ರಾಣೆಬೆನ್ನೂರಿನಿಂದ ಹೊರನಾಡಿಗೆ 32ನೇ ವರ್ಷದ ಪಾದಯಾತ್ರೆ
ರಾಣೇಬೆನ್ನೂರು 19: ದೇಹ ದಂಡಿಸಿ ದೈವ ದರ್ಶನ ಪಡೆಯುವುದು ಒಂದು ತಪಸ್ಸಾಗಿದೆ. ಈ ದೇಶೆಯಲ್ಲಿ ರಾಣಿಬೆನ್ನೂರಿನ ಭಕ್ತರು ಕಳೆದ 32 ವರ್ಷಗಳಿದ ಪಾದಯಾತ್ರೆಯ ಮೂಲಕ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆಯುತ್ತಿರುವುದು ಅವರ ಪೂರ್ವ ಜನ್ಮದ ಪುಣ್ಯದ ಫಲವಾಗಿದೆ. ದೇವಿಯ ಆಶೀರ್ವಾದ ಸದಾಕಾಲ ಅವರ ಮೇಲಿರಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರ್ಪ ಹೇಳಿದರು. ಶುಕ್ರವಾರ ನಗರದ ಗುರು ಕೊಟ್ಟೂರೇಶ್ವರ ಮಠದಲ್ಲಿ ಸ್ಥಳಿಯ ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನ ಸೇವಾ ಸಮಿತಿಯವರು ರಾಣೆಬೆನ್ನೂರಿನಿಂದ ಹೊರನಾಡಿಗೆ 32ನೇ ವರ್ಷದ ಪಾದಯಾತ್ರೆಯ ಅಂಗವಾಗಿ ಕೈಗೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ತಾಯಿ ಅನ್ನಪೂರ್ಣೇಶ್ವರಿ ಅಮ್ಮನವರ ಆಶೀರ್ವಾದ ಪಡೆದು ಮಾತನಾಡಿದರು. ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆ ಹೊರಡುವ ಸಕಲ ಭಕ್ತರಿಗೆ ಶುಭ ಕೋರಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ನಗರಸಭಾ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಬಿಜೆಪಿ ಮುಖಂಡ ಸಿದ್ದು ಚಿಕ್ಕಬಿದರಿ ಸೇರಿದಂತೆ ಪಾದಯಾತ್ರೆಯ ಸಕಲ ಭಕ್ತರು ಇದ್ದರು.