ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧ ಆಯ್ಕೆ ಉತ್ತಮ ಬೆಳವಣಿಗೆ: ಕಾಗೆ
ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧ ಆಯ್ಕೆ ಉತ್ತಮ ಬೆಳವಣಿಗೆ: ಕಾಗೆ
ಕಾಗವಾಡ 13: ನಮ್ಮ ದೇಶದ ಪ್ರಜಾಪ್ರಭುತ್ವ ಅತ್ಯಂತ ಶ್ರೇಷ್ಠವಾಗಿದ್ದು, ಇಲ್ಲಿ ಎಲ್ಲರಿಗೂ ಸಮಾನ ಹಕ್ಕು ನೀಡಲಾಗಿದೆ. ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಈಗ ಅವಿರೋಧವಾಗಿ ಆಯ್ಕೆಗೊಂಡಿದ್ದು, ಸಂಘದಲ್ಲಿ ರಾಜಕೀಯ ಹಾಗೂ ಚುನಾವಣೆ ನಡೆಸದೇ ಅವಿರೋಧ ಆಯ್ಕೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುತ್ತ, ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.ಅವರು ಬುಧವಾರ ದಿ.13 ರಂದು ತಾಲೂಕಿನ ಉಗಾರ ಖುರ್ದದ ತಮ್ಮ ಗೃಹ ಕಚೇರಿಯಲ್ಲಿ ತಾಲೂಕಿನ ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧ ಆಯ್ಕೆಗೊಂಡ ಅಧ್ಯಕ್ಷ ಎಸ್.ಎಸ್. ಭಾವಿ, ರಾಜ್ಯ ಪರಿಷತ್ ಸದಸ್ಯ ವಿಶಾಲ ಮಾಳವದಕರ, ತಾಲೂಕಾ ಖಜಾಂಚಿ ಬಸವರಾಜ ಕುಂಬಾರ ಇವರನ್ನು ಸನ್ಮಾನಿಸಿ, ಮಾತನಾಡುತ್ತಿದ್ದರು. ಸಮಾಜದಲ್ಲಿ ಸರ್ಕಾರಿ ನೌಕರರನ್ನು ಗೌರವದಿಂದ ಕಾಣಲಾಗುತ್ತದೆ. ಆದ್ದರಿಂದ ಸರ್ಕಾರಿ ನೌಕರರು ಮತ್ತು ಶಿಕ್ಷಕರು ಸಂಘದಲ್ಲಿ ರಾಜಕೀಯ ಮಾಡದೇ ತಮ್ಮ ಗೌರವಕ್ಕೆ ಧಕ್ಕೆ ಬಾರದಂತೆ ವರ್ತಿಸಬೇಕು. ಸಮಾಜದ ಭವಿಷ್ಯ ರೂಪಿಸುವ ಕಾರ್ಯ ನಿಮ್ಮಿಂದಾಗಬೇಕು. ಅದಕ್ಕೆ ಎಲ್ಲ ರೀತಿಯ ಸಹಕಾರ ತಾವು ನೀಡುವುದಾಗಿ ತಿಳಿಸಿದರು.ಶಿಕ್ಷಕರ ಸಂಘದ ಕಾರ್ಯದರ್ಶಿ ಕುಮಾರ ಗಾಣಿಗೇರ ಮಾತನಾಡಿ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಅವಿರೋಧ ಆಯ್ಕೆಗೆ ಶ್ರಮಿಸಿದ ಪ್ರತಿಯೊಬ್ಬರಿಗೆ ಅಭಿನಂದಿಸುತ್ತೇನೆ. ಶಾಸಕರ ಮತ್ತು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲರೂ ಒಟ್ಟಿಗೆ ಶ್ರಮಿಸೋಣ ಎಂದರು. ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ಸಂಕಪಾಳ, ಕಾರ್ಯದರ್ಶಿ ಎ.ಎನ್. ಗಾಣಿಗೇರ, ಆರ್.ಎ. ನಾಂದಣಿ, ಮಹೇಶ ಹುಲ್ಲೋಳ್ಳಿ, ಗುಲಾಬ ಮಾಂಜರೆ, ಡಿ.ಕೆ. ಹಿರೇಮಠ, ಎಸ್.ಜಿ. ಕಾಂಬಳೆ, ಡಾ. ಅಭಿನಂದನ ಪಾಟೀಲ, ಎಸ್.ಎಸ್. ಶೇಡಶ್ಯಾಳೆ, ಎಸ್.ಎಂ. ಸಂಬೋಜೆ, ಎಚ್.ಎಫ್. ಸಣ್ಣಕ್ಕಿ, ಡಿ.ಎನ್. ಸಾಂಗಾವೆ, ಎ.ಎಂ. ಮಗದುಮ್ಮ, ಎ.ಪಿ. ಮೇತ್ರಿ, ಎಸ್.ಟಿ. ನಾಂದ್ರೆ, ಎಸ್.ಡಿ. ಕುಂಬಾರ, ಎ.ಬಿ. ಕಂಬಾರ, ಎ.ಬಿ. ಖೋತ, ಎಸ್.ಎಸ್. ಕುಂಬಾರ, ಎಸ್.ಆರ್. ವಾಘಮೋರೆ, ಡಿ.ಆರ್. ವಡ್ಡರ, ಅಮರ ಭಂಡಾರೆ, ಐ.ಎಂ. ಬೇಗ, ಎ.ಜಿ. ನಸರದ್ದಿ, ಎಸ್.ಎಂ. ಸೌದಾಗರ ಸೇರಿದಂತೆ ತಾಲೂಕಿನ ಎಲ್ಲ ಸರ್ಕಾರಿ ನೌಕರರು, ಶಿಕ್ಷಕರು ಉಪಸ್ಥಿತರಿದ್ದರು.