ವೈದೂ ಸಮಾಜ ಬಾಂಧವರ ಕಾರ್ಯ ಶ್ಲಾಘನೀಯ
ಉಗಾರ ಖುರ್ದಗೆ ಕಾಮಗಾರಿ ಉದ್ಘಾಟನೆಗೆ ಆಗಮಿಸಿದ ಶಾಸಕ ಶ್ರೀಮಂತ ಪಾಟೀಲಗೆ ಕಾರ್ಯಕರ್ತರ ಭವ್ಯ ಸ್ವಾಗತ
ಶೇಡಬಾಳ 21: ಉಗಾರ ಖುರ್ದ ಪಟ್ಟಣದ ದುರ್ಗಾದೇವಿಯ ಪರಮ ಭಕ್ತರು, ದೇವಿಯ ಉಪಾಸಕರಾದ ವೈದೂ ಸಮಾಜ ಬಾಂಧವರು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನೂತನ ಮಂದಿರ ಹಾಗೂ ಸಮುದಾಯ ಭವನ ನಿರ್ಮಿಸುತ್ತಿರುವ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಅವರು ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಮಾ. 19ರಂದು ವೈದೂ ಸಮಾಜ ಬಾಂಧವರು ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ 13.90 ಲಕ್ಷ ರೂ. ಅನುದಾನ ಹಾಗೂ ಉಗಾರ ವಿವಿಧ ಕಾಮಗಾರಿಗಳಿಗಾಗಿ ಮಂಜೂರಾಗಿರುವ ಒಟ್ಟು 1.82 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಈ ಪಟ್ಟಣದಲ್ಲಿ ವೈದೂ ಸಮಾಜದವರು ಅಲ್ಪ ಸಂಖ್ಯಾತರಾಗಿ, ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದರೂ ಕೂಡಾ ದುರ್ಗಾ ದೇವಿಯ ಸೇವೆಯಲ್ಲಿ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಇದ್ದು, ಮಂದಿರ ಕಾರ್ಯವನ್ನು ಕೈಗೊಂಡು ಇತರ ಸಮಾಜದವರಿಗೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು. ಅವರ ಈ ಕಾರ್ಯಕ್ಕೆ ತಾವು ಕೂಡ ಯಾವತ್ತೂ ಸಹಾಯ ಸಹಕಾರ ನೀಡಲು ಸಿದ್ಧನಿರುವುದಾಗಿ ಭರವಸೆ ನೀಡಿದರು.
ಇದೇ ಸಮಯದಲ್ಲಿ ವೈದೂ ಸಮಾಜದ ವತಿಯಿಂದ ಶಾಸಕರನ್ನು ಮತ್ತು ಯುವ ಮುಖಂಡ ಶ್ರೀನಿವಾಸ ಪಾಟೀಲ ಅವರನ್ನು ಸನ್ಮಾನಿಸಿ, ದುರ್ಗಾ ದೇವಿಯ ಮೂರ್ತಿಯನ್ನು ಕಾಣಿಕೆಯಾಗಿ ನೀಡಿ, ಅಭಿನಂದಿಸಿದರು. ಇದಕ್ಕೂ ಮೊದಲು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ ಶಾಸಕ ಶ್ರೀಮಂತ ಪಾಟೀಲ ಮತ್ತು ಯುವ ಮುಖಂಡ ಶ್ರೀನಿವಾಸ ಪಾಟೀಲ ಅವರನ್ನು ಬೆಂಬಲಿಗರು ಪಟಾಕಿ ಸಿಡಿಸಿ, ಜೆಸಿಬಿ ಮೂಲಕ ಪುಷ್ಪವೃಷ್ಠಿ ಮಾಡಿ, ವಾದ್ಯವೃಂದಗಳೊಂದಿಗೆ ಭವ್ಯವಾಗಿ ಪಟ್ಟಣಕ್ಕೆ ಸ್ವಾಗತಿಸಿಕೊಂಡರು.
ಉಗಾರ ಖುರ್ದ ಪುರಸಭೆಯ ನಗರೋತ್ಧಾನ ಯೋಜನೆಯಡಿಯಲ್ಲಿ ಮಂಜೂರಾಗಿರುವ ಪಟ್ಟಣದಲ್ಲಿ ರೂ. 13.90 ಲಕ್ಷದ ವೈದೂ ಸಮುದಾಯ ಭವನ, ರೂ. 14.10 ಲಕ್ಷದ ಮರಾಠಾ ಸಮುದಾಯ ಭವನ, ರೂ. 10 ಲಕ್ಷದ ಶೇಖ ಸಮುದಾಯ ಭವನ, ರೂ. 10 ಲಕ್ಷದ ಕೊರವಿ ಸಮುದಾಯ ಭವನ, ರೂ. 28 ಲಕ್ಷದ ಬಸವ ನಗರದ ಅಂಬೇಡ್ಕರ್ ಭವನ, ರೂ. 15 ಲಕ್ಷದ ಭೀಮ ನಗರದ ಅಂಬೇಡ್ಕರ ಭವನ ಉನ್ನತಿಕರಣ, ರೂ. 7 ಲಕ್ಷದ ಎಸ್ಸಿ ಸಮಾಜದ ಸ್ಮಶಾನ ಭೂಮಿ ಅಭಿವೃದ್ಧಿ, ರೂ. 19.41 ಲಕ್ಷದ ಹರಳಯ್ಯ ಸಮುದಾಯ ಭವನ ನಿರ್ಮಾಣ, ರೂ. 15 ಲಕ್ಷದ ರಾಘವೇಂದ್ರ ಮಠದ ಅಭಿವೃದ್ಧಿ, ರೂ. 28.35 ಲಕ್ಷದ ಕೆಬಿಯಿಂದ ಪಂಪ್ಹೌಸ್ ವರೆಗೆ ವಿದ್ಯುತ್ ನೇರ ಸಂಪರ್ಕ ಅಳವಡಿಸುವಿಕೆ, ರೂ. 21. 25 ಲಕ್ಷದ ಅಂಕವಿಕರು ಹಾಗೂ ಸಾರ್ವಜನಿಕರಿಗೆ ಶೌಚಾಲಯ ಹೀಗೇ ಒಟ್ಟು 1.82 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲರು ಚಾಲನೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಸುನೀಲ ಬಬಲಾದಿ, ವಿಲಾಸ ಪಾಟೀಲ, ಬಿಜೆಪಿ ಬ್ಲಾಕ್ ಉಪಾಧ್ಯಕ್ಷ ರಾಕೇಶ ಪಾಟೀಲ, ಸುಜೀತ ಫರಾಕಾಟೆ, ಅಶೋಕ ಕಾಂಬಳೆ, ವಿಕ್ರಂ ಧನಗರ, ಸಚೀನ ತೊವಾರ, ಪ್ರತಾಪ ಜತ್ರಾಟೆ, ಪ್ರಫುಲ ಥೋರೂಸೆ, ದಿಗಂಬರ ಗೌಂಡಿ, ಪ್ರಕಾಶ ಥೋರೂಸೆ, ರಾಜು ಪಾಟೀಲ, ವೈದೂ ಸಮಾಜದ ಮುಖಂಡರಾದ ಗೋವಿಂದ ವೈದೂ, ಪರಸಾ ವೈದೂ, ಲಕ್ಷ್ಮಣ ಶಿರಕೆ, ಸ್ವಾಮಿ ವೈದೂ, ಧರ್ಮಾ ಶಿರಕೆ, ಕಾಟೆಪ್ಪ ಮಂಗಸೂಳೆ, ಮೋಹನ ವೈದೂ, ಸುರೇಶ ಚೌಗುಲೆ, ಇಕ್ಬಾಲ ಇನಾಮದಾರ, ಸಂಜು ವಾಘಮೋಡೆ, ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು