ಗುಳೇಗುಡ್ಡ

ಕಟಗೇರಿ ಕೆರೆ : ಸಮಗ್ರ ಕೆರೆ ಅಭಿವೃದ್ಧಿಗೆ ರೂ. 1.20 ಕೋಟಿ ಅನುದಾನ

ಕಟಗೇರಿ ಕೆರೆ : ಸಮಗ್ರ ಕೆರೆ ಅಭಿವೃದ್ಧಿಗೆ ರೂ. 1.20 ಕೋಟಿ ಅನುದಾನ
ತಾಲೂಕಿನ ಕಟಗೇರಿ ಗ್ರಾಮದ ಕೆರೆಯನ್ನು ಜಿಪಂ ಹಾಗೂ ತಾಪಂ ಅಧಿಕಾರಿಗಳು ವೀಕ್ಷಣೆ ಮಾಡಿದರು.

ಕಟಗೇರಿ ಕೆರೆ : ಪ್ರವಾಸಿತಾಣದ ಕನಸು  

ಗುಳೇದಗುಡ್ಡ16: ವಿವಿಧ ಅನುಕೂಲತೆಗೆ ಕೆರೆಯನ್ನು ಬಳಸಿಕೊಂಡಾಗ ಮಾತ್ರ ಜೀವ ಸಂಕುಲ ಬೆಳೆಯಲು ಹಾಗೂ ಸಮಗ್ರ ಅಭಿವೃದ್ಧಿಯಾಗಲು ಸಾಧ್ಯ. ಕಟಗೇರಿ ಕೆರೆಯನ್ನು ಪ್ರವಾಸೋಧ್ಯಮದ ಕೇಂದ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಪಂ ಸಿಇಓ ಟಿ. ಭೂಬಾಲನ್ ಹೇಳಿದರು. 

ಅವರು ಮಂಗಳವಾರ ತಾಲೂಕಿನ ಕಟಗೇರಿ ಗ್ರಾಮದ ಕೆರೆ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು. 

ಕೆರೆಗಳು  ಜೀವ ಸಂಕುಲದ ಅವಿಭಾಜ್ಯ ಅಂಗಗಳು. ಅವುಗಳನ್ನು ಸಂರಕ್ಷಿಸಿಕೊಂಡು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಬಿಟ್ಟು ಹೋಗುವುದು ಮನುಕುಲದ ಕರ್ತವ್ಯವಾಗಿದೆ. ತಾಲೂಕಿಗೆ ಕಟಗೇರಿ ಕೆರೆ ಯನ್ನು ಆಯ್ಕೆ ಮಾಡಲಾಗಿದೆ. ಘಟಪ್ರಭಾ ಮೇಲ್ದಂಡೆ ಯೋಜನೆಯಿಂದ ಕೆರೂರ ಕೆರೆಗೆ ಬರುವ ನೀರು   ಈ ಕೆರೆಗೆ ಬಂದು ಸಂಗ್ರಹವಾಗುತ್ತದೆ.  ಒಟ್ಟು 64 ಎಕರೆ ಕ್ಷೇತ್ರದ ವಿಶಾಲವಾದ  ಕೆರೆಯನ್ನು ಅಭಿವೃದ್ಧಿಗೆ 1.20 ಕೋಟಿ ರೂ. ಅನುದಾನ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು.   

ತಾಪಂ ಇಓ ಎಸ್‌.ಪಿ. ನಕ್ಕರಗುಂದಿ ಮಾತನಾಡಿ, ಎಂ. ನರೇಗಾ ಯೋಜನೆ ಅಡಿಯಲ್ಲಿ ಕಟಗೇರಿ ಕೆರೆಯನ್ನು ಆಯ್ಕೆ ಮಾಡಲಾಗಿದೆ. ಸಣ್ಣ ನೀರಾವರಿ ಹಾಗೂ ಗ್ರಾಪಂ ಸಹಯೋಗದಲ್ಲಿ ಕಟಗೇರಿ ಗ್ರಾಮದ 64 ಎಕರೆ ಕ್ಷೇತ್ರದ ವಿಶಾಲವಾದ  ಕೆರೆ ಅಭಿವೃದ್ಧಿ ಪಡಿಸುವುದರಿಂದ ಈ ಭಾಗದ ಪ್ರವಾಸೋಧ್ಯಮ ಬೆಳೆಯಲಿದೆ. ಮೀನುಗಾರಿಕೆ ಅಭಿವೃದ್ಧಿ ಸೇರಿದಂತೆ ಕೆರೆಯಲ್ಲಿ  ಬೋಟಿಂಗ್ ವ್ಯವಸ್ಥೆ ಕಲ್ಪಿಸಿ ಕೆರೆಗೆ ಪ್ರವಾಸಿಗರನ್ನು ಸೆಳೆಯಲು ಹಾಗೂ ಉದ್ಯೋಗ ಸೃಷ್ಟಿಸಲು ಅಭಿವೃದ್ಧಿ ಪಡಿಸಲಾಗುತ್ತಿದೆ. ಅಷ್ಟೇ ಅಲ್ಲ, ಪ್ರಾಣಿ, ಪಕ್ಷಿ ಸಂಕುಲಗಳ ಸಂರಕ್ಷಣೆಯಾಗಲಿದೆ. ಕೆರೆ ಮೇಲೆ ಕಾಲುದಾರಿ ನಿರ್ಮಿಸಿ ಫೆವರರ್ಸ್‌ ಜೋಡಣೆ ಕಾಮಗಾರಿ, ಕೆರೆ ಸುತ್ತಲೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸಸಿಗಳನ್ನು ನೆಡಲಾಗುತ್ತದೆ ಎಂದರು. 

ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಸಹಾಯಕ ನಿರ್ದೆಶಕ ರಾಮಚಂದ್ರ ಮೈತ್ರಿ, ಗ್ರಾಪಂ ಪಿಡಿಓ ಆರತಿ ಕ್ಷತ್ರಿ,  ಉಮೇಶ ಮೋಕಾಶಿ, ಸೇರಿದಂತೆ ಇತರರು ಹಾಜರಿದ್ದರು.     

ಸುದ್ದಿ ಓದಿ