2024- 25 ನೇ ಸಾಲಿನ ಶಾಲಾ ಸಂಸತ್ತಿನ ಉದ್ಘಾಟನೆ
ಧಾರವಾಡ 16: ವಿದ್ಯಾಗಿರಿಯ ಶಿಕ್ಷಣ ಸಮಿತಿಯ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024- 25 ನೇ ಸಾಲಿನ ಶಾಲಾ ಸಂಸತ್ತಿನ ಉದ್ಘಾಟನೆಯನ್ನು ಜನತಾ ಶಿಕ್ಷಣ ಸಮಿತಿಯ ಸನ್ನಿಧಿ ಕಲಾ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಹೆಚ್ ಮಿಟ್ಟಲ್ ಕೋಡ್ ಅವರು ಆಗಮಿಸಿದ್ದರು. ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ರೇಣು ವಿ. ಪಾಟೀಲ್ ಹಾಗೂ ಸಹ ಸಂಯೋಜಕರಾದ ನಿರ್ಮಲಾ ಪಾಟೀಲ್, ಕಮಲಾಕ್ಷಿ ಸಣ್ಣಕ್ಕಿ ಮತ್ತು ಸಾವಿತ್ರಿ ಗತಾಡೆ ಇವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಅತಿಥಿಗಳಾದ ಮಿಟ್ಟಲ್ ಕೋಡ್ ಅವರು ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ ನಾಮಫಲಕಗಳನ್ನು ತೊಡಿಸುವ ಮೂಲಕ ಶಾಲಾ ಸಂಸತ್ತನ್ನು ಉದ್ಘಾಟನೆ ಮಾಡಿದರು. ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಿ ಅವರವರ ಕರ್ತವ್ಯಗಳಲ್ಲಿ ನಿರತರಾಗುವಂತೆ ಕರೆ ನೀಡಿದರು.
ನಂತರ ಮಾತನಾಡಿದ ಅತಿಥಿಗಳು ಶಾಲೆ ಮತ್ತು ಸಂಸತ್ತಿನ ಪದಾಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ವಿದ್ಯಾರ್ಥಿಗಳಲ್ಲಿ ಶಿಸ್ತು ತುಂಬಾ ಅವಶ್ಯಕ ಎಂಬುದನ್ನು ತಿಳಿಸಿದರು. ಶಾಲೆಯ ಸಮಸ್ತ ಕಾರ್ಯ ಕಲಾಪಗಳು ಸುವ್ಯವಸ್ಥಿತವಾಗಿ ನಡೆಯಲು ಶಾಲಾ ಸಂಸತ್ತು ಬಹಳ ಪ್ರಮುಖ ಎಂಬುದನ್ನು ಉತ್ತಮ ನಿದರ್ಶನಗಳ ಮೂಲಕ ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಪ್ರಾಚಾರ್ಯರಾದ ಶ್ರೀಮತಿ ರೇಣು ಪಾಟೀಲ್ ಅವರು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅಪೇಕ್ಷಾ ಮತ್ತು ಪರಿಣಿತಾ ಇವರು ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.