ಪಂ. ಚಂದ್ರಶೇಖರ ಪುರಾಣಿಕಮಠ ಗುರುವರ್ಯರ 14ನೇ ಪುಣ್ಯ ಸ್ಮರಣೋತ್ಸವ
ಧಾರವಾಡ,29: ಧಾರವಾಡವೆಂದರೆ ಅದು ಸಂಗೀತ ದಿಗ್ಗಜರ ಬೀಡಾಗಿದ್ದು ಅಂತಹವರ ನಡುವೆಯೂ ಪಂ. ಚಂದ್ರಶೇಖರ ಪುರಾಣಿಕಮಠರಂಥ ಸರಳ, ಸಜ್ಜನ ಗಾಯಕರು ಅಪಾರ ಶಿಷ್ಯಬಳಗವನ್ನು ಪ್ರೀತಿಯಿಂದ ಬೆಳೆಸುತ್ತ ‘ಶಿಷ್ಯಪ್ರಾಣ’ರಾಗಿ ಪ್ರತ್ಯೇಕ ನೆಲೆಯಲ್ಲಿ ನಿಲ್ಲುತ್ತಾರೆ ಎಂದು ಖ್ಯಾತ ಹಿಂದುಸ್ತಾನೀ ಗಾಯಕ ಡಾ. ಶಾಂತಾರಾಮ ಹೆಗಡೆಯವರು ಹೆಳಿದರು.
ಜು. 28 2024 ರಂದು ಧಾರವಾಡ ಸಾಧನಕೇರಿಯ ಗುರುವರ್ಯರ ಸ್ವಗೃಹದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಪಂ. ಚಂದ್ರಶೇಖರ ಪುರಾಣಿಕ ಸ್ಮೃತಿ ಸಂಗೀತ ಸಭಾದ ಆಶ್ರಯದಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮೀ ಅಮ್ಮಿನಭಾವಿಯವರು ಮಾತನಾಡಿ ಮನಶ್ಶಾಸ್ತ್ರ ಮತ್ತು ಸಂಗೀತಗಳು ಅವಿನಾಭಾವ ಸಂಬಂಧ ಹೊಂದಿದ್ದು ಲಯಬದ್ಧ, ರಾಗಬದ್ಧ ಸಂಗೀತದ ಆಲಿಕೆಯಿಂದ ಅನೇಕ ಮನೋ ದೈಹಿಕ ಕಾಯಿಲೆಗಳು ಸಂಪೂರ್ಣ ಗುಣಮುಖವಾದ ಸಾಕಷ್ಟು ಉದಾಹರಣೆಗಳಿವೆ. ಮನಸ್ಸಿನ ದ್ವಂದ್ವಗಳಿಂದ ದೂರವಾಗಲು ಸಿದ್ಧೌಷಧಿ ಎಂದರೆ ಅದು ಸಂಗೀತ ಮಾತ್ರ ಎಂದು ಅಭಿಪ್ರಾಯಪಟ್ಟರು.
ಗಾಯಕಿ ಭಾರ್ಗವಿ ಕುಲಕರ್ಣಿಯವರ ಸುಗಮ ಸಂಗೀತ, ಹಿರಿಯ ಹಿಂದುಸ್ತಾನೀ ಗಾಯಕ ಡಾ. ಹುಗ್ಗಣ್ಣವರ ತಮ್ಮ ಶ್ರೀಮಂತ ಕಂಠದಲ್ಲಿ ಪ್ರಸ್ತುತ ಪಡಿಸಿದ ರಾಗ ಚಂದ್ರ ಕೌಂಸ ಮತ್ತು ಭೈರವಿರಾಗದಲ್ಲಿ ಕೈಸೇ ಕಾಟೂ ದಿನ್ ಮತ್ತು ಶಾರದೆ ಶುಭಕಾರೀ ಜಯಜಯ” ಗೀತೆಗಳು ಗಂಧರ್ವ ಲೋಕವನ್ನೇ ಸೃಷ್ಠಿಸಿ ರಸಿಕರ ಮನ ತಣಿಸಿದವು. ಸಹಕಲಾವಿದರಾದ ಪಂ. ಅಲ್ಲಮಪ್ರಭು ಕಡಕೋಳ, ಡಾಽಽ ಪರಶುರಾಮ ಕಟ್ಟಿ ಸಂಗಾವಿ, ಭೂಷಣ ಗುಡ್ಡದಮಠ, ಜಯತೀರ್ಥ ಪಂಚಮುಖಿ, ಪ್ರಮೋದ ಹೆಬ್ಬಳ್ಳಿ ಇವರ ತಬಲಾ, ಹಾರೋ್ಮನಿಯಂ ವಾದನಗಳು ಕಾರ್ಯಕ್ರಮಕ್ಕೆ ಮೆರುಗು ತಂದವು.
ಸ್ಮೃತಿಸಭಾದ ಅಧ್ಯಕ್ಷ ಕುಮಾರಸ್ವಾಮಿ ಪುರಾಣಿಕಮಠ, ಸ್ಥಾಯೀ ಸಮಿತಿ ಅಧ್ಯಕ್ಷ ಎನ್.ಟಿ. ಪರಾಂಜಪೆ, ಶಿವಯೋಗಿ ಪುರಾಣಿಕಮಠ, ಗುರುಪುತ್ರಿ ಸುಶೀಲಾ ಹಿರೇಮಠ ಮುಂತಾದವರು ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಡಾಽಽ ಅಶೋಕ ಹುಗ್ಗಣ್ಣವರ ದಂಪತಿಗಳನ್ನು ಆತ್ಮೀಯವಾಗಿ ಸತ್ಕರಿಸಲಾಯಿತು.
ಇತ್ತೀಚೆಗೆ ನಿಧನರಾದ ಇದೇ ಬಡಾವಣೆಯ ಹಿರಿಯ ಚೇತನ, ಸಲಹಾ ಸಮಿತಿ ಸದಸ್ಯ ನಿವೃತ್ತ ಅಭಿಯಂತ ಕೃಷ್ಣ ವಿ. ಹಾವನೂರರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೇಲೆ ಆಕಾಶದಿಂದ ಆಗಾಗ ಆಷಾಢದ ಬೆಳಗಿನ ಹನಿ ತಟಕುತ್ತಿದ್ದಂತೆ ಸಾಧನಕೇರಿಯ ‘ಗುರುಕೃಪಾ’ ನಿಲಯದ ಸಭಾಂಗಣದಲ್ಲಿ ಚಂದ್ರಶೇಖರ ಗುರುಗೀತೆಯ ಕರುಣಾರಸಪೂರಿತ, ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಪಂ. ಚಂದ್ರಶೇಖರ ಪುರಾಣಿಕಮಠರ 14ನೇ ಪುಣ್ಯ ಸ್ಮರಣೋತ್ಸವವು ಅಂದು ರಾತ್ರಿ 9 ಗಂಟೆಯವರೆಗೆ ನಿರಂತರವಾಗಿ ರಿಂಗಣಿಸುತ್ತ ಖ್ಯಾತ ಹಿಂದುಸ್ತಾನೀ ಗಾಯಕ ಡಾ. ಅಶೋಕ ಹುಗ್ಗಣ್ಣವರ ಅವರ ಶ್ರೀಮಂತ ಕಂಠದ ಪ್ರೌಢ ಗಾಯನದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಗಣ್ಯರಾದ ಡಾ. ಜಗದೀಶ ಕಾಡದೇವರಮಠ, ಎಸ್. ಎನ್. ಹೆಗಡೆ, ಶ್ಯಾಮ ಕುಲಕರ್ಣಿ, ಮುಂಬಯಿಯಿಂದ ಗಾಯಕ ನಿಶಾಂತ, ಮಂಜುನಾಥ ಹೆಗಡೆ, ಪ್ರತಿಭಾ ಹೆಗಡೆ ದಂಪತಿಗಳು, ಶಿವಪುತ್ರಯ್ಯ ಹಿರೇಮಠ, ಬಿ.ಆಯ್. ಈಳಿಗೇರ, ಪರಮೇಶ್ವರ ಹೆಗಡೆ, ಡಿ.ವಿ. ಕುಲಕರ್ಣಿ, ಎಮ್.ಎ. ಕಾಮಟೆ, ಹೇಮಂತ ಲಮಾಣಿ, ಪ್ರಕಾಶ ಬಾಳಿಕಾಯಿ, ಅನಂತ ಸಿದ್ಧೇಶ್ವರ, ಎಸ್.ಬಿ. ದ್ವಾರಪಾಲಕ, ಸುಮಿತ್ರಾ ಕಾಡದೇವರಮಠ, ಕಾಮಾಕ್ಷಿ ಗುಡ್ಡದಮಠ, ಸುನಂದಾ ಬೆಳ್ಳಿಕೇರಿ, ಸೀಮಾ ಪರಾಂಜಪೆ ಮುಂತಾದವರು ಹಾಗೂ ಗುರುಗಳ ಶಿಷ್ಯವೃಂದ, ಅಭಿಮಾನೀ ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಟಿ. ಪರಾಂಜಪೆಯವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾರದಾ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಗಾಯಕ ಅರ್ಜುನ ವಠಾರ ವಂದಿಸಿದರು.