ಬೈಲವಾಡ ಗ್ರಾಮಕ್ಕೆ ಪ್ರಯೋಜನವಾಗದ ಜಿಲ್ಲಾಧಿಕಾರಿಗಳ ಪ್ರಥಮ ಪ್ರಾಶಸ್ತ್ಯ
ಅಸ್ವಚ್ಛತೆಯ ಆಗರ: ಗ್ರಾಪಂ.ಆಡಳಿತದ ನಿರ್ಲಕ್ಷತನದಿಂದ ಮೂಲ ಸೌಕರ್ಯಗಳು ಮರೀಚಿಕೆ
ಬೈಲಹೊಂಗಲ : ಸರ್ಕಾರ ಒಂದು ಕಡೆ ಗ್ರಾಮಿಣ ಅಭಿವೃದ್ಧಿ ಕನಸು ಕಂಡು ಜನತೆಯ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ಅರಿಯಲು ಜಾರಿಗೊಳಿಸಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಅಷ್ಟೊಂದು ಪರಿಣಾಮ ಬೀರುತ್ತಿಲ್ಲ ಎಂಬುದಕ್ಕೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮವೇ ಜ್ವಲಂತ ಸಾಕ್ಷಿಯಾಗಿದ್ದು, ಗ್ರಾಮ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಫೆಬ್ರುವರಿ ತಿಂಗಳಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಾಲೂಕಿನ ಬೈಲವಾಡ ಗ್ರಾಮಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ ಗ್ರಾಮ ಅಭಿವೃದ್ಧಿ ಕಂಡ ಕನಸು ಗ್ರಾಪಂ.ನಿರ್ಲಕ್ಷತನದಿಂದ ಸಮಸ್ಯೆಗಳ ಸರಮಾಲೆ ಎದ್ದು ಕಾಣುತ್ತಿದೆ. ಕೇವಲ ಮೇಲಾಧಿಕಾರಿಗಳು ಬಂದಾಗ ಮಾತ್ರ ರಸ್ತೆ, ಗಟಾರು, ವಸತಿ ನಿಲಯಗಳು ಹಗಲು ರಾತ್ರಿಯನ್ನದೇ ಕೆಲಸ ನಿರ್ವಹಿಸಿ ಮೇಲಾಧಿಕಾರಿಗಳಿಂದ ಪ್ರಶಂಸಗೆ ಪಾತ್ರರಾಗಿ ಅವರು ಮತ್ತೆ ತೆರಳಿದ ಮೇಲೆ ಗ್ರಾಮ ಅದೇ ರಾಗ ಅದೇ ಹಾಡು ಎನ್ನುವಂತಾಗಿದೆ.
ಗ್ರಾಮದಲ್ಲಿ ನೂತನ ಯೋಜನೆಯ ಈ ಕಾರ್ಯಕ್ರಮ ಹಮ್ಮಿಕೊಂಡಾಗ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಜಿಲ್ಲಾಧಿಕಾರಿಯೇ ಮನೆ ಬಾಗಿಲಿಗೆ ಬಂದು ಸಮಸ್ಯೆಗಳನ್ನು ಆಲಿಸುತ್ತಾರೆಂದರೆ ಸ್ವರ್ಗವೇ ಧರೆಗಿಳಿದಂತೆ ಅವರಿಗೆ ಭಾಸವಾಗಿತ್ತು. ಆದರೆ ಆಡಳಿತದ ನಿರಾಸಕ್ತಿಯಿಂದ ಗ್ರಾಮ ಮೊದಲು ಹೇಗಿತ್ತೋ ಈಗಲೂ ಹಾಗೆಯೇ ಇದ್ದು ಮೂಲ ಸೌಕರ್ಯಕ್ಕಾಗಿ ಗ್ರಾಮಸ್ಥರು ಹೆಣಗಾಡಬೇಕಾಗಿದೆ.
ಜನರು ಸಮಸ್ಯೆಗಳ ಜೊತೆ ಬದುಕು ನಡೆಸುತ್ತಿರುವ ಗ್ರಾಮದ ರಸ್ತೆಗಳು ಮಳೆಗಾಲದಲ್ಲಿ ಕೆಸರು ತುಂಬಿ ಗಬ್ಬೆದ್ದು ನಾರುತ್ತಿದ್ದರೂ ಸ್ವಚ್ಛತೆಗೆ ಅದ್ಯತೆ ಸಿಕ್ಕಿಲ್ಲ. ಕೇವಲ ಕಾಗದ, ಭಾಷಣಗಳಲ್ಲಿ ಮಾತ್ರ ಅದ್ಯತೆ ಸಿಕ್ಕಿದೆ ಎಂದು ಗ್ರಾಮಸ್ಥರು ವಲಯದಿಂದ ಕೇಳಿ ಬರುತ್ತಿದೆ. ಪರ ಊರುಗಳಿಗೆ ತೆರಳಲು ನಿರ್ಮಿಸಿದ ಬಸ್ ತಂಗುದಾನದಲ್ಲಿ ಅಸ್ವಚ್ಚತೆಯಿಂದ ಬರುವ ಪ್ರಯಾಣಿಕರನ್ನು ಸ್ವಾಗತಿಸಿ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಇದೆ ಎನ್ನಲಾಗಿದೆ. ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಭಾಂವಿಯನ್ನು ಸ್ವಚ್ಚಗೊಳಿಸದ ಕಾರಣ ಇಲ್ಲಿಯ ಪರಿಸರ ದುರ್ಗಂಧಮಯವಾಗಿದ್ದು, ತಂತಿ ಬೇಲಿ ಹಾಕದ ಕಾರಣ ಅಪಾಯಕ್ಕೆ ಆವ್ಹಾನ ನೀಡುವಂತಿದೆ. ಗ್ರಾ.ಪಂ. ಹತ್ತಿರದಲ್ಲೇ ಇರುವ ಪಾಟೀಲರ ಓಣಿಯಲ್ಲಿರುವ ವಿದ್ಯುತ ಕಂಬವನ್ನು ಹೆಸ್ಕಾಂ ಇಲಾಖೆಯವರು ನಡು ಬೀದಿಯಲ್ಲೇ ನಿರ್ಮಿಸಿದ್ದರಿಂದ ಜನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಅತೀ ಮಳೆ ಬಂದರೆ ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸರಕಾರಿ ಆಯುರ್ವೇದ ಚಿಕಿತ್ಸಾಲವು ಸಂಪೂರ್ಣ ನಡುಗಡ್ಡೆಲ್ಲಿದ್ದಂತೆ ಆಗುತ್ತಿದ್ದು, ಅಲ್ಲಿನ ಸೇವೆಗೆ ವ್ಯತ್ಯಯ ಉಂಟಾಗುತ್ತಿದ್ದು ಈ ಕುರಿತು ಗ್ರಾ.ಪಂ. ಅಧಿಕಾರಿಗಳಿಗೆ ತಿಳಿಸದರೂ ಕ್ಯಾರೇ ಎಂದಿಲ್ಲ. ಗ್ರಾಮದಲ್ಲಿರುವ ಹಲವಾರು ಕಿರು ನೀರು ಸರಬರಾಜು ಟ್ಯಾಂಕುಗಳ ಪರಿಸರದಲ್ಲಿ ಅಶುಚಿತ್ವ ತಾಂಡವಾಡುತ್ತಿರುವದರಿಂದ ನಿತ್ಯ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಮದ ಜನರ ಆರೋಗ್ಯದ ಹಿತದೃಷ್ಟಿಯಿಂದ ಪ್ರಾರಂಬಿಸಲಾದ ನೇಸರಗಿ ರಸ್ತೆಯಲ್ಲಿನ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪ ಕೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಗಿಡಗಂಟಿಗಳು ಬೆಳೆದಿದ್ದು ಹುಳು ಹುಪ್ಪಡಿಗಳ ತಾಣವಾಗಿ ಗೋಚರವಾಗಿದ್ದು ಅನಾರೋಗ್ಯ ಉಂಟಾದಾಗ ಬೈಲಹೊಂಗಲನ್ನೇ ಅವಲಂಬಿತರಾಗಿದ್ದಾರೆ.
ಒಂದೆಡೆ ಸುಕ್ಷೇತ್ರ ವರ್ತಿ ಸಿದ್ದಬಸವೇಶ್ವರ ಪವಿತ್ರ ತಾಣದಿಂದ ಹೆಸರು ಹೊಂದಿದ ಬೈಲವಾಡ ಗ್ರಾಮವು ಸರಕಾರದ ಸೌಲಭ್ಯಗಳಿಂದ ವಿಮುಖವಾಗಿ ಗ್ರಾಮ ವಾಸ್ತವ್ಯ ಹೂಡಿ ಸ್ವತ:ಹ ಜಿಲ್ಲಾಧಿಕಾರಿಗಳೇ ಗ್ರಾಮ ದರ್ಶನ ಮಾಡಿ ಸಮಸ್ಯೆಗಳನ್ನೇ ಸಾಕ್ಷಾತ ಕಂಡು ಪರಿಹರಿಸಲು ಆಶ್ವಾಸನೆ ನೀಡಿದ್ದರೂ ಅವೆಲ್ಲ ಗಾಳಿ ಗೋಪುರವಾಗಿವೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಜಿಲ್ಲಾ ಆಡಳಿತವೇ ಬೈಲವಾಡಕ್ಕೆ ಬಂದಾಗ ಜನ ಸ್ಪಂದನದಲ್ಲಿ ಗ್ರಾಮೋದ್ಧಾರದ ಹಲವಾರು ವಿಷಯಗಳು ಚರ್ಚಿತವಾಗಿ ಸಾಕಷ್ಟು ಸಮಸ್ಯಗಳ ಮಹಾಪೂರವೇ ಹರಿದು ಬಂದು ಇತ್ಯರ್ಥಕ್ಕಾಗಿ ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿತ್ತು. ಆದರೆ ಗ್ರಾ.ಪಂ. ಅಧಿಕಾರಿಗಳು ಅದೊಂದು ದಿನ ಮಾತ್ರ ಊರನ್ನು ಶ್ರಂಗರಿಸಿದ್ದನ್ನು ಬಿಟ್ಟರೆ ನಂತರದ ದಿನಗಳಲ್ಲಿ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ನಗೆಪಾಟಲಿಗೆ ಗ್ರಾಮವು ಈಡಾಗುತ್ತಿದೆ.
ಒಟ್ಟಾರೆ ಸರಕಾರ ಜಾರಿ ತಂದ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಅನ್ನುವ ಮಹಾತ್ವಾಕಾಂಕ್ಷೆಯ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗಬೇಕಾದರೆ ಜಿಲ್ಲಾ ಆಡಳಿತ ಗ್ರಾಮ ವಾಸ್ತವ್ಯ ಹೂಡಿದ್ದ ಹಳ್ಳಿಗಳ ಬಗ್ಗೆ ಸದಾ ನಿಗಾವಹಿಸಿ ಅಭಿವೃದ್ದಿಗಾಗಿ ಆಡಳಿತಕ್ಕೆ ಚುರುಕು ಮುಟ್ಟಿಸಿದಾಗ ಮಾತ್ರ ಗಾಂಧೀಜಿ ಕಂಡ ಗ್ರಾಮ ಸ್ವರಾಜ ಕನಸು ನನಸಾಗಲು ಸಾಧ್ಯವಾಗುತ್ತದೆ.
ಈಗಾಗಲೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಮುಂದೆ ಹಂತ ಹಂತವಾಗಿ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವದು.
- ಎಸ್.ಕೆ.ಪೂಜೇರ, ಪ್ರಭಾರಿ ಪಿಡಿಓ ಬೈಲವಾಡ
ಸಮಸ್ಯೆಗಳ ಕುರಿತು ಪಿಡಿಓ ಗಮನಕ್ಕೆ ತಂದರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.ಕೇವಲ ಮಾತಿನ ಭರವಸೆಯಲ್ಲೇ ಅಭೀವೃದ್ದಿ ಕಾಣುವಂತಾಗಿದೆ.
ಪ್ರವೀಣ ಬೋಳಗೌಡ್ರ, ಪ್ರವೀಣ ಮದ್ನಳ್ಳಿ ನಾಗರಿಕರು, ಬೈಲವಾಡ
ಯರಡಾಲ ಗ್ರಾಮವನ್ನು ಬೈಲಹೊಂಗಲ ಮತಕ್ಷೇತ್ರಕ್ಕೆ ಸೇರಿಸಲು ಮೇಲಾಧಿಕಾರಿಗಳು ಕೂಡಲೇ ಸ್ಪಂದಿಸಬೇಕು.
ಶ್ರೀಶೈಲಗೌಡಾ ಎಂ.ಪಾಟೀಲ
ಗ್ರಾ.ಪಂ.ಸದಸ್ಯರು, ಯರಡಾಲ