟ: ಸಚಿವ ಸವದಿ
ಅಥಣಿ 05: ಸಾರಿಗೆ ಸಿಬ್ಬಂದಿಗಳ ಪ್ರತಿಭಟನೆ ಹಾಗೂ ಕೊವೀಡ್ ಲಾಕ್ ಡೌನ್ ಪರಿಣಾಮ ಸಾರಿಗೆ ಇಲಾಖೆಗೆ ಇಲ್ಲಿಯವರೆಗೆ 4 ಸಾವಿರ ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ಸಾರಿಗೆ ಇಲಾಖೆಯ 5 ಕೋಟಿ ವೆಚ್ಚದ ಬಸ್ ಡಿಪೋ ಪುನರ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಯಾರದೋ ಮಾತು ಕೇಳಿಯೋ ಅಥವಾ ಇನ್ಯಾರದೋ ಪ್ರಭಾವಕ್ಕೆ ಒಳಗಾಗಿ ಸಾರಿಗೆ ಸಿಬ್ಬಂದಿ ಸರಕಾರದ ವಿರುದ್ಧ ಎರಡು ಬಾರಿ ಪ್ರತಿಭಟನೆಗಿಳಿದರು ಇದರ ಪರಿಣಾಮ ಚಾಲಕ, ನಿರ್ವಾಹಕ, ಕಾರ್ಮಿಕರ ಹಾಗೂ ಸರಕಾರದ ಮಧ್ಯೆ ಸಂಘರ್ಷಕ್ಕೆ ಕಾರಣವಾಯಿತು. ಇದ್ಯಾವದನ್ನು ಸರಕಾರವೂ ತಲೆ ಕೆಡಿಸಿಕೊಂಡಿಲ್ಲ ನೀವೂ ಕೂಡ ತಲೆ ಖೆಡಿಸಿಕೊಳ್ಳದೆ ಇಲಾಖೆಗಾಗಿ ಕಾರ್ಯನಿರ್ವಹಿಸಿ ಆಗ ಮಾತ್ರ ಸಾರಿಗೆ ಇಲಾಖೆಗೆ ಆದ ನಷ್ಟವನ್ನು ಸರಿ ದೂಗಿಸಲು ಸಾಧ್ಯ ಎಂದ ಅವರು ಸಾರಿಗೆ ಇಲಾಖೆಯ ಚಾಲಕ, ನಿರ್ವಾಹಕ, ಕಾರ್ಮಿಕ ಹಾಗೂ ಸಿಬ್ಬಂದಿಗಳ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರಕಾರ ಸಿದ್ಧವಿದೆ ಎಂದು ಹೇಳಿದ ಅವರು ಇಲಾಖೆಗೆ ನಷ್ಟ ಆಗಿದ್ದರೂ ಕೂಡ ಸಿಬ್ಬಂದಿಗಳ ಸಂಬಳ ತಡೆ ಹಿಡಿದಿಲ್ಲ ಎಂದರು.
ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಪರ ಹಾಗೂ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಯೋಜನೆ ಸಿದ್ಧವಾಗಿದ್ದು, ಅಥಣಿ ಜನತೆ ಚಾಲಕ ಪರವಾನಗಿ ಪಡೆಯಲು ಅಥವಾ ಹೊಸ ವಾಹನಗಳ ನೊಂದಣಿ ಮಾಡಿಸಲು ಅನಿವಾರ್ಯವಾಗಿ ಚಿಕ್ಕೋಡಿಗೆ ತೆರಳಬೇಕಾಗುತ್ತಿತ್ತು ಇದನ್ನು ತಪ್ಪಿಸಲು ಅಥಣಿ ಪಟ್ಟಣದಲ್ಲಿ ಎ.ಆರ್.ಟಿ.ಒ ಕಛೇರಿ ಪ್ರಾರಂಭಿಸಲಾಗಿದೆ ಎಂದ ಅವರು ಸಾರಿಗೆ ಸಿಬ್ಬಂದಿಗಳ ಪ್ರತಿಭಟನೆ ಸಂದರ್ಭದಲ್ಲಿ ಇಲ್ಲಿಯ ಸಿಬ್ಬಂದಿಗಳಿಗೆ ಮನವಿ ಮಾಡಿದ ಪರಿಣಾಮ ಎಲ್ಲ ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದರು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಆರ್.ಎಸ್.ಎಸ್ ಪ್ರಮುಖ ಅರವಿಂದರಾವ ದೇಶಪಾಂಡೆ, ಅಥಣಿ ಸಮೀಪ ಕೊಕಟನೂರ ಗ್ರಾಮದಲ್ಲಿ ನಿರ್ಮಾಣವಾಗಿ ಉದ್ಘಾಟನೆಗೆ ಸಿದ್ಧವಾಗಿರುವ ದಿ.ಭಾವುರಾವ್ ದೇಶಪಾಂಡೆ ಪಶು ವೈದ್ಯಕೀಯ ಮಹಾವಿದ್ಯಾಲಯ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ತರಗತಿಗಳನ್ನು ಪ್ರಾರಂಭಿಸಲು ಸರಕಾರ ಅನುಮತಿ ನೀಡಬೇಕು ಎಂದರು. ದಿ.ಭಾವುರಾಯರು ಬಿಜೆಪಿ ಭದ್ರ ಬುನಾದಿ ಹಾಕಿದ್ದರಷ್ಟೇ ಅಲ್ಲ ಪ್ರಾರಂಭದ ದಿನಗಳಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಬಿಜೆಪಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇಂತಹ ಮಹಾನ್ ವ್ಯಕ್ತಿಯ ಹೆಸರಿನಿಂದ ಪ್ರಾರಂಭಗೊಂಡ ಈ ಮಹಾವಿದ್ಯಾಲಯ ಅಥಣಿಗೆ ಹೊಸ ಗರಿ ಎಂದ ಅವರು ಅಥಣಿಗೆ ಇನ್ನಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎನ್.ಡಬ್ಲು.ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಬಿ.ಎಸ್.ಪಾಟೀಲ ಮಾತನಾಡಿ, ದೂರದ ಹಾಗೂ ಸಮೀಪದ ತಮ್ಮ ಪ್ರಯಾಣವನ್ನು ಖಾಸಗಿ ವಾಹನಗಳಲ್ಲಿ ಮಾಡದೇ ಸರಕಾರಿ ಸಾರಿಗೆ ವಾಹನಗಳಲ್ಲಿಯೇ ಮಾಡಿ ಆಗ ಮಾತ್ರ ಸಾರಿಗೆ ಇಲಾಖೆ ಆರ್ಥಿಕವಾಗಿ ಸಧೃಢವಾಗಲು ಸಾಧ್ಯ ಎಂದರು.
ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ವಾಜಪೇಯಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷ ಆನಂದ ದೇಶಪಾಂಡೆ, ಧುರೀಣರಾದ ಡಾ.ಎಮ್.ಜಿ.ಹಂಜಿ, ವಿಜಯಕುಮಾರ ಬುರ್ಲಿ, ಉಮೇಶ ಬಂಟೋಡಕರ, ಮಲ್ಲೇಶ ಹುದ್ದಾರ ಸೇರಿದಂತೆ ಅಥಣಿ ಸಾರಿಗೆ ಇಲಾಖೆಯ ಚಾಲಕರು, ನಿರ್ವಾಹಕರು, ಕಾರ್ಮಿಕರು, ಸಿಬ್ಬಂದಿ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.