ರಾಣೆಬೆನ್ನೂರ

ನೂರಕ್ಕೆ ನೂರರಷ್ಟು ಪರಿಪೂರ್ಣ ಕೆಲಸ ಮಹಿಳೆಯರಿಂದ ಮಾತ್ರ ಸಾಧ್ಯ: ರವೀಂದ್ರಗೌಡ ಪಾಟೀಲ

ನೂರಕ್ಕೆ ನೂರರಷ್ಟು ಪರಿಪೂರ್ಣ ಕೆಲಸ ಮಹಿಳೆಯರಿಂದ ಮಾತ್ರ ಸಾಧ್ಯ: ರವೀಂದ್ರಗೌಡ  ಪಾಟೀಲ

ರಾಣೇಬೆನ್ನೂರು 30 : ಮಹಾತ್ಮಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ ಬೆಂಗಳೂರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ ಜೀವನೋಪಾಯ ಜಿಲ್ಲಾ ಪಂಚಾಯಿತಿ ಹಾವೇರಿ, ತಾಲೂಕು ಪಂಚಾಯಿತಿ ರಾಣೇಬೆನ್ನೂರು ಹಾಗೂ ನೀಡ್ಸ್‌ ಸಂಸ್ಥೆ ರಾಣೇಬೆನ್ನೂರು ಸಹಯೋಗದಲ್ಲಿ ಘನತ್ಯಾಜ್ಯ ನಿರ್ವಾಹಣಾ ಘಟಕದಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ರಾಣೇಬೆನ್ನೂರಿನ ಆದಶಕ್ತಿ ದೇವಸ್ಥಾನದ ಭಗವಾನದಾಸ್ ಕೆ. ಗುಪ್ತಾ ಸಭಾ ಭವನದಲ್ಲಿ ಮೂರು ದಿನಗಳ ಘನತ್ಯಾಜ್ಯ ನಿರ್ವಹಣೆ ಪುನಶ್ಚೇತನ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ರಾಣೇಬೆನ್ನೂರು ತಾಲೂಕು ರೈತ ಸಂಘದ ಅಧ್ಯಕ್ಷರಾದ ರವೀಂದ್ರಗೌಡ ಪಾಟೀಲ ಇವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು.  

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸ್ವಚ್ಛತೆಯ ಕುರಿತು ಕೆಲಸ ಸಾಧನೆಯಾಗಬೇಕಾದರೆ ಮಹಿಳೆರಿಂದಲೇ ಸಾಧ್ಯವೆಂಬ ನಂಬಿಕೆಯಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿಮ್ಮಂತಹ ಮಹಿಳಾ ವಾಹನ ಚಾಲಕರು ಹಾಗೂ ಸಹಾಯಕರನ್ನು ಆಯ್ಕೆ ಮಾಡಿರುತ್ತಾರೆ. ವಾಹನ ಚಾಲಕರು ಅತೀ ಮುಖ್ಯವಾಗಿ ಸೀಟ್‌ಬೆಲ್ಟ್‌ ಹಾಕಿಕೊಳ್ಳುವ ಉಪಯೋಗವನ್ನು ಉದಾಹರಣೆಯ ಮೂಲಕ ತಮ್ಮ ಜೀವನ ಹೇಗೆ ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ನೀಡ್ಸ್‌ ಸಂಸ್ಥೆಯಿಂದ ಈ ತರಬೇತಿ ಮತ್ತು ಪ್ರಮಾಣಪತ್ರ ಪಡೆದ ಶಿಬಿರಾರ್ಥಿಗಳಿಗೆ ಸ್ವಚ್ಛ ಸಂಕೀರ್ಣದಲ್ಲಿ ಕೆಲಸ ದೊರೆಯಲು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.  

ನೀಡ್ಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಚ್‌.ಎಫ್‌. ಅಕ್ಕಿ ಮಾತನಾಡಿ ತಾವು ಪಡೆದಂತ ತರಬೇತಿಗಳನ್ನು ತಮ್ಮ ಘನತ್ಯಾಜ್ಯ ನಿರ್ವಹಣ ಘಟಕದಲ್ಲಿ ಅನುಷ್ಠಾನಗೊಳಿಸಲು ಇದೊಂದು ಸದಾ ಅವಕಾಶವಾಗಿದೆ ಎಂದು ತಿಳಿಸಿದರು.  

ಮೂರುದಿನಗಳ ತರಬೇತಿ ಕುರಿತು ಸಂಕ್ಷಿಪ್ತವಾಗಿ ಶಿಬಿರಾರ್ಥಿಗಳು ವಿಷಯವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ನೀಡ್ಸ್‌ ಸಂಸ್ಥೆಯ ಸಿಬ್ಬಂದಿಗಳಾದ ಸುಧೀರ ಈಟಿ, ಅಬ್ದುಲ್ ಖಾದರ ಹಾಗೂ 10 ಪಂಚಾಯಿತಿಗಳಿಂದ ಒಟ್ಟು ಮೂವತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದು ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ನೀಡ್ಸ್‌ ಸಂಸ್ಥೆ ಯೋಜನಾ ಸಹಾಯಕರಾದ ಕರಿಬಸಪ್ಪ ಎಂ. ಸ್ವಾಗತಿಸಿದರು ಹಾಗೂ ಯೋಜನಾ ಸಂಯೋಜಕರಾದ ತಿಪ್ಪೇಶಪ್ಪ ಕನ್ನಮ್ಮನವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ