ಧಾರವಾಡ - ಹುಬ್ಬಳ್ಳಿ

ಈಶ್ವರಚಂದ್ರ ವಿದ್ಯಾಸಾಗರವರ 133 ನೇ ಸ್ಮರಣ ಮಾಸಾಚರಣೆ

ಈಶ್ವರಚಂದ್ರ ವಿದ್ಯಾಸಾಗರವರ 133 ನೇ ಸ್ಮರಣ ಮಾಸಾಚರಣೆ

ಧಾರವಾಡ 14 : ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎ. ಐ. ಎಂ. ಎಸ್‌. ಎಸ್)  ಜಿಲ್ಲಾ ಸಮಿತಿ ವತಿಯಿಂದ ಇಂದು ಸಂಘಟನೆಯ ಕಚೇರಿಯಲ್ಲಿ ಭಾರತದ ನವೋದಯದ ಮಹಾನ್ ಚೇತನ ಈಶ್ವರಚಂದ್ರ ವಿದ್ಯಾಸಾಗರವರ 133ನೇ ಸ್ಮರಣ ಮಾಸಾಚರಣೆ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಸಂದರ್ಭದಲ್ಲಿ ಎ. ಐ. ಎಂ. ಎಸ್‌. ಎಸ್ ನ ರಾಜ್ಯ ಅಧ್ಯಕ್ಷ ಎಂ. ಎನ್‌. ಮಂಜುಳಾ ಮಾತನಾಡುತ್ತಾ ಮಹಿಳೆಯರಿಗೆ ಶಿಕ್ಷಣ ಅನಾವಶ್ಯಕ ಅಥವಾ ಶಿಕ್ಷಣದಿಂದ ಮಹಿಳೆಯರಿಗೆ ವೈಧವ್ಯ ಪ್ರಾಪ್ತವಾಗುತ್ತದೆ ಎಂಬ ವಿಚಾರ ಪ್ರಚಲಿತದಲ್ಲಿದ್ದ ಅಂದಿನ ಸಮಾಜದಲ್ಲಿ, ಇಡೀ ಸಮಾಜವೇ ಮಹಿಳೆಯ ಶಿಕ್ಷಣ ವಿರೋಧಿ ನಿಲುವು ತಾಳಿದ್ದ ಸಂದರ್ಭದಲ್ಲಿ ಆ ಸಮಾಜದ ವಿರುದ್ಧ ಸೆಣಸಿ ಮಹಿಳೆಗೆ ಪುರುಷನಷ್ಟೇ ಶಿಕ್ಷಣ ಪಡೆಯುವ ಹಕ್ಕಿದೆ ಎಂದು ಸಾರಿ ಸಾಧಿಸಿದವರು ವಿದ್ಯಾಸಾಗರರು. ಅಷ್ಟೇ ಅಲ್ಲದೆ ಮಹಿಳೆಯರ ಅಂದಿನ ದುಸ್ಥಿತಿಗೆ ಬಹುಮಟ್ಟಿಗೆ ಕಾರಣವಾಗಿದ್ದ ಬಾಲ್ಯ ವಿವಾಹ, ಬಹುಪತ್ನಿತ್ವ ಹಾಗೂ ಆಜೀವ ವೈಧವ್ಯಗಳ ನಿರ್ಮೂಲನೆಗೆ ವಿದ್ಯಾಸಾಗರರು ಸಮರವೇ ಸಾರಿದರು. ಆದರೆ ವಿದ್ಯಾಸಾಗರರು ಅಂದುಕೊಂಡ ಧರ್ಮನಿರಪೇಕ್ಷ ಮಾನವತವಾದದ ಕನಸು ಇಂದಿಗೂ ಅಪೂರ್ಣವಾಗಿಯೇ ಉಳಿದು ಹೋಗಿದೆ. ಸಮಾಜದಲ್ಲಿ ಇಂದೂ ಮಹಿಳೆಯರನ್ನು ಕೀಳಾಗಿ ಕಾಣುವ ಪುರುಷಪ್ರಧಾನ ಧೋರಣೆ ಮುಂದುವರೆದಿದೆ.  

ವ್ಯಾಪಕವಾಗಿ ಹರಡುತ್ತಿರುವ ಅಶ್ಲೀಲ ಸಿನಿಮಾ-ಸಾಹಿತ್ಯ, ಅಂತರ್ಜಾಲ ವೆಬ್‌ಸೈಟ್‌ಗಳು, ಮದ್ಯಪಾನ, ಮಾದಕ ವಸ್ತುಗಳ ಪರಿಣಾಮದಿಂದಾಗಿ ಮಹಿಳೆಯರ ಮೇಲಿನ ದೌರ್ಜನ್ಯ, ಕ್ರೌರ್ಯ, ದಬ್ಬಾಳಿಕೆಗಳು ಹೆಚ್ಚಾಗುತ್ತಲೇ ಇವೆ.  ಮಹಿಳೆಯನ್ನು ಕೀಳಾಗಿ ಕಾಣುವ ಈ ಸಮಾಜದಲ್ಲಿ, ಮತ್ತೆ ಆಕೆ ತಲೆ ಎತ್ತಿ ಗೌರವ ಘನತೆಗಳಿಂದ ಬಾಳ ಬಲ್ಲ ಹೊಸ ಸಮಾಜಕ್ಕಾಗಿ ಹೋರಾಟ ನಡೆಸಬೇಕಿದೆ.ಈಶ್ವರಚಂದ್ರ ವಿದ್ಯಾಸಾಗರ್‌ರವರ 133ನೇ ಸ್ಮರಣಾಚರಣೆಯ ಸಂದರ್ಭದಲ್ಲಿ ಜುಲೈ 29ರಿಂದ ಆಗಸ್ಟ್‌ 29, 2024ರವರೆಗೆ ಇಡೀ ತಿಂಗಳಾದ್ಯಂತ ಮಹಿಳೆಯರ ಮತ್ತು ಮಕ್ಕಳ ಮೇಲಿನ ಸಾಮಾಜಿಕ ದೌರ್ಜನ್ಯಗಳನ್ನು ವಿರೋಧಿಸಿ ಮಾಸಾಚರಣೆಯನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಮ್ ಎಸ್‌ಎಸ್)ಯ ಕರ್ನಾಟಕ ರಾಜ್ಯ ಸಮಿತಿಯು ಹಮ್ಮಿಕೊಂಡಿದೆ. ಎಲ್ಲಾ ಕ್ಷೇತ್ರದ ಮಹಿಳೆಯರ ನಡುವೆ ಈಶ್ವರಚಂದ್ರ ವಿದ್ಯಾಸಾಗರ್‌ರವರ ವಿಚಾರಗಳನ್ನು ಹರಡುವ ಕಾರ್ಯಕ್ರಮಗಳನ್ನು ರಾಜ್ಯದ ಉದ್ದಗಲಕ್ಕೂ ಸಂಘಟಿಸುತ್ತಿದೆ ‘ಎಂದು ನುಡಿದರು.  ಇದೇ ಸಂಧರ್ಭದಲ್ಲಿ ಕಲ್ಕತ್ತಾ ಆಸ್ಪತ್ರೆಯಲ್ಲಿ ನಡೆದ ಕ್ರೂರ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಲಾಯಿತು. 

ಎ. ಐ. ಎಂ. ಎಸ್‌. ಎಸ್‌ನ ಜಿಲ್ಲಾ ಕಾರ್ಯದರ್ಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,  ಜಿಲ್ಲಾ ಅಧ್ಯಕ್ಷ ಮಧುಲತಾ ಗೌಡರ್, ಉಪಾಧ್ಯಕ್ಷ ದೇವಮ್ಮ ದೇವತ್ಕಲ್, ಜಿಲ್ಲಾ ಸಮಿತಿಯ ಇತರ ಸದಸ್ಯರುಗಳಾದ ವಿಜಯಲಕ್ಷ್ಮಿ ಹಿರೇಮಠ್, ಅರುಣಾ ದಾದುಗೋಳ್, ಈರವ್ವ ತಲ್ವಾರ್ ಮೊದಲಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ