ಜಮಖಂಡಿ

ಶಿಕ್ಷಕರು ಪ್ರತಿಪಾದಿಸುವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಹಿರೇಮಠ

ಶಿಕ್ಷಕರು ಪ್ರತಿಪಾದಿಸುವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಹಿರೇಮಠ
ಜಮಖಂಡಿ ನಗರದ ಬಸವಜ್ಯೋತಿ ಪದವಿಪೂರ್ವ ಕಾಲೇಜಿಗೆ ಸೌಹಾರ್ದಯುತ ಭೇಟಿ ನೀಡಿದ ಕರ್ನಾಟಕ ಸರ್ಕಾರದ ಕಾನೂನು ಇಲಾಖೆಯ ಪ್ರಧಾನ

ಲೋಕದರ್ಶನ ವರದಿ,

ಜಮಖಂಡಿ14: ಬುದ್ಧಿ ಹೇಳುವ ಪೋಷಕರನ್ನು ಹಾಗೂ ಶಿಕ್ಷಕರನ್ನು ವೈರಿಗಳಂತೆ ಕಾಣಬಾರದು. ಸತ್ಯಕ್ಕಾಗಿ ಮತ್ತು ಮೌಲ್ಯಕ್ಕಾಗಿ ಮಾಡಿದ ಶ್ರಮ ತಡವಾಗಿಯಾದರೂ ಬೆಳಕಿಗೆ ಬರುತ್ತದೆ. ಆದ್ದರಿಂದ ಜೀವನದಲ್ಲಿ ಪೋಷಕರು ಹಾಗೂ ಶಿಕ್ಷಕರು ಪ್ರತಿಪಾದಿಸುವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರದ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ  ಪ್ರಭಾವತಿ ಎಂ. ಹಿರೇಮಠ ಹೇಳಿದರು.

ನಗರದ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿಗೆ ಅವರು ಸೌಹಾರ್ದಯುತ ಭೇಟಿ ನೀಡಿದ ಸಂದರ್ಭದಲ್ಲಿ ಕಾಲೇಜು ನೀಡಿದ ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿ  ಜೀವನದ ಪರೀಕ್ಷೆಗಳಲ್ಲಿ ಅಂಕ ಗಳಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳು ಬೇಕು. ಆದರೆ, ನಿಜವಾದ ಬದುಕಿನಲ್ಲಿ ಅಂಕಗಳು ಪ್ರಮುಖವಾಗುವುದಿಲ್ಲ. ಹಾಗಾಗಿ ಪರೀಕ್ಷೆಯಲ್ಲಿ ಅಂಕಗಳು ಬಾರದಿದ್ದರೆ ಜೀವನವೇ ಹೋಯಿತು ಎಂಬ ಭಾವನೆ ಬೇಡ. ಜೀವನದ ನಿರ್ಣಾಯಕ ಘಟ್ಟದಲ್ಲಿರುವ ಪಿಯುಸಿ ವಿದ್ಯಾರ್ಥಿಗಳು ಭವಿಷ್ಯದ ನಾಯಕರಾಗುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.

ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆಯ ಸಂಸ್ಕಾರ ಮತ್ತು ಶಿಕ್ಷಕರು ಕೊಡುವ ಸಂಸ್ಕಾರ ಬಹಳ ಮುಖ್ಯ. ಸರಿ-ತಪ್ಪುಗಳನ್ನು ನಿರ್ಧರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ  ಶಕುಂತಲಾ ಕಡ್ಡಿ ಇದ್ದರು. ಕೀರ್ತಿ  ಪಾಟೀಲ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಡಾ.ಮಹಾದೇವ ಕುಂಬಾರ ನಿರೂಪಿಸಿದರು. ಉಪನ್ಯಾಸಕ ಪಿ.ಎನ್. ವಜ್ರಮಟ್ಟಿ ವಂದಿಸಿದರು.



ಸುದ್ದಿ ಓದಿ