ರಾಜ್ಯ ಸರ್ಕಾರ ಹಾವೇರಿ ಜಿಲ್ಲೆ ಬರಗಾಲ ಘೋಷಣೆ ಸ್ವಾಗತಾರ್ಹ: ಸುರೇಶ ಹೊನ್ನಪ್ಪನವರ
ಲೋಕದರ್ಶನ ವರದಿ
ರಾಣೇಬೆನ್ನೂರು 18: ರಾಜ್ಯ ಸರ್ಕಾರವು ಹಾವೇರಿ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಿಸಿರುವ ಕ್ರಮವನ್ನು ಸ್ವಾಗತಾರ್ಹವಾಗಿದೆ ಎಂದು ಸ್ವಾಗತಿಸಿರುವ ರೈತ ಸಂಘದ ತಾಲೂಕ ಅಧ್ಯಕ್ಷ ಸುರೇಶ ಹೊನ್ನಪ್ಪನವರ್ ಅವರು ಸರ್ಕಾರಕ್ಕೆ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.ರವಿವಾರ ಈ ಕುರಿತು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಸಂಘದ ಮುಖಂಡರ, ಹಾಗೂ ಕಾರ್ಯಕರ್ತರ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
ಹಾವೇರಿ ಜಿಲ್ಲೆ ಸಂಪೂರ್ಣ ಬರಗಾಲ ಪ್ರದೇಶವಾಗಿದೆ ಆದರೆ ಸರಕಾರ ಬ್ಯಾಡಗಿ ಹಾನಗಲ್ ಶಿಗ್ಗಾಂವಿ ಈ ಮೂರು ತಾಲೂಕುಗಳನ್ನು ಹೊರತುಪಡಿಸಿರುವುದು ಘೋಷಣೆ ಮಾಡಿರುವುದು ಸರ್ಕಾರದ ನೀತಿ ಖಂಡನೀಯವಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಈ ಮೂರು ತಾಲೂಕುಗಳನ್ನು ಸರ್ಕಾರವು ಘೋಷಿಸಿರುವ ಬರಗಾಲ ಪಟ್ಟಿಯಲ್ಲಿ ಪರಿಗಣಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ರೈತ ಸಂಘಟನೆ ಇದಕ್ಕಾಗಿ ಮತ್ತೆ ಧರಣಿ ಪ್ರತಿಭಟನೆ ಹೋರಾಟಕ್ಕೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸರ್ಕಾರ ರಾಜ್ಯದ ಜನರಿಗೆ ಚುನಾವಣೆ ಪೂರ್ವದಲ್ಲಿ ನೀಡಿದ ಐದು ಗ್ಯಾರಂಟಿಗಳನ್ನು ನೀಡಿದೆ. ನುಡಿದಂತೆ ನಡೆದಿದೆ ಆದರೆ ದೇಶಕ್ಕೆ ಅನ್ನ ನೀಡುವ ರೈತನ ಬಗ್ಗೆ ಈ ತಾರತಮ್ಯ ಮತ್ತು ಮಲತಾಯಿ ಧೋರಣೆ ಯಾಕೆ? ಎಂದು ಪ್ರಶ್ನಿಸಿರುವ ಹೊನ್ನಪ್ಪನವರ, ರೈತರ ಕಡೆಗಣಿಸಿದ ಯಾವುದೇ ಸರ್ಕಾರಗಳು ಬಹು ವರ್ಷಗಳ ಕಾಲ ಆಡಳಿತ ನಡೆಸಿದ ಉದಾಹರಣೆ ಇಲ್ಲ ಕೂಡಲೇ ಸಿದ್ದರಾಮಯ್ಯನವರು ರಾಜ್ಯದ ರೈತರ ಬಗ್ಗೆ ಮೃದು ಧೋರಣೆ ಅನುಸರಿಸಿ, ಬರಗಾಲ ಘೋಷಣೆಯಿಂದ ಹೊರಗಿಟ್ಟಿರುವ ರಾಜ್ಯದ ಎಲ್ಲಾ ತಾಲೂಕುಗಳನ್ನು ಪುನಃ ಪರಿಶೀಲಿಸಲು ಮುಂದಾಗಬೇಕು ಎಂದು ರೈತರು ಓಕ್ಕೂರಲವಾಗಿ ಆಗ್ರಹಿಸಿದರು. ಮಹತ್ವದ ಸಭೆಯ ಮುಂಚೂಣಿಯಲ್ಲಿ ಉಪಾಧ್ಯಕ್ಷ, ಹನುಮಂತರೆಡ್ಡಿ ಬೆಳವಗಿ, ಹುಚ್ಚಪ್ಪ ಅಂತರವಳ್ಳಿ, ಮಾರುತೆಪ್ಪ ಮೀನ ಕಟ್ಟೆ, ಫಕಿರ ಗೌಡ ಬೊದಾಳ, ಲೋಕೇಶ್ ಸುತಾರ, ಕೆ ಎನ್ ದೊಡ್ಡಗೌಡ್ರು ವೀರಭದ್ರ ಕೊಟ್ಟೂರು, ಮಲ್ಲಪ್ಪ ಗೌಡ್ರು ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ರೈತರು ಪಾಲ್ಗೊಂಡಿದ್ದರು