30 ರಿಂದ 45 ಚಿತ್ರಗಳು ಪ್ರದರ್ಶನಕ್ಕೆ ಸಿದ್ದ : ಕೆಎಫ್ ಸಿಸಿ
ಬೆಂಗಳೂರು, ಅಕ್ಟೋಬರ್ 06: ಜಗತ್ತನ್ನು ಕಂಗಾಲಾಗಿಸಿ ಆರೋಗ್ಯ ಹಾಗೂ ಆರ್ಥಿಕತೆಗೆ ತೀವ್ರ ಹೊಡೆತ ನೀಡಿರುವ ಕೋವಿಡ್ 19 ಎದುರಿಸಲು ಎಲ್ಲ ದೇಶಗಳೂ ಸಜ್ಜಾಗಿವೆ.
ಕೊರೋನಾ ಸೋಂಕು ನಿಯಂತ್ರಿಸಲು ವಿಧಿಸಲಾಗಿದ್ದ ಲಾಕ್ ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸಿದ್ದು, ಸ್ತಬ್ದವಾಗಿದ್ದ ಮನರಂಜನೋದ್ಯಮ ಇದೇ 15ರಿಂದ ತೆರೆದುಕೊಳ್ಳಲಿದೆ.
ಕಟ್ಟುನಿಟ್ಟಿನ ಮಾರ್ಗಸೂಚಿಯೊಡನೆ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುವು ನೀಡಿರುವ ಹಿನ್ನೆಲೆಯಲ್ಲಿ ನಿರ್ಮಾಪಕರುಗಳು ಚಿತ್ರ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದಾರೆ.
ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಅವರು ಯುಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, “ಸುಮಾರು 30 ರಿಂದ 45 ಚಿತ್ರಗಳು ಪ್ರದರ್ಶನಕ್ಕೆ ಸಿದ್ದವಿದೆ. ಆದಾಗ್ಯೂ ಕಟ್ಟುನಿಟ್ಟಿನ ಮಾರ್ಗಸೂಚಿಯಿದ್ದು, ಶೇಕಡ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವಿರುವ ಕಾರಣ, ಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿ ನಿರ್ಮಾಪಕರುಗಳು ಸಭೆ ನಡೆಸಲಿದ್ದಾರೆ. ಇನ್ನು 3 ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ” ಎಂದರು.
-:ಎಲ್ಲವೂ ಪ್ರೇಕ್ಷಕರನ್ನು ಅವಲಂಬಿಸಿದೆ:-
ಲಕ್ಷಾಂತರ ರೂ. ಖರ್ಚು ಮಾಡಿರುವ ನಿರ್ಮಾಪಕರ ಕೈ ಹಿಡಿಯುವುದು ಜನರು. ಆದರೆ ಕೊರೋನಾ ಸೋಂಕು ಇನ್ನೂ ಕಡಿಮೆಯಾಗದ ಕಾರಣ, ಅ. 15ರಂದು ಎಷ್ಟು ಮಂದಿ ಚಿತ್ರಮಂದಿರಗಳಿಗೆ ಬರುತ್ತಾರೆ ಎಂಬುದನ್ನು ಕಾದುನೋಡಬೇಕು. ಎಲ್ಲವೂ ಪ್ರೇಕ್ಷಕರನ್ನೇ ಅವಲಂಬಿಸಿದೆ ಎಂದು ಜೈರಾಜ್ ಅಭಿಪ್ರಾಯಪಟ್ಟರು.
-;ಸಹಜಸ್ಥಿತಿ ಕಂಡುಬರುತ್ತಿದೆ:=
ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಕಡಿಮೆಯಾಗಿಲ್ಲವಾದರೂ, ಜನರು ಸಹಜವಾಗಿರಲು ಬಯಸುತ್ತಿದ್ದಾರೆ ಎಂಬುದು ಕಂಡುಬರುತ್ತಿದೆ.
ಆರು ತಿಂಗಳು ಮನೆಯಲ್ಲೇ ಇದ್ದ ಜನ ಪ್ರಸ್ತುತ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೋಟೆಲ್, ಮಾಲ್ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಜನಸಂದಣಿ ಕಂಡುಬರುತ್ತಿದೆ. ಚಿತ್ರಮಂದಿರಗಳಿಗೂ ಇದೇ ರೀತಿಯಲ್ಲಿ ಜನರು ಬರಬಹುದೆಂಬ ಆಶಯವನ್ನು ನಿರ್ಮಾಪಕರು ಹೊಂದಿದ್ದಾರೆ. ಒಂದು ವೇಳೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾದರೆ, ಶೇ. 50ಕ್ಕಿಂತ ಹೆಚ್ಚು ಜನರಿಗೆ ಚಿತ್ರ ವೀಕ್ಷಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಜೈರಾಜ್ ತಿಳಿಸಿದ್ದಾರೆ.