ಧಾರವಾಡ - ಹುಬ್ಬಳ್ಳಿ

ಅಮ್ಮಿನಬಾವಿಯಲ್ಲ್ಲಿ ಶ್ರೀವಿನಾಯಕ ಮೂರ್ತಿ ಪ್ರತಿಷ್ಠಾಪನೆಗೈದ ಅಭಿನವ ಶಾಂತಲಿಂಗ ಶ್ರೀಗಳ ನುಡಿ

ಅಮ್ಮಿನಬಾವಿಯಲ್ಲ್ಲಿ ಶ್ರೀವಿನಾಯಕ ಮೂರ್ತಿ ಪ್ರತಿಷ್ಠಾಪನೆಗೈದ ಅಭಿನವ ಶಾಂತಲಿಂಗ ಶ್ರೀಗಳ ನುಡಿ

 ಅಮ್ಮಿನಬಾವಿಯಲ್ಲ್ಲಿ ಶ್ರೀವಿನಾಯಕ ಮೂರ್ತಿ ಪ್ರತಿಷ್ಠಾಪನೆಗೈದ ಅಭಿನವ ಶಾಂತಲಿಂಗ ಶ್ರೀಗಳ ನುಡಿ 

ಧಾರವಾಡ 04 : ಹಳ್ಳಿ ಇಲ್ಲವೇ ನಗರಗಳಲ್ಲಿ ನಿರ್ಮಾಣಗೊಳ್ಳುವ ದೇವಾಲಯಗಳು ಜನವಿರೋಧಿ ಕೃತ್ಯಗಳ ತಾಣಗಳಾಗದೇ ಅವೆಲ್ಲವೂ ಅಲ್ಲಿರುವ ದೈವ ಸನ್ನಿಧಾನದ ಸ್ಮರಣೆಯೊಂದಿಗೆ ನಿರಂತರ ಜನಮನದಲ್ಲಿ ಸಾತ್ವಿಕ ಸತ್ಯ-ಶುದ್ಧ ಚೈತನ್ಯ ಶಕ್ತಿ ತುಂಬುವ ಶೃದ್ಧಾ ಭಕ್ತಿಯ ಕೇಂದ್ರಗಳಾಗಬೇಕೆಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಲಹೆ ಮಾಡಿದರು.  

ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದ ದೊಡ್ಡೋಣಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ದೇವಾಯದಲ್ಲಿ ಸೋಮವಾರ ಶ್ರೀವಿನಾಯಕನ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ದೇವಾಲಯಗಳ ನಿರ್ಮಾಣದ ಉದ್ದೇಶವನ್ನು ಸರ್ವರೂ ಅರ್ಥಮಾಡಿಕೊಂಡು ಅಲ್ಲಿಯ ಪರಿಸರದ ಸ್ವಚ್ಛತೆಗೆ ಸಹಕರಿಸಬೇಕು.  ಒಂದು ವರ್ಷದಲ್ಲಿ ದೇವಾಲಯದ ಮೂಲಕ ವಿವಿಧ ಸಮಾರಂಭಗಳನ್ನು ಹಮ್ಮಿಕೊಂಡು ಜನತೆಗೆ ಧರ್ಮದ ನೀತಿ, ತತ್ವ, ಬದುಕಿನ ಮಹತ್ವವನ್ನು ತಿಳಿಸಿಕೊಡುವ ಜೊತೆಗೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುವಲ್ಲಿ ಎಲ್ಲರೂ ಚಿಂತನೆ ಮಾಡಬೇಕು ಎಂದೂ ಅಭಿನವ ಶಾಂತಲಿಂಗ ಶ್ರೀಗಳು ಹೇಳಿದರು.  

ಗುರುನಮನ : ಧರ್ಮ ಸಮಾರಂಭದಲ್ಲಿ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ದೇವಾಲಯದ ಪರವಾಗಿ ಸನ್ಮಾನಿಸಿ ಗುರುನಮನ ಸಲ್ಲಿಸಲಾಯಿತು. ಬಿ.ಸಿ. ಕೊಳ್ಳಿ, ಎಂ.ವ್ಹಿ. ಹೊಸೂರ, ಚಂಬಣ್ಣ ಉಂಡೋಡಿ, ಎಂ.ಸಿ. ಹುಲ್ಲೂರ, ನಿಂಗಪ್ಪ ಮಾದಿಗ್ಗೊಂಡ, ಅಣ್ಣಪ್ಪ ವಾಡಕರ, ಆನಂದ ಸವದತ್ತಿ, ಮಲ್ಲಪ್ಪ ಮೇಟಿ, ಧರ್ಮಪ್ಪ ಉಂಡೋಡಿ, ಸೋಮಪ್ಪ ಬಾರಕೇರ, ಸುನೀಲ ಗುಡಿ, ಶಂಕರ ರಾಘೂನವರ ಇದ್ದರು. ರಾಜಕೀಯ ನಾಯಕರುಗಳಾದ ಅಮೃತ ದೇಸಾಯಿ, ಶಿವಲೀಲಾ ಕುಲಕರ್ಣಿ, ಸೀಮಾ ಮಸೂತಿ, ಅವಿತಾ ಅಮರಶೆಟ್ಟಿ, ತವನಪ್ಪ ಅಷ್ಟಗಿ, ದೀಪಕ ಪವಾರ ಅವರು ಆಗಮಿಸಿ ಶ್ರೀವಿನಾಯಕನ ದರ್ಶನಾಶೀರ್ವಾದ ಪಡೆದರು.  

ಪ್ರಾಣ ಪ್ರತಿಷ್ಠಾಪನೆ : ನೂತನವಾಗಿ ನಿರ್ಮಿಸಿದ್ದ ಶ್ರೀವಿನಾಯಕನ ಶಿಲಾ ವಿಗ್ರಹದ ಶುದ್ಧೀಕರಣ ಕೈಂಕರ್ಯ ಕಳೆದ ಒಂದು ತಿಂಗಳಿಂದ ನಡೆದಿದ್ದು, ಜಲಾದಿವಾಸ, ಧಾನ್ಯಾದಿವಾಸ, ವಸ್ತ್ರಾದಿವಾಸ, ತೈಲಾದಿವಾಸ ಮುಂತಾದವುಗಳನ್ನು ನಡೆಸಲಾಯಿತು. ಸೋಮವಾರ ಪ್ರಾತಃಕಾಲದಲ್ಲಿ ಶ್ರೀಸೋಮಲಿಂಗಶಾಸ್ತ್ರಿ ಗುಡ್ಡದಮಠ ಅವರ ವೈದಿಕತ್ವದಲ್ಲಿ ಉಮಾ ಮಹೇಶ್ವರ ಪೂಜೆ, ಕ್ಷೀರಾಭಿಷೇಕ, ಏಕಾದಶ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಾಸ್ತು ಹೋಮ, ಗಣ ಹೋಮ, ನವಗ್ರಹ ಶಾಂತಿ ಹೋಮಗಳು ನಡೆದ ನಂತರ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಶ್ರೀವಿನಾಯಕನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿದರು.  






ಸುದ್ದಿ ಓದಿ