ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ 2002 ರಿಂದ ಪ್ರತಿ ವರ್ಷ ನ20 ರಂದು ವಿಶ್ವ ಸಿಓಪಿಡಿ ದಿನಾಚರಣೆ
ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ 2002 ರಿಂದ ಪ್ರತಿ ವರ್ಷ ನ20 ರಂದು ವಿಶ್ವ ಸಿಓಪಿಡಿ ದಿನಾಚರಣೆ
ಕಾಗವಾಡ 19 : ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ 2002 ರಿಂದ ಪ್ರತಿ ವರ್ಷ ನವೆಂಬರ್ ತಿಂಗಳ 3ನೇ ಬುಧವಾರವನ್ನು ವಿಶೇಷ ಘೋಷವಾಕ್ಯದೊಂದಿಗೆ ವಿಶ್ವ ಸಿಓಪಿಡಿ (ಕ್ರಾನಿಕ್ ಅಬ್ಸ್ಟ್ರ್ಯಾಕ್ಟಿವ್ ಪಲ್ಮನರಿ ಡಿಸಿಸ್) ದಿನವನ್ನಾಗಿ ಆಚರಿಸಲಾಗುತ್ತಿದ್ದು, ಬುಧವಾರ ದಿ. 20 ರಂದು “ನಿಮ್ಮ ಶ್ವಾಸಕೋಶದ ಸಾಮರ್ಥ್ಯ ತಿಳಿದುಕೊಳ್ಳಿ” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.ಹೆಚ್ಚುತ್ತಿರುವ ಮಾಲಿನ್ಯ ಮತ್ತು ಬದಲಾದ ಜೀವನ ಶೈಲಿಯಿಂದಾಗಿ, ಒತ್ತಡದ ಬದುಕಿನೊಂದಿಗೆ ಬಹಳಷ್ಟು ಜನರಲ್ಲಿ ಉಸಿರಾಟದ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿವೆ. ಅದರಲ್ಲಿ ಪ್ರಮುಖವಾಗಿ ಸಿಓಪಿಡಿ. ಇದು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಾಗಿದ್ದು, ಇದರಿಂದ ಶ್ವಾಸಕೋಶದ ಸ್ಥಿರತೆ ಕಡಿಮೆಯಾಗುತ್ತದೆ. ಸಿಗರೇಟ್, ಬೀಡಿ ಸೇದುವುದು, ಒಲೆ ಅಥವಾ ಇತರೆ ಹೊಗೆ, ವಾಯುಮಾಲಿನ್ಯ, ಆಲ್ಫಾ ಒನ್ ಆಂಟಿಟ್ರಿಪ್ಸಿನ್ ಕೊರತೆಯಿಂದ ಮತ್ತು ವಯಸ್ಸು ಹೆಚ್ಚಾದಂತೆ ಈ ಕಾಯಿಲೆ ಆವರಿಸುತ್ತದೆ.ನಾವು ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು. ಇದಕ್ಕಾಗಿ ನಾವು ನಮ್ಮ ತೂಕ, ರಕ್ತದೊತ್ತಡ, ರಕ್ತದ ಸಕ್ಕರೆ, ಕೊಲೆಸ್ಟ್ರಾಲ್, ಕಾರ್ಡಿಯೋಗ್ರಾಮ್ ಅನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸಬೇಕು. ಜೊತೆಗೆ ನಲವತ್ತು ದಾಟಿದವರು ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆಯಾದರೂ ತಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಬೇಕು. ಪಲ್ಮನರಿ ಫಂಕ್ಷನ್ ಟೆಸ್ಟ್ (ಪಿಎಫ್ಟಿ) ಇದು ಶ್ವಾಸಕೋಶದ ಸಾಮರ್ಥ್ಯವನ್ನು ಅಳೆಯಲು ಸರಳವಾದ ಗಣಕೀಕೃತ ಪರೀಕ್ಷೆಯಾಗಿದೆ.ದೀರ್ಘಕಾಲದ ಉಸಿರಾಟದ ಕಾಯಿಲೆ ಇರುವವರು ಸಹ ಡಿಎಲ್ಸಿಓ (ಕಾರ್ಬನ್ ಮಾನಾಕ್ಷೈಡ್ನ ಪ್ರಸರಣ ಸಾಮರ್ಥ್ಯ) ಪರೀಕ್ಷೆಗೆ ಒಳಗಾಗಬೇಕು. ಈ ಪರೀಕ್ಷೆಗಳು ನಿಮ್ಮ ಶ್ವಾಸ ಕೋಶದಲ್ಲಿನ ವಾಯು ಮಾರ್ಗಗಳ ಕಾರ್ಯ ನಿರ್ವಹಣೆಯನ್ನು ಅಳೆಯುತ್ತವೆ. ಜೊತೆಗೆ ಸಿಓಪಿಡಿ, ಅಸ್ತಮಾ, ಐಎಲ್ಡಿ ಅಂತಹ ಕಾಯಿಲೆಗಳ ಆಕ್ರಮಣವನ್ನು ಪತ್ತೆ ಮಾಡುತ್ತದೆ.ವಿಶೇಷವಾಗಿ ಹೊಗೆ ಮತ್ತು ಧೂಳಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವ ಅಥವಾ ಅಂಗಡಿಯವರು, ಬೀದಿ ವ್ಯಾಪಾರಿಗಳು, ಟ್ರಾಫಿಕ್ ಪೋಲೀಸ್ ಮುಂತಾದವರು ಸಿಓಪಿಡಿದ ಅಪಾಯವನ್ನು ಹೊಂದಿರಬಹುದು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ರೋಗನಿರೋಧಕ ಶಕ್ತಿ ಉತ್ತಮವಾಗಿರಬೇಕು. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ವಿಶ್ರಾಂತಿ, ವ್ಯಸನ ಮುಕ್ತ ಮತ್ತು ಒತ್ತಡಮುಕ್ತ ಜೀವನಶೈಲಿ ಎಂಬ 5 ತತ್ವಗಳನ್ನು ಅನುಸರಿಸಬೇಕು. ಮತ್ತು ಪ್ರತಿಯೊಬ್ಬರ ಆರೋಗ್ಯಕ್ಕಾಗಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು.