ಸಜ್ಜನ ಸಾಹಿತಿ ಡಾ. ವರದರಾಜ ಹುಯಿಲಗೋಳರ 32ನೆಯ ಪುಣ್ಯಸ್ಮರಣೆ
ಧಾರವಾಡ 14: ವೃತ್ತಿಯಿಂದ ಶಿಕ್ಷಕರಾಗಿದ್ದ ಡಾಽಽ ವರದರಾಜ ಹುಯಿಲಗೋಳರು ಪ್ರವೃತ್ತಿಯಿಂದ ಒಬ್ಬ ಸಾಹಿತಿಗಳು, ಕಥೆಗಾರರಾಗಿ, ಪ್ರಬಂಧಕಾರರಾಗಿ, ಉತ್ತಮ ನಾಟಕಕಾರರಾಗಿ, ಕಾದಂಬರಿಕಾರರಾಗಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಉತ್ತಮ ಸಾಹಿತ್ಯ ರಚನೆ ಮಾಡಿದ ಅಪರೂಪದ ಸರಳ-ಸಜ್ಜನ ವ್ಯಕ್ತಿ. ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದ ವ್ಯಕ್ತಿತ್ವದ ಒಂದು ವೈಶಿಷ್ಟ್ಯವೆಂದರೆ ಅವರ ಶಿಷ್ಯವಾತ್ಸಲ್ಯ. ತಾವು ತೆರೆಯ ಹಿಂದೆಯೇ ಇದ್ದು ತರುಣ ಜನಾಂಗದವರ ವಾಕ್ಚತುರತೆ, ಆಟೋಟಗಳು, ಕಲಾಕೌಶಲ್ಯಗಳನ್ನೆಲ್ಲ ಅರಿತುಕೊಂಡು ಅಂಥ ಶಿಷ್ಯವೃಂದವನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವದೆಂದರೆ ಅವರಿಗೆ ತುಂಬ ಸಂತಸದ ವಿಷಯವಾಗಿತ್ತು, ಆದ್ಯತೆಯ ಕೆಲಸವಾಗಿತ್ತು.
ಇವರು ಸಾಂಗಲಿಯಲ್ಲಿದ್ದಾಗ ಸೋದರ ಮಾವ ಮುಗಳಿಯವರು ನಡೆಸುತ್ತಿದ್ದ ‘ವರುಣ ಕುಂಜ’ದಲ್ಲಿಯ ಆಸಕ್ತರಲ್ಲೊಬ್ಬರಾಗಿ ಸಮವಯಸ್ಕರಾದ ಸು.ರಂ. ಎಕ್ಕುಂಡಿ, ವಿ.ಜಿ. ಭಟ್ಟ, ಕೆ.ಜಿ. ಶಾಸ್ತ್ರಿ, ರಾ. ಯ. ಧಾರವಾಡಕರರಂಥ ರಸಿಕ ಮಿತ್ರರೊಡನೆ ಅದರಲ್ಲಿ ಭಾಗವಹಿಸುತ್ತಿದ್ದರು. ಮುಂದೆ ಒಂದು ಆದರ್ಶ ಗುರುಶಿಷ್ಯ ಪರಂಪರೆಯನ್ನೇ ಹುಟ್ಟು ಹಾಕಿದ ಇವರ ನಡಾವಳಿ ಎಂದರೆ ಅತ್ಯಂತ ಪ್ರಾಮಾಣಿಕ ಮತ್ತು ಮುಗ್ಧ ಮಗುವಿನ ಮನಸ್ಸಿನ ಪ್ರತೀಕದಂತಿತ್ತು ಎಂದು ಹಿರಿಯ ಸಾಹಿತಿ ಶ್ರೀನಿವಾಸ ವಾಡಪ್ಪಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ದಿ. ಡಾ. ವರದರಾಜ ಹುಯಿಲಗೋಳರ 32ನೆಯ ಪುಣ್ಯಸ್ಮರಣೆಯ ನಿಮಿತ್ತ ಧಾರವಾಡದ ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟವು ದಿ: 10.10.2024 ರಂದು ಸಾಧನಕೇರಿಯ ‘ಚೈತ್ರ’ದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಅವರು ಮುಂದುವರಿದು ಮಾತನಾಡಿ ವರದರಾಜ ಹುಯಿಲಗೋಳರ ಸಂಶೋಧನ ಪ್ರಬಂಧ “ದುರ್ಗಸಿಂಹನ ಪಂಚತಂತ್ರ ಸಮೀಕ್ಷೆ” ಮತ್ತು “ಕೈಸ್ತರು ಕನ್ನಡಕ್ಕೆ ನೀಡಿದ ಕಾಣಿಕೆ” ಎಂಬ ಸಂಶೋಧನಾತ್ಮಕ ಕೃತಿಗಳು ಮುಂತಾದವುಗಳು ಹುಯಿಲಗೋಳರ ಅಪ್ರತಿಮ ಸಾಹಿತ್ಯಿಕ ಸಾಧನೆಗಳು ಅವರನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅಜರಾಮರಗೊಳಿಸಿವೆ ಎಂದು ಅಭ್ಯಾಸಪೂರ್ಣ ಉಪನ್ಯಾವನ್ನಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವೈದ್ಯ ಡಾ. ಪಿ.ಬಿ. ಕಲ್ಲಾಪುರ ಅವರು ಮಾತನಾಡಿ ವರದರಾಜರು 1976ರಲ್ಲಿ ಹುಟ್ಟುಹಾಕಿದ ‘ಅನ್ವೇಷಣ ಕೂಟ’ದ ಮೊದಲ ದಶಕದ ವಿವಿಧ ಕಾರ್ಯಕ್ರಮಗಳು, ಆ ಕೂಟದಲ್ಲಿಯ ಸಂಸ್ಥಾಪಕ ಮಂಡಲಿಯ ಒಬ್ಬ ಸದಸ್ಯರಾಗಿದ್ದ ತಾವು ಕಂಡ ಅನೇಕ ಸಾಹಿತ್ಯಿಕ ಚಟುವಟಿಕೆಗಳ ವಿಶೇಷತೆಗಳನ್ನು, ಡಾ. ವರದರಾಜರಂಥ ಹಿರಿಯ ಚೇತನರ ಸರಳ-ಸಜ್ಜನಿಕೆಗಳನ್ನು, ವಿವಿಧ ಸಾಹಿತ್ಯಿಕ ಸಂಸ್ಥೆಗಳನ್ನು ನಡೆಸಿದ ಅವರ ಸಂಘಟನಾತ್ಮಕ ಶಕ್ತಿಯನ್ನು ಸ್ಮರಿಸಿಕೊಂಡರು.
ನಂತರ ನಡೆದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ಸುಮಾ ಲಮಾಣಿಯವರು ದಾಸರ ಪದ, ಶರಣರ ವಚನಗಳನ್ನು ಅತ್ಯಂತ ಸುಂದರವಾಗಿ ಹಾಡಿ ರಂಜಿಸಿದರು. ಹಾರ್ಮೋನಿಯಂದಲ್ಲಿ ಹೇಮಂತ ಲಮಾಣಿ, ತಬಲಾದಲ್ಲಿ ಡಾಽಽ ಅನಿಲ ಮೇತ್ರಿ ಸಮರ್ಥ ಸಾಥ್ ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಇತ್ತೀಚೆಗೆ ತಮ್ಮ ಗುರುಬಂಧುಗಳೊಂದಿಗೆ ‘ಅಯೋಧ್ಯೆ’ಯ ಪ್ರವಾಸದಲ್ಲಿದ್ದಾಗ ಅಲ್ಲಿಯೇ ತೀರಿಕೊಂಡ ಧಾರವಾಡದ ನಾರಾಯಣಪುರ ನಿವಾಸಿ, ನಿವೃತ್ತ ಬ್ಯಾಂಕ ಅಧಿಕಾರಿ ಹಾಗೂ ಸಾಹಿತ್ಯ ಮತ್ತು ಸಂಗೀತಾಸಕ್ತರಾಗಿದ್ದ ಸುರೇಶ ಎಲ್. ಕುಲಕರ್ಣಿ ಮತ್ತು ವಯೋಸಹಜವಾಗಿ ಇತ್ತೀಚೆಗೆ ನಿಧನರಾದ ಅಪ್ಪಟ ರಾಷ್ಟ್ರೇ್ರಮಿ ಮಹಾದಾನಿ ಪ್ರಖ್ಯಾತ ಉದ್ಯಮಿ ರತನಟಾಟಾ ಅವರ ನಿಧನಕ್ಕಾಗಿ ಸಭೆಯು ತೀವ್ರ ಸಂತಾಪ ವ್ಯಕ್ತಪಡಿಸಿ ಅವರೀರ್ವರಿಗೆ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಶ್ರದ್ಧಾಂಜಲಿ ಗೊತ್ತುವಳಿ ಮಂಡಿಸಿದರು.
ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ರಾಜೀವ ಪಾಟೀಲ ಕುಲಕರ್ಣಿ, ಅನಂತ ಸಿದ್ಧೇಶ್ವರ, ಎಮ್.ವಿ. ಹೊಸಮನಿ, ಶ್ರೀಪಾದ ನಾಡಿಗೇರ, ರಮೇಶ ಇಟ್ನಾಳ, ಹಾ.ಅ.ಕೃ. ಆಚಾರ್ಯ, ಕೆ.ಸಿ. ಪುರಾಣಿಕಮಠ, ಎಸ್.ಎಮ್. ದೇಶಪಾಂಡೆ, ಶ್ರೀಶ ಕಲ್ಲಾಪುರ, ಸರೋಜಾ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.