ಬೆಳಗಾವಿ

ಕುಲಗೋಡ ರಸ್ತೆ ಅಭಿವೃದ್ಧಿಗೆ 15 ಕೋಟಿ ಅನುದಾನ ಬಿಡುಗಡೆ: ಶಾಸಕ ಬಾಲಚಂದ್ರ ಜಾರಕಿಹೊಳಿ

ಕುಲಗೋಡ ರಸ್ತೆ ಅಭಿವೃದ್ಧಿಗೆ 15 ಕೋಟಿ ಅನುದಾನ ಬಿಡುಗಡೆ: ಶಾಸಕ ಬಾಲಚಂದ್ರ ಜಾರಕಿಹೊಳಿ

             ಗುರ್ಲಾಪುರ  22: ಉತ್ತಮ ಗುಣಮಟ್ಟದ ರಸ್ತೆ  ಕಾಮಗಾರಿಯನ್ನು ಕೈಕೊಂಡು ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಶುಕ್ರವಾರ ಸಂಜೆ ತಾಲ್ಲೂಕಿನ ಕುಲಗೋಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಮಂಜೂರಾದ  ಒಟ್ಟು 15 ಕೋಟಿ ರೂಪಾಯಿ ವೆಚ್ಚದ  ಕುಲಗೋಡ- ಹೊಸಟ್ಟಿ ಮತ್ತು ಕುಲಗೋಡ- ಹುಣಶ್ಯಾಳ ಪಿವೈ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.

            6 ಕೋಟಿ ರೂಪಾಯಿ ಅನುದಾನವು  ಕುಲಗೋಡ- ಹೊಸಟ್ಟಿ ಒಳದಾರಿ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಮತ್ತು 9 ಕೋಟಿ ರೂಪಾಯಿ ಅನುದಾನವು   ಕುಲಗೋಡ- ಹುಣಶ್ಯಾಳ ಪಿ.ವಾಯ್‌. ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುದಾನ ಬಿಡುಗಡೆಯಾಗಿದೆ ಎಂದವರು ಹೇಳಿದರು. ರಸ್ತೆಯ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರ ಪ್ರಯತ್ನದಿಂದ ಅನುದಾನವು  ಬಿಡುಗಡೆಯಾಗಿದೆ.ಸಮಸ್ತ ಅರಭಾವಿ ಕ್ಷೇತ್ರದ ಪರವಾಗಿ ಸತೀಶ್ ಜಾರಕಿಹೊಳಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 

                ಕ್ಷೇತ್ರದ ರಸ್ತೆ ಕಾಮಗಾರಿಗಳು ಬರುವ ಮಾರ್ಚ್‌ ತಿಂಗಳ ಒಳಗಾಗಿ ಪೂರ್ಣಗೊಳ್ಳಲಿವೆ.   ಈ ಮೂಲಕ ಕ್ಷೇತ್ರದ ಎಲ್ಲ ರಸ್ತೆಗಳು ಅಭಿವೃದ್ಧಿ ಕಾಣಲಿವೆ. ಲೋಕೋಪಯೋಗಿ, ಆರ್ಡಿಪಿಆರ್ ಇಲಾಖೆಯ ರಸ್ತೆ, ಸೇತುವೆ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಮಾಜಿ ನಿರ್ದೇಶಕ ಬಸನಗೌಡ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ತಮ್ಮಣ್ಣ ದೇವರ, ಸುನೀಲ ಒಂಟಗೋಡಿ,

                 ಪ್ರಕಾಶ ಪಾಟೀಲ, ಜಗದೀಶ ಡೊಳ್ಳಿ, ಮಲ್ಲಪ್ಪ ಕಬ್ಬೂರ, ಸದಾಶಿವ ನಾಯಿಕ, ಜಂಬೂ ಚಿಕ್ಕೋಡಿ, ಲೋಕೋಪಯೋಗಿ ಇಲಾಖೆಯ ಎಇಇ ಅವತಾಡೆ ,  ವೈ.ಆರ್ ಪಾಟೀಲ, ಬಿ.ಎಚ್‌.ಗೌಡರ, ಕುಲಗೋಡ- ಹೊಸಟ್ಟಿ- ಹುಣಶ್ಯಾಳ ಪಿವೈ ಗ್ರಾಮಗಳ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.ನಂತರ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕೆಲ ಕಾಲ ಸಾರ್ವಜನಿಕರನ್ನು ಭೇಟಿ ಮಾಡಿದರು. ಗ್ರಾಮಸ್ಥರು ನೀಡಿರುವ ಸತ್ಕಾರವನ್ನು ಸ್ವೀಕರಿಸಿದರು. 


ಸುದ್ದಿ ಓದಿ