ಯುವ ಗಾಯಕಿ ಕುಮಾರಿ ದೀಪ್ತಿ ಭಟ್ಟ ಪ್ರಾರ್ಥನಾ ಗೀತೆಗಳೊಂದಿಗೆ ಕಾರ್ಯಕ್ರಮ ಚಾಲನೆ
ಯುವ ಗಾಯಕಿ ಕುಮಾರಿ ದೀಪ್ತಿ ಭಟ್ಟ ಪ್ರಾರ್ಥನಾ ಗೀತೆಗಳೊಂದಿಗೆ ಕಾರ್ಯಕ್ರಮ ಚಾಲನೆ
ಧಾರವಾಡ 19 :ಸಂಜೆಯ ಸಮಯದಲ್ಲಿ ಬಾನಾಡಿಗಳು ತಮ್ಮ ಕಲರವದೊಂದಿಗೆ ಗೂಡು ಸೇರುವ ಸಮಯ... ಇದೇ ಸಂದರ್ಭದಲ್ಲಿ ಧಾರವಾಡ ತೇಜಸ್ವಿನಗರದ ಕೃಷ್ಣ ಅಂಬೇಕರ ದಂಪತಿಯ ಮನೆಯ ಅಂಗಳ ಸಂಗೀತದ ರಸಮಾಧುರ್ಯದಿಂದ ಆವರಿಸಿಕೊಂಡಿತ್ತು. ಹಿರಿಯ ಮಗ, ತಬಲಾ ಆನಂದ ಎಂದೇ ಖ್ಯಾತರಾಗಿದ್ದ ಆನಂದ ಅಂಬೇಕರ ಸಂಸ್ಮರಣೆಯಲ್ಲಿ ನಡೆದ 11ನೇ ವರ್ಷದ ನೆನಪು ಸಂಗೀತ ಸಂಜೆಯ ಸಪ್ತಸ್ವರಗಳ ನಿನಾದ ಹೃನ್ಮನ ಸೆಳೆಯಿತು.ಯುವ ಗಾಯಕಿ ಕುಮಾರಿ ದೀಪ್ತಿ ಭಟ್ಟ ಪ್ರಾರ್ಥನಾ ಗೀತೆಗಳೊಂದಿಗೆ ಕಾರ್ಯಕ್ರಮಕೆ ಚಾಲನೆ ದೊರೆಯಿತು. ದಾಸರ ಪದ ಹಾಗೂ ಮರಾಠಿ ಅಭಂಗಗಳ ಸುಶ್ರಾವ್ಯ ಪ್ರಸ್ತುತಿಯೊಂದಿಗೆ ನೆರೆದವರನ್ನು ಭಕ್ತಿಪರವಶರನ್ನಾಗಿಸಿದರು. ನಂತರ ನಾಡಿನ ಹಿರಿಯ ತಬಲಾ ಕಲಾವಿದರಾದ ಪಂ. ರಘುನಾಥ ನಾಕೋಡ ಅವರ ತಬಲಾ ಸೋಲೊ ಮೂಡಿಬಂತು. ಪೇಶಕಾರ, ಕಾಯದಾ, ಚಕ್ರಧಾರ, ರೇಲಾ ಹೀಗೆ ತಮ್ಮ 60 ವರ್ಷಗಳ ಸಾಧನೆಯ ಮೆಲಕನ್ನು ತಬಲಾ ವಾದನದ ಮೂಲಕ ತೋರಿಸಿದರು. ಇವರಿಗೆ ಬಿ.ಆಂಜನೇಯ ಲೆಹರಾ ಸಾಥ್ ನೀಡಿದರು.ನಂತರ ಹುಬ್ಬಳ್ಳಿಯ ಉದಯೋನ್ಮುಖ ಗಾಯಕ ಸುಜಯೀಂದ್ರ ಕುಲಕರ್ಣಿ ತಮ್ಮ ಗಾಯನವನ್ನು ಶ್ಯಾಮಕಲ್ಯಾಣ್ ರಾಗದೊಂದಿಗೆ ಆರಂಭಿಸಿದರು. ಮೂರು ಲಯಗಳಲ್ಲಿ ನಿರಾತಂಕವಾಗಿ ಗಾಯನ ಮೂಡಿಬಂತು. ನಂತರ ದಾಸರಪದಗಳು, ಮರಾಠಿ ಅಭಂಗಗಳನ್ನು ಉತ್ತಮವಾಗಿ ಪ್ರಸ್ತುತಪಡಿಸಿದರು. ಕೊನೆಯಲ್ಲಿ ಭೈರವಿ ರಾಗದೊಂದಿಗೆ ಸಂಗೀತ ಸಂಜೆಗೆ ತೆರೆ ಎಳೆದರು. ಇವರಿಗೆ ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಳ, ಹಾರ್ಮೋನಿಯಂದಲ್ಲಿ ಸತೀಶ ಭಟ್ಟ ಹೆಗ್ಗಾರ, ಕು. ದೀಪ್ತಿ ಭಟ್ಟ-ಕು.ಸಮನ್ವಿತ ತಂಬೂರಿ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ಆನಂದನ ಗುರುಗಳಾದ ಪಂ. ರಾಚಯ್ಯ ಹಿರೇಮಠ, ಪಂ. ಜಯತೀರ್ಥ ಮೇವುಂಡಿ, ಪಂ. ಮಲ್ಲಿಕಾರ್ಜುನ ತರ್ಲಘಟ್ಟ, ಪಂ. ಶ್ರೀನಿವಾಸ ಜೋಶಿ, ಪಂ. ಶ್ರೀಕಾಂತ ಕುಲಕರ್ಣಿ, ಪಂ. ಶಶಿಧರ ನರೇಂದ್ರ, ವಿದುಷಿ ಸಂಧ್ಯಾ ಕುಲಕರ್ಣಿ, ಕರ್ನಲ್ ಕಿರಣ ಹೆಗಡೆ, ಮೇಜರ್ ಆರತಿ, ಮೇಜರ್ ಸುಮೇದ, ಆನಂದರ ಮಿತ್ರರು, ಅಂಬೇಕರ ಮನೆತನದ ಸದಸ್ಯರು ಮುಂತಾದವರು ಭಾಗವಹಿದ್ದರು. ಡಾ. ಹರೀಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.